ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲಾಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಖಾಸಗಿ ಸಹಭಾಗಿತ್ವ (ಪಿಪಿಪಿ) ಸ್ಥಾಪನೆ ಕೈಬಿಡುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಪ್ರತಿಭಟನಾಕಾರರನ್ನುದ್ದೇಶಿಸಿ ಭಾರತ ಕಮ್ಯನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಈಗಾಗಲೇ ತುಮಕೂರು ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಹಾಗೂ ನವೀಕರಣದ ನೆಪದಲ್ಲಿ ನೆಲಸಮ ಮಾಡಿ ಖಾಸಗಿ ಸಹಭಾಗಿತ್ವಕ್ಕೆ ಒಪ್ಪಿಸಲು ಸಿದ್ಧತೆ ನಡೆಸಿರುವುದು ಖಂಡನೀಯ. ಸುಮಾರು 32 ಎಕರೆ ಇದ್ದು ಜಿಲ್ಲಾಸ್ಪತ್ರೆಯನ್ನು 5 ಎಕರೆಯಷ್ಟನ್ನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿದರು.ಸಾವಿರಾರು ಕೋಟಿ ಬೆಲೆ ಬಾಳುವ 32 ಎಕರೆ ಜಾಗದಲ್ಲಿ ಇರುವ ಜಿಲ್ಲಾಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಿರ್ಮಾಣ ಮಾಡಿದರೆ ಮುಂದೆ ಖಾಸಗಿಯವರ ಸ್ವತ್ತಾಗಲಿದೆ. ಇದರಿಂದಾಗಿ ಬಡ ಮಕ್ಕಳು ವೈದ್ಯರಾಗುವ ಕನಸು ನನಸಾಗುವುದಿಲ್ಲ. ಆದ್ದರಿಂದ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜು ನಿರ್ಮಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾಸ್ಪತ್ರೆಯ 32 ಎಕರೆ ಜಾಗದಲ್ಲಿ 5 ಎಕರೆ ಒತ್ತುವರಿಯಾಗಿದೆ ಎಂಬ ಆರೋಪವಿದೆ. ಒತ್ತುವರಿಯಾಗಿರುವ ಜಾಗವನ್ನು ಕೂಡಲೇ ತೆರವುಗೊಳಿಸುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ ಎಂದರು. ಸಣ್ಣ ಬಂಡವಾಳದ ಮೂಲಕ ಸರ್ಕಾರ ಮೆಡಿಕಲ್ ಕಾಲೇಜು ಮತ್ತು ಹಾಸ್ಟೆಲ್ ನಿರ್ಮಾಣ ಮಾಡಬಹುದಾಗಿದೆ. ಆದರೆ ಸರ್ಕಾರ ಪಿಪಿಪಿ ಮಾಡೆಲ್‌ಗೆ ಮುಂದಾಗಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಬಾರದು. ಕೂಡಲೇ ಪಿಪಿಪಿ ಮಾಡೆಲ್ ಕೈಬಿಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.ಜಿಲ್ಲಾಸ್ಪತ್ರೆ ಆವರಣದಲ್ಲಿ ಫಾರ್ಮಸಿ ಕಾಲೇಜು, ನರ್ಸಿಂಗ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾಸ್ಪತ್ರೆಯಲ್ಲಿ ನುರಿತ ವೈದ್ಯರು, ಸಿಬ್ಬಂದಿ ವರ್ಗ ಕೆಲಸ ಮಾಡುತ್ತಿದ್ದು, ಪ್ರತಿದಿನ ನಗರ ಸೇರಿದಂತೆ ಜಿಲ್ಲೆಯಲ್ಲಿ 1500 ರಿಂದ 2 ಸಾವಿರ ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿರಾರು ಕೋಟಿ ರು. ಮೌಲ್ಯದ ತುಮಕೂರು ಜಿಲ್ಲಾಸ್ಪತ್ರೆ ಸರ್ಕಾರಿ ಜಾಗವನ್ನು ಯಾವುದೇ ಕಾರಣಕ್ಕೂ ದುರ್ಬಳಕೆಯಾಗದಂತೆ ತಡೆಗಟ್ಟುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ಹೇಳಿದರು. ನವೆಂಬರ್ ೭ ರಂದು ಮುಖ್ಯಮಂತ್ರಿಗಳಿಂದ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆಗೊಳ್ಳಲು ಸಜ್ಜಾಗಿದೆ. ಈ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರುವ ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಲು ಅರ್ಹವಾಗಿದೆ. ಆದರೆ ಖಾಸಗಿ ಸಹಭಾಗಿತ್ವವನ್ನು ಕೈಬಿಡಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
ಈ ವೇಳೆ ಸಿಪಿಐ ರಾಜ್ಯ ಕಾರ್ಯದರ್ಶಿ ಸ್ವಾತಿ ಸುಂದರೇಶ್, ರಮೇಶ್, ಉಮೇಶ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ರಾಜೇಶ್, ಜಿಲ್ಲಾ ಮಂಡಳಿ ಮಂಜುನಾಥ್, ಖಜಾಂಚಿ ಅಶ್ವತ್ ನಾರಾಯಣ್, ಜಿಲ್ಲಾ ಕಾರ್ಯದರ್ಶಿ ಕಂಬೇಗೌಡ, ಜಿ. ಚಂದ್ರಶೇಖರ್, ಭೂತರಾಜು ಸೇರಿದಂತೆ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))