ಜಿ.ಸೋಮಶೇಖರ

ಕೊಟ್ಟೂರು: ವೀರಶೈವ ಪಂಚ ಪೀಠಗಳಲ್ಲಿ ಎರಡನೇ ಪೀಠವಾದ ಉಜ್ಜಯನಿ ಸದ್ಧರ್ಮ ಪೀಠ ಆರಾಧ್ಯ ದೈವ ಮರಳುಸಿದ್ದೇಶ್ವರ ಮಹಾ ರಥೋತ್ಸವ ಮತ್ತು ದಾರುಕಚಾರ್ಯರ ಜಯಂತಿ ಕಾರ್ಯಕ್ರಮಕ್ಕೆ ತಾಲೂಕಿನ ಉಜ್ಜಯನಿ ಸರ್ವ ರೀತಿಯಲ್ಲಿ ಸಜ್ಜುಗೊಂಡಿದೆ.

ಭಾವೈಕ್ಯತೆ, ಸಹಿಷ್ಣುತೆ, ಸೌಹಾರ್ದ ಸಾರುವ ಮಹತ್ತರ ಕಾಯಕವೇ ಉಜ್ಜಯನಿ ಸ್ವಾಮಿಯ ಮಹಾ ರಥೋತ್ಸವವಾಗಿದೆ. ಏ.21ರಂದು ಸಂಜೆ 5 ಗಂಟೆ ನಂತರ ಲಕ್ಷಾಂತರ ಭಕ್ತರ ಭಾಗವಹಿಸುವಿಕೆಯಲ್ಲಿ ವಿವಿಧ ಕಲಾ ಮೇಳಗಳೊಂದಿಗೆ 50ಕ್ಕೂ ಹೆಚ್ಚು ಅಡಿ ಎತ್ತರದ ವರ್ಣರಂಜಿತ ಭವ್ಯ ಮಹಾರಥ ನೆರವೇರಲಿದೆ.

ನಾಡಿನೆಲ್ಲೆಡೆಯಿಂದ ಭಕ್ತರು ಈಗಾಗಲೇ ಉಜ್ಜಯನಿ ಗ್ರಾಮದತ್ತ ಪಾದಯಾತ್ರೆ, ವಾಹನಗಳಲ್ಲಿ ಬರತೊಡಗಿದ್ದಾರೆ. ರಥೋತ್ಸವದ 2ನೇ ದಿನ ಏ.22ರಂದು ಈ ವಿಶಿಷ್ಟಾಚರಣೆಯ ಸ್ವಾಮಿಯ ಶಿಖರ ತೈಲಾಭಿಷೇಕ ನಡೆಯಲಿದೆ. ಒಟ್ಟಾರೆಯಾಗಿ ಸದ್ಧರ್ಮ ಪೀಠದ ಈ ಮಹೋತ್ತಮ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆಂದೇ ಪೀಠದಿಂದ ಪ್ರಸಾದ ಸೇವೆಗೆ 25ಕ್ಕೂ ಹೆಚ್ಚು ಕೌಂಟರ್‌ ಗ್ರಾಮದಲ್ಲಿನ ಹೈಸ್ಕೂಲ್ ಮೈದಾನದಲ್ಲಿ ತೆರೆಯಲಾಗಿದೆ.

ಪ್ರಸಾದ ಸೇವನೆ ಕಾರ್ಯ ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಆರಂಭಗೊಂಡು ನಿರಂತರವಾಗಿ ನಡೆಯಲಿದೆ. ಪ್ರಸಾದದಲ್ಲಿ ಬೂಂದಿ ಲಾಡು, ರೊಟ್ಟಿ, ವಿವಿಧ ಬಗೆಯ ಪಲ್ಯ, ಚಟ್ನಿಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹರಪನಹಳ್ಳಿ ಭಕ್ತರು ತೆಗ್ಗಿನಮಠದ ವರಸದ್ಯೋಜಾತ ಮಹಾಸ್ವಾಮೀಜಿ ನೇತೃತ್ವದಲ್ಲಿ 1 ಟನ್ ಬೂಂದಿ ಲಾಡನ್ನು ಭಕ್ತರಿಗೆ ಉಣ ಬಡಿಸಲು ಉಜ್ಜಯನಿ ಪೀಠಕ್ಕೆ ಸಲ್ಲಿಸಿದ್ದಾರೆ.


25 ಸಾವಿರಕ್ಕೂ ಹೆಚ್ಚು ಖಡಕ್ ರೊಟ್ಟೆಗಳನ್ನು ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು ಸಿದ್ಧಗೊಳಿಸಿ ಶೇಂಗಾ, ಗುರೆಳ್ಳು ಪುಡಿಯನ್ನು ಪೀಠಕ್ಕೆ ಅರ್ಪಿಸಿದ್ದಾರೆ. ಮಹಾರಥೋತ್ಸವ ಮತ್ತು ಶಿಖರ ತೈಲಾಭಿಷೇಕ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ಪೊಲೀಸ್ ಬಂದೋಬಸ್ತ್‌ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ಇಬ್ಬರು ಡಿವೈಎಸ್ಪಿ, 10 ಸಿಪಿಐ, 20 ಪಿಎಸ್ಐ, 300ಕ್ಕೂ ಹೆಚ್ಚು ಪೇದೆಗಳು, 200ಕ್ಕೂ ಹೆಚ್ಚು ಹೋಂಗಾರ್ಡ್ಸ್‌ ಸಿಬ್ಬಂದಿ ನಿಯೋಜಿಸಲು ಈಗಾಗಲೇ ಕೊಟ್ಟೂರು ಪಿಎಸ್ಐ ಗೀತಾಂಜಲಿ ಸಿಂಧೆ ಕ್ರಮ ಕೈಗೊಂಡಿದ್ದಾರೆ. 2 ಕೆಎಸ್ಆರ್ಪಿ, 2ಡಿಎಆರ್ ತುಕಡಿಗಳನ್ನು ಉಜ್ಜಯನಿಗೆ ಕರೆಯಿಸಿಕೊಳ್ಳಲಾಗಿದೆ.

ಉಜ್ಜಯನಿ ಸದ್ಧರ್ಮ ಪೀಠದಲ್ಲಿ ಈ ಜಾತ್ರೆ ಮಹೋತ್ಸವ ನೂರಾರು ಧರ್ಮ ಚಿಂತನೆಗಳನ್ನು ಇಟ್ಟುಕೊಂಡು ಸಮಾಜ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಲವು ಮಂತ್ರಿ ಮಹೋದಯರು, ಗಣ್ಯಮಾನ್ಯರು ಉಪಸ್ಥಿತರಿರುತ್ತಾರೆ. ಇದಕ್ಕೆಂದೇ ಸದ್ಧರ್ಮ ಪೀಠ ಎಲ್ಲ ಬಗೆಯ ಸಿದ್ಧತೆಗಳನ್ನು ಕೈಗೊಂಡಿದೆ ಎನ್ನುತ್ತಾರೆ ಉಜ್ಜಯನಿ ಪೀಠ ಜಗದ್ಗುರು ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ.

ಉಜ್ಜಯನಿ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಇದಕ್ಕೆ ಅನುಗುಣವಾಗಿ ಭಾರೀ ಪ್ರಮಾಣದ ಪೊಲೀಸ್ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಜತೆಗೆ ಜಾತ್ರೆಯಲ್ಲಿ ಕಿಡಿಗೇಡಿಗಳು ತಮ್ಮ ಕೈಚಳಕ ಪ್ರದರ್ಶನಕ್ಕೆ ಕಡಿವಾಣ ಹಾಕಲು ಗ್ರಾಮದ ಹಲವು ಕಡೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಕೊಟ್ಟೂರು ಪಿಎಸ್‌ಐ ಗೀತಾಂಜಲಿ ಸಿಂಧೆ.