ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಕಾನೂನು ಕಾಲೇಜಿನಲ್ಲಿ ಅರೆಕಾಲಿನ ಉಪನ್ಯಾಸಕಿಯೂ ಆಗಿದ್ದ ವಕೀಲೆಯೊಬ್ಬರು ಕಾನೂನಿನ ಪಾಠ ಮಾಡುವುದನ್ನು ಬಿಟ್ಟು ತಮ್ಮ ಬಳಿ ನ್ಯಾಯಕ್ಕಾಗಿ ಬಂದ ಮಹಿಳೆಯೊಬ್ಬರನ್ನೇ ಮುಂದಿಟ್ಟು ಹನಿಟ್ರ್ಯಾಪ್‌ ಮಾಡಿ ಹಣ ಮಾಡಲು ಮುಂದಾಗಿ ಕಡೆಗೇ ಸಂತ್ರಸ್ತ ಮಹಿಳೆಯೇ ಈ ವಕೀಲೆ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.ನೊಂದ ಮಹಿಳೆಯು ಮರ್ಯಾದೆ ಉಳಿಸಿಕೊಳ್ಳುವ ಜತೆಗೆ ಸಮಾಜಕ್ಕೆ ಕಂಟಕವಾಗುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ವಿರುದ್ಧ ದೂರು ನೀಡಿರುವ ಕಾರ್ಯ ಪ್ರಶಂಸನೀಯ. ಆದರೆ ನಾಗಲಕ್ಷ್ಮೀ ಅವರು ಸರ್ಕಾರಿ ಕಾನೂನು ಕಾಲೇಜಿನ ಅರೆಕಾಲಿಕ ಉಪನ್ಯಾಸಕಿಯೂ ಆಗಿರುವುದು ವಿಪರ್ಯಾಸ. ಪ್ರಕರಣದಲ್ಲಿನ ನೊಂದ ಮಹಿಳೆಯು ಪ್ರೀತಿಸಿ ಮದುವೆಯಾಗಿದ್ದು, ಅತ್ತೆ ಮನೆಯಲ್ಲಿ ಸಮಸ್ಯೆ ಉಂಟಾದಾಗ ವಕೀಲೆ ನಾಗಲಕ್ಷ್ಮೀ ಅವರಲ್ಲಿ ಸಮಸ್ಯೆ ವಿವರಿಸಿ, ಸಾಂತ್ವನದ ಮಾತುಗಳಿಂದ ತೃಪ್ತರಾಗಿ ಮರಳುತ್ತಿದ್ದರು. ನೊಂದ ಮಹಿಳೆಯ ಪತಿಯೂ ಹೆಂಡತಿಯ ಮೇಲೆ ಅನುಮಾನಪಡುವುದು, ಆಕೆಯ ಮನೆಗೆ ಹೊರಗಿನ ವ್ಯಕ್ತಿಗಳು ಬಂದಲ್ಲಿ ಸಂಶಯ ವ್ಯಕ್ತಪಡಿಸಿ, ಜಗಳವಾಡುತ್ತಿದ್ದರು ಎನ್ನಲಾಗಿದೆ.ನೆರೆ ಮನೆಯ ಮಹಿಳೆ ಒಬ್ಬರು ಫೆ.೧೩ರಂದು ನಿಮ್ಮ ಮನೆಗೆ ಒಬ್ಬ ವ್ಯಕ್ತಿ ಬಂದಿದ್ದರು ಎಂದು ನೊಂದ ಮಹಿಳೆಯ ಪತಿಗೆ ತಿಳಿಸಿದ್ದಾರೆ. ನಂತರದಲ್ಲಿ ಪತಿಪತ್ನಿ ನಡುವೆ ಗಲಾಟೆ ನಡೆದಿದೆ ಮತ್ತು ಇದೇ ವಿಚಾರವನ್ನು ಮುಂದಿಟ್ಟುಕೊಂಡು ನೊಂದ ಮಹಿಳೆ ಮನೆಗೆ ವಕೀಲೆ ನಾಗಲಕ್ಷ್ಮೀಯ ಪತಿ ಭೇಟಿ ನೀಡಿದ್ದಾರೆ. ವಿಷಯ ತಿಳಿಸಿದ ಮಹಿಳೆಗೆ ಮೊಬೈಲ್‌ನಲ್ಲಿ ಫೋಟೊ ತೋರಿಸಿ, ಮನೆಗೆ ಬಂದಿದ್ದ ವ್ಯಕ್ತಿಯ ಗುರುತು ಪತ್ತೆ ಮಾಡಿ, ನೊಂದ ಮಹಿಳೆಗೆ ಹೆದರಿಸಿ ಮನೆಗೆ ಬಂದಿದ್ದ ಪರಿಚಯಸ್ಥನ ವಿರುದ್ಧ ರೇಪ್ ಕೇಸ್ ಕೊಡುವಂತೆ ಒತ್ತಾಯಿಸಿದ್ದಾನೆ. ಅತ್ಯಾಚಾರ ದೂರು ಕೊಡಲು ಮಹಿಳೆ ಒಪ್ಪದೇ ಇದ್ದಾಗ ನಾಗಲಕ್ಷ್ಮೀ ಖಾಸಗಿ ಲ್ಯಾಬ್ ಇಟ್ಟುಕೊಂಡಿರುವ ಧರ್ಮರಾಜು ಉರುಫ್‌ ಫಣಿಗೆ ಕರೆ ಮಾಡಿ ಕರೆಸಿಕೊಂಡು ಬಲವಂತವಾಗಿ ನೊಂದ ಮಹಿಳೆ ಖಾಸಗಿ ಅಂಗಾಂಗ ಮುಟ್ಟಿ ಮೆಡಿಕಲ್ ಚೆಕಪ್ ಮಾಡಿಸಿದ್ದಾರೆ. ಪಣಿ ಅತ್ಯಾಚಾರ ನಡೆದಿಲ್ಲವೆಂದು ತಿಳಿಸಿದ್ದರೂ ಸಹ, ನಿನ್ನ ಗಂಡನಿಗೆ ಅತ್ಯಾಚಾರ ನಡೆದಿದೆ ಎಂದು ತಿಳಿಸಿ, ಏನು ಮಾಡಬೇಕೆಂದು ಗೊತ್ತಿದೆ ಎಂದು ನೊಂದ ಮಹಿಳೆಗೆ ಹೆದರಿಸಿ, ನೀನು ಮನೆಗೆ ಬಂದಿದ್ದವನ ಜೊತೆ ಅಕ್ರಮ ಸಂಬಂಧ ಹೊಂದಿದ್ದೀಯಾ ಮೆಡಿಕಲ್ ಚೆಕಪ್‌ನಲ್ಲಿ ಗೊತ್ತಾಗಿದೆ. ನೀನು ಮನೆಗೆ ಬಂದಿದ್ದವನ ವಿರುದ್ಧ ರೇಪ್ ಕೇಸ್ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ನಾಗಲಕ್ಷ್ಮೀಯೂ ಫೆ.15ರಂದು ಬಲವಂತವಾಗಿ ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಮಹಿಳೆಯನ್ನು ವಾಪಸ್‌ ಕಳುಹಿಸಿದ್ದಾರೆ. ಆದರೆ ನೊಂದ ಮಹಿಳೆಯು ದೂರು ಕೊಡಲು ಹಿಂದೇಟು ಹಾಕಿ, ಮಹಿಳಾ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ. ಸಮಸ್ಯೆಯ ತೀವ್ರತೆ ಅರಿತ ನಗರ ಠಾಣೆ ಪೊಲೀಸರು, ನೊಂದ ಮಹಿಳೆಯನ್ನು ಅಂದೇ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ ಮತ್ತು ಸಾಂತ್ವನ ಕೇಂದ್ರದಲ್ಲಿ ನೊಂದ ಮಹಿಳೆ ವಿಚಾರಣೆ ನಡೆಸಿದಾಗ ಹನಿಟ್ರ್ಯಾಪ್ ಬಗ್ಗೆ ಎಳೆಎಳೆಯಾಗಿ ತಿಳಿದ್ದಾರೆ. ನೊಂದ ಮಹಿಳೆಯ ಹೇಳಿಕೆ ಹಿನ್ನಲೆಯಲ್ಲಿ ನಾಗಲಕ್ಷ್ಮೀ, ಆಕೆಯ ಪತಿ ಸಿದ್ದೀಕ್, ಲ್ಯಾಬ್ ಟೆಕ್ನೀಷಿಯನ್ ಧರ್ಮರಾಜು ಅಲಿಯಾಸ್ ಫಣಿ ಮತ್ತು ಇನ್ನೋರ್ವ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿ, ನಾಗಲಕ್ಷ್ಮೀ ಹಾಗೂ ಧರ್ಮರಾಜು ಅವರನ್ನು ಬಂಧಿಸಿ, ಉಳಿದ ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.