ಬ್ಯಾಡಗಿ: ಆಚರಣೆಗಳ ನೆಪದಲ್ಲಿ ಕಟ್ಟುಕಥೆಗಳನ್ನು ಹೇಳಿ ಮೌಢ್ಯ ಮತ್ತು ಕಂದಾಚಾರಗಳ ಮೂಲಕ ಮಾನಸಿಕ ಭಯೋತ್ಪಾದನೆ ನಡೆಸಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಪ್ರಸ್ತತ ಸಮಾಜವನ್ನು ವೈಜ್ಞಾನಿಕ ಚಿಂತನೆಗೊಳಪಡಿಸುವ ಮೂಲಕ ಸಕಲರಿಗೂ ಲೇಸನ್ನೇ ಬಯಸುವ ಲಿಖಿತ ಸಂವಿಧಾನ ನೀಡಿದ ಶರಣ ಧರ್ಮ ಆಚರಣೆಗೆ ತರುವಂತಹ ಅವಶ್ಯವಿದೆ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯಪಟ್ಟರು.
ತಾಲೂಕಿನ ಮೋಟೆಬೆನ್ನೂರಿನ ಗ್ರಾಮದಲ್ಲಿ ಬಸವ ಜಯಂತಿ ಪ್ರಯುಕ್ತ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಧರ್ಮದ ಮೊದಲ ತಿರುಳೇ ಮಾನವೀಯತೆ, ಇವುಗಳ ನಡುವೆ ಒಂದಿಷ್ಟು ಸಂಪ್ರದಾಯ, ನಂಬಿಕೆ, ಆಚರಣೆ ಸೇರಿಕೊಂಡು ಒಟ್ಟಾರೆ ಧರ್ಮದ ಚೌಕಟ್ಟನ್ನು ನಿರ್ಧರಿಸುತ್ತವೆ. ಆದರೆ ಇತ್ತೀಚೆಗೆ ಸಾಮಾಜಿಕ ವ್ಯವಸ್ಥೆಯನ್ನೇ ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನಿಕ್ಕಿಳಿದಿದ್ದು ತಮ್ಮ ಧರ್ಮವನ್ನು ಇನ್ನೊಬ್ಬರ ಮೇಲೆ ಹೇರಲ್ಪಡಲಾಗುತ್ತಿರುವುದು ಖಂಡನೀಯ ಎಂದರು.ಧರ್ಮ ಬಿಟ್ಟು ನಡೆಯದಿರಿ: ಜಿ.ಸಿ. ಹಾವೇರಿಮಠ ಮಾತನಾಡಿ, ಕೃಷಿ, ವ್ಯಾಪಾರ, ಸರ್ಕಾರಿ ಸೇವೆ, ರಾಜಕಾರಣ ಎಲ್ಲದರಲ್ಲಿಯೂ ಧರ್ಮ ಅಡಗಿದೆ, ಬಾಹ್ಯ ಜಗತ್ತಿಗೆ ನಾವು ಎಷ್ಟೇ ಸಿರಿವಂತರಾದರೂ ಧರ್ಮವನ್ನು ಬಿಟ್ಟು ನಡೆದುಕೊಂಡಲ್ಲಿ ಸಮಾಜದ ಎದುರಿಗೆ ನಮ್ಮಂತಹ ಸಣ್ಣವರು ಇನ್ನೊಬ್ಬರಿಲ್ಲ. ದೇವರು ನಮಗೆ ಸಿರಿ-ಸಂಪದ, ಸ್ಥಾನಮಾನ ಯಾವುದಕ್ಕೂ ಕೊರತೆ ಇಲ್ಲದಂತೆ ನೋಡಿಕೊಂಡಿದ್ದಾನೆ ಹೀಗಿದ್ದರೂ ಸಹ ಇನ್ನೊಬ್ಬರ ಏಳಿಗೆಯನ್ನು ಸಹಿಸಿಕೊಳ್ಳದ ನಾವುಗಳು ಶಾಂತಿ, ಸಮಾಧಾನ ಕಳೆದುಕೊಂಡಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಅಗಮಿಸಿದ್ದ 33 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.ಮಲ್ಲಿಕಾರ್ಜುನ ಹಾವನೂರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಾ. ಪ್ರೇಮಾನಂದ ಲಕ್ಕಣ್ಣನವರ, ಮಂಜುನಾಥ ಬೆನಕನಕೊಂಡ, ಪರಮೇಶಪ್ಪ ಶಿವಣ್ಣನವರ, ನಾಗರಾಜ ಆನ್ವೇರಿ, ಮಲ್ಲಿಕಾರ್ಜುನ ಬಳ್ಳಾರಿ, ಶಿವಪ್ಪ ಗುಂಡೇನಹಳ್ಳಿ, ಶಿವಕುಮಾರ ಪಾಟೀಲ, ವೀರಪ್ಪ ಹಾದರಗೇರಿ, ವೀರಣ್ಣ ಬಳ್ಳಾರಿ, ಸಂಜೀವ ಹಿತ್ತಲಮನಿ, ಪರಮೇಶಪ್ಪ ಬ್ಯಾಡಗಿ, ಉಜ್ಜಪ್ಪ ಗುಡಗೂರ ಹಾಗೂ ಇನ್ನಿತರರಿದ್ದರು.