ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಮನುಷ್ಯ ಶಾಂತಿ ಸಮಾಧಾನ ಪ್ರೀತಿ ಸೌಹಾರ್ದತೆಯನ್ನು ಮೈಗೂಡಿಸಿಕೊಂಡರೆ ಇನ್ನಷ್ಟು ಸಮಾಜವನ್ನು ಗಟ್ಟಿಗೊಳಿಸಲು ಸತ್ಕಾರ್ಯ ಮಾಡಲು ಸಹಾಯವಾಗುತ್ತದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ 5ನೇ ದಿನದ ಕಾರ್ಯಕ್ರಮದ ದಿವ್ಯ ಸಾನ್ನಿದ್ಯ ವಹಿಸಿ ಮಾತನಾಡಿದರು.
ಗೋಸುಂಬೆಯಂತೆ ಬಣ್ಣ ಬದಲಾಯಿಸದೆ ಸತ್ಯದ ಹಾದಿಯಲ್ಲಿ ನಡೆಯುವಂತೆ ನಮ್ಮ ಆತ್ಮವನ್ನು ಕೇಳಿಕೊಳ್ಳಬೇಕು. ಸುಳ್ಳು ಸತ್ಯಕ್ಕಿಂತ ಹೆಚ್ಚು ಪ್ರಭಾವಿ. ಸುಳ್ಳು ಹೇಳುವುದರಲ್ಲಿ ಸ್ವಾಮಿಗಳು ಹೊರತಾಗಿಲ್ಲ. ಕಲ್ಯಾಣದಲ್ಲಿ ಎಲ್ಲರಲ್ಲೂ ಪ್ರಶ್ನಿಸುವ ಗುಣವಿತ್ತು ಇಂದು ಕೂಡ ಎಲ್ಲರಲ್ಲೂ ಪ್ರಶ್ನಿಸುವ ಗುಣವನ್ನು ಎಲ್ಲರೂ ಹೊಂದಬೇಕು. ವ್ಯಕ್ತಿ ನೋಡಿ ಸ್ಥಾನ ಮಾನ ನೀಡುವುದಲ್ಲ ಆತನ ವ್ಯಕ್ತಿತ್ವ ನೋಡಿ ಸ್ಥಾನಮಾನ ನೀಡಿದಾಗ ಮಾತ್ರ ಸಂಸ್ಕಾರ ಹೊಂದಲು ಸಾಧ್ಯ ಎಂದರು.ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರ ಬಸವಣ್ಣ ನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಅದರಂತೆ ಕೇಂದ್ರ ಸರ್ಕಾರವು ಭಾರತದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಿ ಈ ನಿಟ್ಟಿನಲ್ಲಿ ಬಿಜೆಪಿ ನಾಯಕರು ಪ್ರಯತ್ನಿಸಲಿ ಎಂದರು.
ಗದುಗಿನ ಸಿದ್ದು ಯಾಪಲಪರವಿ ಧರ್ಮ-ಸಂಸ್ಕೃತಿ-ಸಂಸ್ಕಾರ ಕುರಿತು ಉಪನ್ಯಾಸ ನೀಡಿ, ರಾಜಕೀಯ ಶಕ್ತಿ, ಮಠ, ಸಾಮಾಜಿಕ ವ್ಯವಸ್ಥೆಯನ್ನು ಪ್ರಶ್ನೆ ಮಾಡುವ ನೈತಿಕ ಶಕ್ತಿಯನ್ನು ಪಡೆಯಬೇಕಾದರೆ ಮತ್ತೆ ಬಸವ ಸಂಸ್ಕೃತಿ ತನ್ನ ಕಾಲ ಘಟ್ಟವನ್ನು ಮೆರೆಯಬೇಕಿದೆ. ಇಂದು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ರಾಜಕಾರಣ ಬಲಪಂತೀಯವಾದದ ಕಡೆ ವಾಲಿದೆ. ನಾವು ರಾಜಕಾರಣಿಗಳ ಹಿಪೋಕ್ರೇಟೀವ್ ವ್ಯವಸ್ಥೆಯಲ್ಲಿದ್ದೇವೆ. ರಾಜಕಾರಣಿಗಳು ಮಠಕ್ಕೆ ಬಂದು ಸ್ವಾಮಿಗಳ ಆಶೀರ್ವಾದ ಪಡೆಯುತ್ತಿದ್ದ ಕಾಲವೂ ಇತ್ತು ಆದರೆ ಇಂದು ಸಚಿವರ ಕಚೇರಿಗಳ ಬಾಗಿಲಲ್ಲಿ ಮಠಾಧೀಶರು ಓಡಾಡುವುದನ್ನು ಕಾಣುತ್ತೇವೆ. ಅಲ್ಲದೆ ಅನುದಾನ ಕೊಡುವಂತೆ ವಿಧಾನಸೌಧದಲ್ಲಿ ಸುತ್ತಾಡುವ ಸ್ವಾಮಿಗಳು ಹೆಚ್ಚಿದ್ದಾರೆ ಇದರಿಂದ ನೈತಿಕ ಸ್ಥೈರ್ಯ ಕುಗ್ಗಿದೆ ಎಂದರು.ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಸಮಾಜದ ಕನ್ನಡಿ ರಂಗಭೂಮಿ. ನಮ್ಮ ಅಂಕುಡೊಂಕುಗಳನ್ನು ತಿದ್ದಿಕೊಳ್ಳುವ ಸಲುವಾಗಿ ಕನ್ನಡಿ ನೋಡಿಕೊಳ್ಳುತ್ತೇವೆ. ಹೀಗೆಯೇ ಸಮಾಜದ ಓರೆಕೋರೆಗಳನ್ನು ಸ್ವಚ್ಛ ಮಾಡಿಕೊಳ್ಳಲು ಇಂತಹ ಕನ್ನಡಿಯ ಅವಶ್ಯಕತೆಯಿದೆ. ಬದಲಾವಣೆ ಮೊದಲು ನಮ್ಮಿಂದ ಆಗಬೇಕು. ನಮ್ಮ ಮಕ್ಕಳಿಗೆ ನಾವೇ ಮಾದರಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಎಂಎಲ್‌ಸಿ ಕೆ.ಎಸ್.ನವೀನ್, ಎಂಎಲ್‌ಸಿ ಡಾ.ಧನಂಜಯ ಸರ್ಜಿ, ತರೀಕೆರೆ ಮಾಜಿ ಶಾಸಕ ಡಿ.ಎಸ್.ಸುರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ನೀಲಮ್ಮ, ತುಮ್ಕೋಸ್ ಅಧ್ಯಕ್ಷ ಎಚ್.ಎಸ್.ಶಿವಕುಮಾರ ಭಾಗವಹಿಸಿದ್ದರು.ಪ್ರಾರಂಭದಲ್ಲಿ ಸಾಣೇಹಳ್ಳಿಯ ಶಿವಕುಮಾರ ರಂಗಪ್ರಯೋಗ ಶಾಲೆಯ ಕಲಾವಿದರು ನೃತ್ಯರೂಪಕ ನಡೆಸಿಕೊಟ್ಟರು. ಶಿವಸಂಚಾರದ ನಾಗರಾಜ್, ಜ್ಯೋತಿ, ದಾಕ್ಷಾಯಿಣಿ ಶರಣ್ ಕುಮಾರ್ ವಚನಗಾಯನ ನಡೆಸಿಕೊಟ್ಟರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖರ ಗೌಡ ಮಾಲೀ ಪಾಟೀಲ ಅವರನ್ನು ಅಭಿನಂದಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಡಾ.ಡಿ.ವಿಜಯ ಭಾಸ್ಕರ್ ರಚನೆಯ ಮೈಕೋ ಶಿವಣ್ಣ ನಿರ್ದೇಶನದ ಗಾಂಧಿ ಜಯಂತಿ ಎಂಬ ನಾಟಕವನ್ನು ಬೆಂಗಳೂರಿನ ರೂಪಾಂತರದ ಕಲಾವಿದರು ಅಭಿನಯಿಸಿದರು.
;Resize=(128,128))
;Resize=(128,128))
;Resize=(128,128))