ಸಾರಾಂಶ
ಮಂಗಳೂರು : ಕೇಂದ್ರ ಸರ್ಕಾರ 5.80 ಕೋಟಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. ರಾಜ್ಯದಲ್ಲಿ ಅನರ್ಹತೆ ಹೊಂದಿರುವ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿದರೆ ಮಾತನಾಡುವವರು ಕೇಂದ್ರ ಸರ್ಕಾರ ರದ್ದು ಮಾಡಿದ್ದರ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಆರೋಗ್ಯ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆರಿಗೆ ಕಟ್ಟುವವರು, ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಪಡೆದರೆ ಅದನ್ನು ರದ್ದು ಮಾಡಬಾರದಾ? ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಬಗ್ಗೆ ಮಾತನಾಡುವ ಬಿಜೆಪಿಯವರು ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದರು.
ಬಿಪಿಎಲ್- ಅರ್ಹರಿಗೆ ಸಮಸ್ಯೆಯಾಗಲು ಬಿಡಲ್ಲ: ರಾಜ್ಯದಲ್ಲಿ ಕೆಲವೆಡೆ ಶೇ.80, ಇನ್ನೂ ಕೆಲವೆಡೆ ಶೇ. 90ರಷ್ಟು ಬಿಪಿಎಲ್ ಕಾರ್ಡ್‌ಗಳನ್ನು ನೀಡಲಾಗಿದೆ. ವೈಜ್ಞಾನಿಕವಾಗಿ ನೋಡಿದರೆ ಅಷ್ಟು ಬಿಪಿಎಲ್ ನೀಡಲು ಸಾಧ್ಯವೇ ಇಲ್ಲ. ಅನರ್ಹತೆ ಇರುವ ಕಾರ್ಡ್‌ಗಳನ್ನು ತೆಗೆಯಬೇಕಿದೆ. ತೆರಿಗೆ ಕಟ್ಟುವವರು, ಸರ್ಕಾರಿ ನೌಕರರು ಇಂಥ ಕೆಲವೇ ಕೆಲವು ಮಾನದಂಡಗಳ ಪ್ರಕಾರ ಸಾವಿರಾರು ಬಿಪಿಎಲ್ ಕಾರ್ಡ್ ರದ್ದು ಮಾಡುವಾಗ ತಾಂತ್ರಿಕ ಕಾರಣಗಳಿಂದ ಶೇ.5-10ರಷ್ಟು ಅರ್ಹರ ಬಿಪಿಎಲ್ ಕೂಡ ರದ್ದಾಗುವ ಸಾಧ್ಯತೆ ಇರುತ್ತದೆ. ಅದನ್ನು ಸರಿಪಡಿಸಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಅರ್ಹರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಗುಂಡೂರಾವ್ ತಿಳಿಸಿದರು.
ಬಿಪಿಎಲ್ ಕಾರ್ಡ್ ರದ್ದು ಮಾಡುವುದರಿಂದ ಗೃಹಲಕ್ಷ್ಮಿ ಯೋಜನೆಗೆ ಕಂಟಕ ಬರಲಿದೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ಆ ಪ್ರಶ್ನೆಯೇ ಇಲ್ಲ. ಗೃಹಲಕ್ಷ್ಮಿಗೂ ಪಡಿತರ ಚೀಟಿಗೂ ಯಾವುದೇ ಸಂಬಂಧವಿಲ್ಲ. ತೆರಿಗೆ ಕಟ್ಟುವವರಿಗೆ ಗೃಹಲಕ್ಷ್ಮಿ ನೀಡಲಾಗುತ್ತಿಲ್ಲ. ಉಳಿದಂತೆ ಎಪಿಎಲ್ ಕಾರ್ಡ್‌ನವರಿಗೂ ಗೃಹಲಕ್ಷ್ಮಿ ಸಿಗುತ್ತಿದೆ ಎಂದು ಹೇಳಿದರು.
ನಬಾರ್ಡ್ ಅನ್ಯಾಯ- ಜೋಶಿ ಮಾತೇಕಿಲ್ಲ?:
ನಬಾರ್ಡ್‌ನಿಂದ ರಾಜ್ಯಕ್ಕೆ 2,500 ಕೋಟಿ ರು. ಕಡಿತವಾಗಿದೆ. ಸಣ್ಣ ಪುಟ್ಟ ವಿಚಾರಗಳ ಬಗ್ಗೆ ಮಾತನಾಡುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇಷ್ಟು ಗಂಭೀರ ವಿಚಾರದ ಬಗ್ಗೆ ಏಕೆ ಮಾತನಾಡುತ್ತಿಲ್ಲ? ರಾಜ್ಯಕ್ಕೆ ಮುಖ್ಯವಾಗಿ ಬೇಕಾಗಿರುವ ವಿಚಾರದ ಬಗ್ಗೆ ಮೊದಲು ಮಾತನಾಡಲಿ. ಕನಿಷ್ಠ ಪಕ್ಷ ಕೇಂದ್ರದ ಬಳಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಲೂ ಬಾಯಿ ಬರಲ್ಲ ಅಂದರೆ ಬಿಜೆಪಿ ನಾಯಕರು, ಸಚಿವರಿಗೆ ಏನು ಹೇಳಬೇಕು? ಅವರು ಕೇಂದ್ರದ ಗುಲಾಮರು. ಆದರೆ ರಾಜ್ಯ ಸರ್ಕಾರ ಗುಲಾಮಗಿರಿಗೆ ಹೋಗಲ್ಲ. ಈ ಕುರಿತು ಹೋರಾಟ ಮಾಡಲೂ ಸಿದ್ಧ ಎಂದರು.
2 ಕ್ಷೇತ್ರದಲ್ಲಿ ಗೆದ್ದೆ ಗೆಲ್ತೀವಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕುರಿತಾದ ಎಕ್ಸಿಟ್ ಪೋಲ್‌ಗಳಿಗೆ ಹೆಚ್ಚು ಮಹತ್ವ ನೀಡಲ್ಲ.
ಮೂರೂ ಕ್ಷೇತ್ರಗಳಲ್ಲೂ ಉತ್ತಮ ಫೈಟ್ ನೀಡಿದ್ದೇವೆ. ಮೂರರಲ್ಲೂ ಗೆಲ್ಲುವ ಅವಕಾಶ ಇದೆ. ಎರಡು ಕ್ಷೇತ್ರಗಳಲ್ಲಿ ಖಂಡಿತ ಗೆದ್ದೇ ಗೆಲ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾನೂನು ಒಪ್ಪದಿದ್ದರೆ ನಕ್ಸಲ್ ತೀವ್ರವಾದಿಗಳ ವಿರುದ್ಧ ಕ್ರಮ
ನಕ್ಸಲ್ ಚಟುವಟಿಕೆ ಗಂಭೀರ ವಿಚಾರ. ಈ ಹಿಂದೆ ನಕ್ಸಲ್‌ವಾದಿಗಳನ್ನು ಸಮಾಧಾನಪಡಿಸಿ ಮುಖ್ಯವಾಹಿನಿಗೆ ತರುವ ಕೆಲಸ ಅನೇಕ ಸರ್ಕಾರಗಳಿಂದ ನಡೆದಿದೆ. ಈಗ ಉದ್ಭವಿಸಿರುವ ಸಮಸ್ಯೆಯನ್ನು ಗೃಹ ಇಲಾಖೆ ಸೂಕ್ತವಾಗಿ ನಿಭಾಯಿಸುತ್ತಿದೆ. ನಕ್ಸಲರನ್ನು ಮುಖ್ಯವಾಹಿನಿಗೆ ತರಬೇಕಾದ ಅಗತ್ಯವಿದೆ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಲು ಒಪ್ಪದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಕಾರ್ಕಳದಲ್ಲಿ ಇತ್ತೀಚೆಗೆ ನಡೆದ ಎನ್‌ಕೌಂಟರ್ ಹತ್ಯೆ ಮಾಡಬೇಕೆಂದೇ ಮಾಡಿದ್ದಲ್ಲ. ತೀವ್ರ ರೀತಿಗೆ ಹೋದಾಗ ಎನ್‌ಕೌಂಟರ್ ಆಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇ.ಡಿ. ಬಿಜೆಪಿ ಅಂಗಸಂಸ್ಥೆ: ಗುಂಡೂರಾವ್
ಇ.ಡಿ. ಭ್ರಷ್ಟಾಚಾರ ವಿರುದ್ಧ ಇರುವ ಸಂಸ್ಥೆಯಾಗಿ ಉಳಿದಿಲ್ಲ. ವಿರೋಧ ಪಕ್ಷಗಳನ್ನು ಹೆದರಿಸಲಿಕ್ಕಾಗಿಯೇ ಇದೆ. ಅದೀಗ ಬಿಜೆಪಿ ಅಂಗಸಂಸ್ಥೆ- ಪೊಲಿಟಿಕಲ್ ಏಜೆನ್ಸಿ ಆಗಿಬಿಟ್ಟಿದೆ. ಅದಕ್ಕೀಗ ಯಾವ ನೈತಿಕತೆಯೂ ಉಳಿದಿಲ್ಲ. ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ ತೋರುತ್ತಿದೆ. ನೋಟಿಸ್ ಕೊಡುವುದಾಗಿ ಹೆದರಿಸೋದು, ಅಪಪ್ರಚಾರ ಮಾಡಿಸೋದು, ನಾಯಕರ ಆತ್ಮಸ್ಥೈರ್ಯ ಕುಗ್ಗಿಸೋದು, ವಿರೋಧ ಪಕ್ಷದವರನ್ನು ಬ್ಲ್ಯಾಕ್‌ಮೇಲ್ ಮಾಡಲು, ಅವರನ್ನು ಬಿಜೆಪಿಗೆ ಸೇರಿಸಲು, ದುಡ್ಡು ಕೀಳಲು ಇಡಿ ಬಳಕೆ ಮಾಡುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದರು.