ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ
ಸಾಗರವನ್ನು ಜಿಲ್ಲೆಯಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಸಾಗರ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಗುರುವಾರದಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭವಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಟಾಕಪ್ಪ ಕಣ್ಣೂರು ಅವರಿಗೆ ಸನ್ಮಾನಿಸುವ ಮೂಲಕ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಯಿತು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಿ. ಟಾಕಪ್ಪ, ಸಾಗರ ಜಿಲ್ಲೆಯಾಗಲು ಎಲ್ಲ ಅರ್ಹತೆ ಹೊಂದಿದ ಉಪಕೇಂದ್ರವಾಗಿದೆ. ಸಾಗರ ಜಿಲ್ಲೆ ಮಾಡಿ ಎಂದು ಕೇಳುವುದು ನಮ್ಮ ಹಕ್ಕು. ಸಾಗರ ಉಪವಿಭಾಗೀಯ ಕೇಂದ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಕಲೆ, ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯವಾಗಿ ಶ್ರೇಷ್ಠತೆಯನ್ನು ಹೊಂದಿದೆ. ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ವಾಣಿಜ್ಯ ವಿಭಾಗದಲ್ಲಿ ಸಹ ಸೂಕ್ತ ಸ್ಥಳವಾಗಿರುವ ಸಾಗರ ಜಿಲ್ಲೆ ಮಾಡಿದರೆ ರಾಜ್ಯ ಮತ್ತು ಕೇಂದ್ರಕ್ಕೆ ಕೀರ್ತಿ ತರುತ್ತದೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಬಿ.ಆರ್.ಜಯಂತ್ ಮಾತನಾಡಿ, ಮಲೆನಾಡು ಪ್ರದೇಶ ಭೌಗೋಳಿಕವಾಗಿ ವಿಸ್ತೀರ್ಣವಾಗಿದ್ದು, ಜನಸಂಖ್ಯೆ ದೃಷ್ಟಿಯಿಂದ ಕಡಿಮೆ ಇದೆ. ಸುಮಾರು ೧೩೦ ಕಿ.ಮೀ. ವ್ಯಾಪ್ತಿಯನ್ನು ಸಾಗರ ತಾಲೂಕು ಹೊಂದಿದೆ. ಕೊಡುಗು ಐದು ತಾಲೂಕು ಸೇರಿ ಒಂದು ಜಿಲ್ಲೆಯಾದರೆ, ರಾಮನಗರ ನಾಲ್ಕು ತಾಲೂಕು ಸೇರಿ ಒಂದು ಜಿಲ್ಲೆ ಮಾಡಲಾಗಿದೆ. ಭೌಗೋಳಿಕ ವಿಸ್ತೀರ್ಣವನ್ನು ಮನಗಂಡು ಸಾಗರವನ್ನು ಜಿಲ್ಲೆಯಾಗಿ ಘೋಷಣೆ ಮಾಡಲಿ. ರಾಜ್ಯದಲ್ಲಿ ಮಲೆನಾಡು ಪ್ರದೇಶಗಳನ್ನು ಸಣ್ಣ ಜಿಲ್ಲೆಯಾಗಿ ಮಾಡಿದರೆ ಅಭಿವೃದ್ದಿಗೆ ಅವಕಾಶ ಆಗುತ್ತದೆ ಎಂದರು.ನಿವೃತ್ತ ಪ್ರಾಚಾರ್ಯ ಅ.ಪು.ನಾರಾಯಣಪ್ಪ ಮಾತನಾಡಿ, ಸಂಘ ಪರಿವಾರದ ಪಟ್ಟಿಯಲ್ಲಿ ಸಾಗರ ಜಿಲ್ಲೆಯಾಗಿ ಬಹಳ ಹಿಂದೆಯೇ ಘೋಷಣೆ ಮಾಡಿಕೊಳ್ಳಲಾಗಿದೆ. ಸಾಗರ ಜಿಲ್ಲಾ ಕೇಂದ್ರವಾಗಲು ಎಲ್ಲಾ ಸೌಲಭ್ಯಗಳಿದೆ. ಪಕ್ಷಾತೀತವಾಗಿ ಸಾಗರ ಜಿಲ್ಲೆ ಮಾಡಲು ಹೋರಾಟ ರೂಪಿಸಬೇಕು. ಗುಡ್ಡಗಾಡು ಪ್ರದೇಶ ಅತಿಹೆಚ್ಚು ಹೊಂದಿರುವ ಕಾರ್ಗಲ್ ತಾಲ್ಲೂಕು ಕೇಂದ್ರವಾಗಿ ರೂಪಿಸಿ, ಅದನ್ನು ಸಾಗರ ಜಿಲ್ಲೆಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಹೋರಾಟ ಸಮಿತಿಯ ತೀ.ನ.ಶ್ರೀನಿವಾಸ್ ಮಾತನಾಡಿ, ಹತ್ತು ವರ್ಷಗಳ ಹಿಂದೆ ನಾ.ಡಿಸೋಜ ನೇತೃತ್ವದಲ್ಲಿ ಮೊದಲ ಬಾರಿಗೆ ಸಾಗರ ಜಿಲ್ಲೆ ಮಾಡಿ ಎನ್ನುವ ಹೋರಾಟ ನಡೆದಿತ್ತು. ಇದೀಗ ಕೇಂದ್ರ ಹೊಸ ಜಿಲ್ಲೆ ಮಾಡಲು ರಾಜ್ಯಗಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಪ್ರತಿಭಟನೆ ಮಾಡಿ ಸಾಗರ ಜಿಲ್ಲೆ ಮಾಡಿ ಎಂದು ಮನವಿ ನೀಡಿದ್ದೇವೆ. ಶಾಸಕರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಜಿಲ್ಲೆ ಮಾಡಲು ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆ ಸೂಕ್ತ ಎಂದು ತಿಳಿಸಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವ ಭರವಸೆ ನೀಡಿದ್ದರು. ಡಿಸೆಂಬರ್ ಹತ್ತಿರ ಬರುತ್ತಿದ್ದು, ಜಿಲ್ಲೆ ಮಾಡುವುದು ವಿಳಂಬ ಮಾಡಿದರೆ ಸಾಗರ ಜಿಲ್ಲೆಯಾಗುವುದರಿಂದ ವಂಚಿತವಾಗುತ್ತದೆ. ಸರ್ಕಾರ ಸಾಗರ ಜನರ ತಾಳ್ಮೆಯನ್ನು ಪರೀಕ್ಷೆ ಮಾಡದೆ ತಕ್ಷಣ ಜಿಲ್ಲೆಯಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.ಹೋರಾಟ ಸಮಿತಿಯ ಎಸ್.ವಿ.ಹಿತಕರ ಜೈನ್, ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿದರು. ಮಹ್ಮದ್ ಖಾಸಿಂ, ದಿನೇಶ್ ಶಿರವಾಳ, ಎಂ.ಬಿ.ಮಂಜಪ್ಪ, ಮಂಜುನಾಥ್ ಆಚಾರ್, ಸುಂದರ ಸಿಂಗ್, ಕನ್ನಪ್ಪ ಬೆಳಲಮಕ್ಕಿ, ನಾಗರಾಜ ಗುಡ್ಡೆಮನೆ, ಯು.ಪಿ.ಜೋಸೆಫ್, ಅಕ್ಬರ್ ಖಾನ್, ದೇವೇಂದ್ರಪ್ಪ, ಪ್ರಕಾಶ್ ಲ್ಯಾವಿಗೆರೆ, ರೇವಪ್ಪ ಹೊಸಕೊಪ್ಪ, ಕುಂಟಗೋಡು ಸೀತಾರಾಮ್, ಪತ್ರಕರ್ತರಾದ ಜಿ.ನಾಗೇಶ್, ಲೋಕೇಶ ಕುಮಾರ್, ಎಂ.ಜಿ.ರಾಘವನ್ ಇನ್ನಿತರರು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))