ಸಾರಾಂಶ
ಕಾರವಾರ:
ಜಿಲ್ಲೆಯಲ್ಲಿ ಕಂಡುಬರುತ್ತಿರುವ ಮರಳು ಸಮಸ್ಯೆ ಪರಿಹರಿಸಲು ಆದಷ್ಟು ಶೀಘ್ರದಲ್ಲಿ ಸೂಕ್ತ ನಿರ್ಧಾರ ಕೈಗೊಂಡು, ಜನರಿಗೆ ಕಡಿಮೆ ದರದಲ್ಲಿ, ಸಾಕಷ್ಟು ಪ್ರಮಾಣದಲ್ಲಿ ಮರಳು ವಿತರಿಸಲು ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಮರಳು ಸದಸ್ಯರಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮರಳು 7 ಸದಸ್ಯರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕರಾವಳಿಯ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಮರಳು ಸಮಸ್ಯೆ ತೀವ್ರವಾಗಿದೆ. ಜಿಲ್ಲೆಯಲ್ಲಿ ಎಂ ಸ್ಯಾಂಡ್ ಕೂಡಾ ಲಭ್ಯತೆ ಇಲ್ಲ. ಆದ್ದರಿಂದ ಮರಳಿಗೆ ಹೆಚ್ಚಿನ ಬೇಡಿಕೆ ಇದೆ. ಮರಳು ತೆಗೆಯಲು ಮತ್ತು ಸಾಗಾಟ ಮಾಡಲು ಅನುಮತಿ ನೀಡದೇ ಇರುವುದರಿಂದ ಜಿಲ್ಲೆಯಲ್ಲಿ ಅನಧಿಕೃತ ಮರಳುಗಾರಿಕೆ ನಡೆಯುತ್ತಿದೆ. ಈಗಾಗಲೇ ಗುರುತಿಸಲಾಗಿರುವ ಮರಳು ದಿಬ್ಬಗಳನ್ನು ತೆರವುಗೊಳಿಸಿದ್ದಲ್ಲಿ ಈ ಸಮಸ್ಯೆಗೆ ಪರಿಹಾರ ದೊರೆಯಲಿದ್ದು, ಈ ಕುರಿತ ಸಾಧಕ ಬಾಧಕಗಳ ಬಗ್ಗೆ ಸಮಿತಿ ಸದಸ್ಯರು ಕೂಲಂಕುಷವಾಗಿ ಚರ್ಚಿಸಿ ಶೀಘ್ರದಲ್ಲಿ ತಮ್ಮ ಅಭಿಪ್ರಾಯ ತಿಳಿಸಬೇಕು ಎಂದು ಹೇಳಿದರು.ಜಿಲ್ಲೆಯಲ್ಲಿ ಈಗಾಗಲೇ ಮೀನುಗಾರಿಕಾ ದೋಣಿಗಳು ಮತ್ತು ಸ್ಥಳೀಯ ದೋಣಿಗಳ ಸಂಚಾರಕ್ಕೆ ಅಡ್ಡಿಪಡಿಸುವ ಒಟ್ಟು 20 ಮರಳು ದಿಬ್ಬ ಗುರುತಿಸಲಾಗಿದೆ. ಸದರಿ ಮರಳು ದಿಬ್ಬ ತೆರವುಗೊಳಿಸುವ ಕುರಿತಂತೆ ಸಿಆರ್‌ಝಡ್ ಕ್ಲಿಯರೆನ್ಸ್ ಪಡೆಯಲು ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ 19 ಮರಳು ದಿಬ್ಬ ತೆರವುಗೊಳಿಸಲು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ ಅನುಮತಿ ಮತ್ತು ಷರತ್ತುಗಳನ್ನು ವಿಧಿಸಿದೆ. ಈ ಬಗ್ಗೆ ಕಾನೂನಾನ್ಮಕವಾಗಿ ಪರಿಶೀಲಿಸಿ, ಜಿಲ್ಲೆಯ ಸಾರ್ವಜನಿಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಆದಷ್ಟು ಶೀಘ್ರದಲ್ಲಿ ತಮ್ಮ ಅಭಿಪ್ರಾಯ ಹೇಳಬೇಕು. ಕಾರವಾರ ತಾಲೂಕಿನ ಕಾಳಿ ನದಿ ಪಾತ್ರದಲ್ಲಿ 6, ಅಂಕೋಲಾದ ಗಂಗಾವಳಿ ಪಾತ್ರದಲ್ಲಿ 2, ಕುಮಟಾದ ಅಘನಾಶಿನಿ ಪಾತ್ರದಲ್ಲಿ 4, ಹೊನ್ನಾವರದ ಶರಾವತಿ ಪಾತ್ರದಲ್ಲಿ 7 ಸೇರಿದಂತೆ ಒಟ್ಟೂ 19 ಮರಳು ದಿಬ್ಬಗಳಲ್ಲಿ 12,44,878.46 ಮೆ.ಟನ್ ಮರಳು ತೆರವುಗೊಳಿಸಬಹುದಾಗಿದೆ. ಈ ಬಗ್ಗೆ ನ್ಯಾಯಾಲಯದ ಆದೇಶಗಳು ಮೀರದಂತೆ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ಸಾಗಾಟ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಚೆಕ್ ಪೋಸ್ಟ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮತ್ತು ಪರಿಶೀಲನೆ ವ್ಯವಸ್ಥಿತವಾಗಿ ನಡೆಯಬೇಕು ಎಂದು ಸೂಚಿಸಿದರು.ಸಿಆರ್‌ಝಡ್‌ನ ಪ್ರಾದೇಶಿಕ ನಿರ್ದೇಶಕ, ಡಿಎಫ್‌ಒ ಡಾ. ಪ್ರಶಾಂತಕುಮಾರ ಕೆ.ಸಿ., ಡಿಎಫ್‌ಒ ರವಿಶಂಕರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಆಶಾ, ಜಿಲ್ಲಾ ಪರಿಸರ ಅಧಿಕಾರಿ ಸಂತೋಷ ಹಾಗೂ ಸಮಿತಿ ಸದಸ್ಯರು ಇದ್ದರು.