ಕೆಲ ಸಂಘಟನೆಗಳು ಪ್ರತಿಭಟನೆ ಬ್ಲ್ಯಾಕ್ಮೆಲ್‌ಗೆ ಸೀಮಿತವಾಗಿವೆ: ಶಾಸಕ ಪ್ರಭು ಚವ್ಹಾಣ್‌ ಬೇಸರ

| Published : Nov 22 2024, 01:20 AM IST

ಕೆಲ ಸಂಘಟನೆಗಳು ಪ್ರತಿಭಟನೆ ಬ್ಲ್ಯಾಕ್ಮೆಲ್‌ಗೆ ಸೀಮಿತವಾಗಿವೆ: ಶಾಸಕ ಪ್ರಭು ಚವ್ಹಾಣ್‌ ಬೇಸರ
Share this Article
  • FB
  • TW
  • Linkdin
  • Email

ಸಾರಾಂಶ

ನಾಡ ರಕ್ಷಣೆ ಮಾಡಬೇಕಾದ ಕೆಲ ಸಂಘಟನೆಗಳು ಪ್ರತಿಭಟನೆ ಹೆಸರಿನಲ್ಲಿ ಅಧಿಕಾರಿಗಳಿಗೆ ಬ್ಲ್ಯಾಕ್‌ ಮಾಡ್ತಿವೆ ಎಂದು ಶಾಸಕ ಪ್ರಭು ಚವ್ಹಾಣ್‌ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ಔರಾದ್‌

ಕೆಲ ಸಂಘಟನೆಗಳು ಪ್ರತಿಭಟನೆಯ ಹೆಸರಿನಲ್ಲಿ ಅಧಿಕಾರಿಗಳಿಗೆ ಬ್ಲ್ಯಾಕ್ಮೆಲ್‌ ಮಾಡುವುದಕ್ಕೆ ಸಿಮಿತರಾಗಿವೆ ಎಂದು ಶಾಸಕ ಪ್ರಭು ಚವ್ಹಾಣ್‌ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಕನಲನಗರ ಹಾಗೂ ಔರಾದ್‌ ತಾಲೂಕು ಸಾಹಿತ್ಯ ಪರಿಷತ್‌ ಜಂಟಿ ಸಹಯೋಗದಲ್ಲಿ ಏರ್ಪಡಿಸಲಾದ ಸಾಹಿತಿ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾಡ ರಕ್ಷಣೆ ಮಾಡಬೇಕಾದ ಕೆಲ ಸಂಘಟನೆಗಳು ಪ್ರತಿಭಟನೆ ಹೆಸರಿನಲ್ಲಿ ಅಧಿಕಾರಿಗಳಿಗೆ ಬ್ಲ್ಯಾಕ್‌ ಮಾಡ್ತಿವೆ. ಯಾವ ಸಂಘಟನೆ ಗಡಿ ಭಾಗದ ದಾಬಕಾ, ಎಕಂಬಾ, ಗಣೇಶಪೂರ್‌ ಭಾಗದ ಗ್ರಾಮಗಳಲ್ಲಿ ಹೋಗಿ ಅಲ್ಲಿನ ಸಮಸ್ಯೆಗಳ ವಿರುದ್ಧ ಪ್ರತಿಭಟನೆ ಮಾಡಿವೆ ಹೇಳಿ ಎಂದರು.

ಕನ್ನಡದ ರಕ್ಷಣೆಗೆ ಭಾಲ್ಕಿ ಹಿರೇಮಠ ಸಂಸ್ಥಾನದ ಲಿಂ.ಪೂಜ್ಯ ಚನ್ನಬಸವ ಪಟ್ಟದೇವರು ಅಂದು ಕೆಲಸ ಮಾಡಿದ್ದಕ್ಕೆ ಇಂದು ಅವರನ್ನು ನಾವೆಲ್ಲ ಸ್ಮರಿಸುತ್ತಿದ್ದೇವೆ. ಈಗಲಾದ್ರೂ ದಾರಿ ತಪ್ಪಿದ ಸಂಘಟನೆಗಳು ಸರಿಯಾದ ರೀತಿ ಕೆಲಸ ಮಾಡಬೇಕಾಗಿದೆ. ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿ ಉಳಿಸಲು ಶ್ರಮಿಸೋಣ ಎಂದು ಕರೆ ನೀಡಿದರು.

ನನಗೆ ಕನ್ನಡ ಬರೋಲ್ಲ ಅಂತಾರೆ. ನನ್ನ ಮಾತೃ ಭಾಷೆ ಲಂಬಾಣಿ, ಶಿಕ್ಷಣ ಪಡೆದಿದ್ದು ಮರಾಠಿ ಭಾಷೆಯಲ್ಲಿ ಆಗ ಕನ್ನಡ ಶಾಲೆಗಳೇ ಈ ಭಾಗದಲ್ಲಿ ಇರಲಿಲ್ಲ. ನಾವು ಕನ್ನಡ ಕಲಿಯದೆ ಸಾಕಷ್ಟು ನಷ್ಟ ಅನುಭವಿಸಿದ್ದೀವಿ. ಆಗಿನ ಪರಿಸ್ಥಿತಿ ಹಾಗಿತ್ತು ನಮ್ಮದೇನ್‌ ತಪ್ಪಿದೆ. ಈಗ ಪ್ರತಿಯೊಬ್ಬರು ಕನ್ನಡ ಕಲಿತಾ ಇದ್ದಾರೆ ಅದಕ್ಕೆ ಪೂರಕವಾಗಿ ನಾವೆಲ್ಲರು ವಾತಾವರಣ ನಿರ್ಮಾಣ ಮಾಡಬೇಕಾಗಿದೆ ಎಂದು ಚವ್ಹಾಣ್‌ ಹೇಳಿದರು.

ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಔರಾದ್‌ ಮತ್ತು ಕಮಲನಗರ ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಅನುದಾನ ನೀಡಬೇಕು ಎಂದು ಬೇಡಿಕೆಯಿಟ್ಟರು.

ವೇದಿಕೆಯಲ್ಲಿ ಹಿರಿಯ ಸಾಹಿತಿ ಶಿವಕುಮಾರ್ ಕಟ್ಟೆ, ಪಪಂ ಅಧ್ಯಕ್ಷೆ ಸರೂಬಾಯಿ ಘೂಳೆ, ತಾಲೂಕು ಕಸಾಪ ಅಧ್ಯಕ್ಷ ಶಾಲಿವಾನ ಉದಗಿರೆ, ಪ್ರಶಾಂತ ಮಠಪತಿ, ಶಿವಕುಮಾರ್‌ ಘಾಟೆ, ಶಿವಾಜಿರಾವ್‌ ಪಾಟೀಲ್‌, ಜ್ಯೋತಿ ಬೊಮ್ಮಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆಯಲ್ಲಿ ಔರಾದ್‌ ಮತ್ತು ಕಮಲನಗರ ತಾಲೂಕಿನ ವಿವಿಧ ಗ್ರಾಮಗಳ 30 ಜನ ಸಾಹಿತಿಗಳು ಮತ್ತು ಕಲಾವಿದರನ್ನು ಸನ್ಮಾನಿಸಿ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು. ಶಾಸಕ ಪ್ರಭು ಚವ್ಹಾಣ್‌ ಅವರಿಗೆ ''''''''ಸಾಹಿತ್ಯ ಸಂವರ್ಧಕ'''''''' ಪ್ರಶಸ್ತಿ ನೀಡಿ ಗೌರವಿಸಲಾಯಿತು.