ಕುಕನೂರು: ಪಟ್ಟಣದಲ್ಲಿ ಸರ್ವಧರ್ಮದವರಿಗೂ ಸ್ಮಶಾನದ ಸಮಸ್ಯೆ ಇದ್ದು, ಅದನ್ನು ಪರಿಹಾರ ಮಾಡಬೇಕು ಎಂದು ಪಪಂ ಸದಸ್ಯರು ಆಗ್ರಹಿಸಿದರು.

ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಜರುಗಿದ ೨೦೨೬-೨೭ನೇ ಸಾಲಿನ ಬಜೆಟ್ ಸಭೆಯಲ್ಲಿ ಪಪಂ ಸದಸ್ಯರು, ಸ್ಮಶಾನ ಇಲ್ಲದೆ ಕೆಲವು ಸಮುದಾಯದವರಿಗೆ ತೊಂದರೆ ಆಗಿದೆ. ಕೂಡಲೇ ಎಲ್ಲ ವರ್ಗದವರಿಗೂ ಸ್ಮಶಾನದ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಕೋಟ್ಯಂತರ ರು. ವೆಚ್ಚದ ಮಾರಾಟ ಮಳಿಗೆ ಕಟ್ಟಡದ ಕಾಮಗಾರಿ ಅಪೂರ್ಣ ಆಗಿದೆ. ಅದನ್ನು ಪೂರ್ಣಗೊಳಿಸಬೇಕು. ಮೂರು ವರ್ಷಗಳ ಹಿಂದೆ ಬಸ್ ನಿಲ್ದಾಣದ ಬಳಿ ಮಳಿಗೆ ನಿರ್ಮಿಸಲಾಗಿದೆ. ಪಂಚಾಯಿತಿಯು ಎಸ್ಟಿಮೇಟ್‌ ಮಾಡಿ, ಅದನ್ನು ಪೂರ್ಣ ಮಾಡುವುದಕ್ಕೆ ಅನುದಾನವಿಟ್ಟರೆ ಪಂಚಾಯಿತಿಗೂ ದೊಡ್ಡಮಟ್ಟದ ಆದಾಯ ಬರುತ್ತದೆ. ಯಲಬುರ್ಗಾ, ಕುಕನೂರು ಪಪಂ ಒಂದೆ ಕ್ಷೇತ್ರದಲ್ಲಿ ಇದ್ದರೂ ಟ್ಯಾಕ್ಸ್ ಬೇರೆ ಬೇರೆ ತೆಗೆದುಕೊಳ್ಳಲಾಗುತ್ತಿದೆ. ಕುಕನೂರು ಗ್ರಾಪಂದಿಂದ ಪಪಂ ಆದ ಮೇಲೆ ಜನರಿಗೆ ತೆರಿಗೆ ಹೆಚ್ಚಿಗೆ ಆಗಿದ್ದರಿಂದ ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ತೆರಿಗೆ ಹೆಚ್ಚು ಮಾಡಬೇಡಿ. ರಿಯಲ್ ಎಸ್ಟೇಟ್ ಮಾಡುವಂತಹವರಿಗೆ ಟ್ಯಾಕ್ಸ್ ಹೆಚ್ಚಿಗೆ ಮಾಡಬೇಕು ಎಂದು ಪಪಂ ಸದಸ್ಯರು ಒತ್ತಾಯಿಸಿದರು.

ಪಪಂ ಮುಖ್ಯಾಧಿಕಾರಿ ನಾಗೇಶ ಮಾತನಾಡಿ, ಪಪಂಯಲ್ಲಿ ನಾನು ಬಂದ ಮೇಲೆ ಸುಮಾರು ₹೨ ಕೋಟಿ ವೆಚ್ಚದ ಬಾಕಿ ಇರುವ ಕಾಮಗಾರಿ ಮಾಡಿಸಿದ್ದೇವೆ. ಪಂಚಾಯಿತಿಯಲ್ಲಿ ಮಳಿಗೆಯ ಮಾಲೀಕರಿಂದ ಲಕ್ಷಾಂತರ ರು. ಬಾಡಿಗೆ ವಸೂಲಿ ಮಾಡಿಸಿದ್ದೇನೆ. ಹೊಸ ಮಳಿಗೆಗೆ ಎಸ್ಟಿಮೇಟ್‌ ಮಾಡಿಸಿ ಅನುದಾನ ಇರಿಸುತ್ತೇನೆ ಎಂದರು.

ಪಪಂದಿಂದ ಒಟ್ಟು ಪಾವತಿ ₹೩೩.೦೭ ಕೋಟಿ ಆಗಿದ್ದು, ಒಟ್ಟು ಉಳಿತಾಯ ₹೬.೧೧ ಲಕ್ಷ ಆಗಿದೆ ಎಂದರು.


ಪಪಂ ಅಧ್ಯಕ್ಷೆ ಲೀಲಾವತಿ ಮುಧೋಳ ಅಧ್ಯಕ್ಷತೆ ವಹಿಸಿದ್ದರು. ಪಪಂ ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿರಾಜುದ್ದೀನ್ ಕರಮುಡಿ, ಸದಸ್ಯರಾದ ರಾಮಣ್ಣ ಕಲ್ಮನಿ, ಗುದ್ನೇಪ್ಪ ನೋಟಗಾರ, ರಾಧಾ ದೊಡ್ಡಮನಿ, ಪ್ರಶಾಂತ ಆರುಬೆರಳಿನ, ಮಂಜುನಾಥ ಕೋಳೂರು, ನೂರುದ್ದೀನ್‌ಸಾಬ ಗುಡಿಹಿಂದಲ್, ಸಿದ್ದು ಉಳ್ಳಾಗಡ್ಡಿ, ಬಾಲರಾಜ ಗಾಳಿ, ಶಿವರಾಜಗೌಡ ಯಲ್ಲಪ್ಪಗೌಡ್ರ, ನಾಮನಿರ್ದೇಶಿತ ಸದಸ್ಯರಾದ ರಫೀ ಹಿರೇಹಾಳ, ಈರಣ್ಣ ಯಲಬುರ್ಗಿ, ಸಿಬ್ಬಂದಿ ಶರಣಪ್ಪ, ಮೋಕ್ಷಮ್ಮ, ಮನೋಹರ, ಶ್ರೀಕಾಂತ, ಕನಕಪ್ಪ ಇದ್ದರು.