ವಿಧಾನಸಭೆಯ ಸ್ಪೀಕರ್ ಆಗಿರುವ ಯು.ಟಿ. ಖಾದರ್ ಅವರಿಗೆ ಉಡುಪಿ ಶಾಸಕರು ಅವಮಾನ ಮಾಡಿದ್ದಾರೆ. ಇದು ಖಂಡನಾರ್ಹ ಎಂದು ಕಾಂಗ್ರೆಸ್ ನಾಯಕ ಪ್ರಸಾದ್ ರಾಜ್ ಕಾಂಚನ್ ಹೇಳಿದ್ದಾರೆ.

ಉಡುಪಿ: ಐದು ಬಾರಿ ಶಾಸಕರಾಗಿ ಗೆದ್ದು, ತಮ್ಮ ಸಾಮಾರ್ಥ್ಯದಿಂದ ರಾಜ್ಯದ ವಿಧಾನಸಭೆಯ ಸ್ಪೀಕರ್ ಆಗಿರುವ ಯು.ಟಿ. ಖಾದರ್ ಅವರಿಗೆ ಉಡುಪಿ ಶಾಸಕರು ಅವಮಾನ ಮಾಡಿದ್ದಾರೆ. ಇದು ಖಂಡನಾರ್ಹ ಎಂದು ಕಾಂಗ್ರೆಸ್ ನಾಯಕ ಪ್ರಸಾದ್ ರಾಜ್ ಕಾಂಚನ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಶಾಸಕರು ವಿಧಾನ ಸಭೆಯಲ್ಲಿ ಉಡುಪಿ ಪರ್ಯಾಯಕ್ಕೆ ಅನುದಾನ ಕೇಳುವ ನೆಪದಲ್ಲಿ ಅನಗತ್ಯ ವಿಷಯಗಳ ಬಗ್ಗೆ ಮಾತನಾಡಿದ, ಸಮಯಕ್ಕೆ ಮಹತ್ವ ಕೊಡುವ ಸ್ಪೀಕರ್ ಖಾದರ್ ಅವರು ಕರಾವಳಿಯ ಆಡುಭಾಷೆಯಲ್ಲಿ ‘ನಿಮ್ಮ ಹರಿಕತೆ ಬೇಡ, ನೇರ ವಿಷಯವನ್ನು ಮಾತನಾಡಿ’ ಎಂದಿದ್ದರು, ಖಾದರ್ ಹೇಳಿದ್ದರಲ್ಲಿ ಯಾವ ತಪ್ಪೂ ಇಲ್ಲ, ಆದರೂ ಹರಿಕತೆ ಶಬ್ದ ಬಳಕೆಯಿಂದ ಹಿಂದುಗಳಿಗೆ ಅವಮಾನ ಆಗಿದೆ ಎಂದು ಶಾಸಕರು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕರು ಕೇವರ ಹಿಂದುಗಳ ಶಾಸಕರಲ್ಲ, ಅವರು ತಮ್ಮ ಕ್ಷೇತ್ರದ ಎಲ್ಲಾ ಧರ್ಮದವರ ಪ್ರತಿನಿಧಿ, ಎಲ್ಲಾ ಧರ್ಮದವರ ಸಮಸ್ಯೆಗಳನ್ನು ಸದನದಲ್ಲಿ ಮಾತನಾಡಬೇಕು. ತಾನು ಕೇವಲ ಹಿಂದುಗಳ ಪ್ರತಿನಿಧಿ ಎಂಬಂತಾಡುವ ಶಾಸಕರು ಹಿಂದೂ ಧರ್ಮಕ್ಕೆ ಸರ್ಕಾರದಿಂದ ಏನು ಯೋಜನೆ ತಂದಿದ್ದಾರೆ ಎಂದು ಕಾಂಚನ್ ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ ಪರ್ಯಾಯೋತ್ಸವಕ್ಕೆ ಅನುದಾನ ನೀಡಿಲ್ಲ ಎಂದು ಶಾಸಕರು ಹೇಳಿದ್ದಾರೆ, ಹಾಗಿದ್ದರೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪರ್ಯಾಯೋತ್ಸವಕ್ಕೆ ಎಷ್ಟು ಅನುದಾನ ಕೊಟ್ಟಿದ್ದಾರೆ ಶಾಸಕರು ಬಹಿರಂಗಪಡಿಸಬೇಕು ಎಂದು ಕಾಂಚನ್ ಒತ್ತಾಯಿಸಿದರು.

ನಗರಸಭೆಗೆ ಕಳೆದ 2 ವರ್ಷಗಳಿಂದ ಉಡುಪಿ ನಗರಸಭೆಗೆ ಕೇಂದ್ರಸರ್ಕಾರದಿಂದ 13 ಮತ್ತು 14ನೇ ಹಣಕಾಸು ಯೋಜನೆಯಿಂದ ನಯಾಪೈಸೆ ಬಂದಿಲ್ಲ, ಶಾಸಕರು ಈ ಬಗ್ಗೆ ಯಾಕೆ ಏನೂ ಪ್ರಯತ್ನ ಮಾಡುತ್ತಿಲ್ಲ ಎಂದವರು ಪ್ರಶ್ನಿಸಿದರು.ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉಡುಪಿ ಪರ್ಯಾಯೋತ್ಸವದ ಸಿದ್ದತೆಗಾಗಿ 10 ಕೋಟಿ ರು. ಅನುದಾನ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ, ಶಾಸನಬದ್ಧವಾಗಿ ಈ ರೀತಿ ಹಣ ನೀಡುವುದಕ್ಕೆ ಸಾಧ್ಯವಿದೆಯೋ ಇಲ್ಲವೋ ಗೊತ್ತಿಲ್ಲ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಕುಶಲ್ ಶೆಟ್ಟಿ, ಕೀರ್ತಿ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಪ್ರಶಾಂತ್ ಉಪಸ್ಥಿತರಿದ್ದರು.