ತಾಲೂಕಿನ ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರು ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಗೋಪಾಲಕೃಷ್ಣ ನಾಯಕ ನೇತೃತ್ವದಲ್ಲಿ ವಾಣಿಜ್ಯ ಬಂದರು ವಿರೋಧಿ ಸಮಿತಿಯವರು ಬೆಳಗಾವಿಯ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಪರಿಸರಕ್ಕೆ ಮಾರಕವಾದ ಯೋಜನೆ ಜಿಲ್ಲೆಯ ಮೇಲೆ ಹೇರಬೇಡಿ
ಕನ್ನಡಪ್ರಭ ವಾರ್ತೆ ಅಂಕೋಲಾತಾಲೂಕಿನ ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರು ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಗೋಪಾಲಕೃಷ್ಣ ನಾಯಕ ನೇತೃತ್ವದಲ್ಲಿ ವಾಣಿಜ್ಯ ಬಂದರು ವಿರೋಧಿ ಸಮಿತಿಯವರು ಬೆಳಗಾವಿಯ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ನೌಕಾನೆಲೆ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಂಡು ನಿರ್ಗತಿಕರಾಗಿರುವ ನಾವು ಬಾಧಿತ ಪ್ರದೇಶದಿಂದ ಅತಂತ್ರರಾಗಿದ್ದೇವೆ. ಈಗ ಮತ್ತೆ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣದಿಂದ ಸುಮಾರು 25000 ಕೃಷಿ ಆಧಾರಿತ ಮತ್ತು ಹತ್ತು ಸಾವಿರ ಮೀನುಗಾರಿಕೆ ಆಧಾರಿತ ಕುಟುಂಬಗಳು ಸೇರಿದಂತೆ ಅನೇಕ ವೃತ್ತಿಪರ ಕುಟುಂಬಗಳು ತೊಂದರೆಗೊಳಪಡುತ್ತವೆ.ಸಮುದ್ರ ಸಂಶೋಧಕರ ವರದಿಯ ಪ್ರಕಾರ ಮೀನುಗಾರಿಕಾ ಪ್ರದೇಶವಾದ ಕೇಣಿ ಮತ್ತು ಬೆಳಂಬಾರ ಸಮುದ್ರ ಕಿನಾರೆಗಳು ವಿವಿಧ ಜಾತಿಯ ಮೀನು ಮತ್ತು ಸಿಗಡಿ ಸಂತಾನೋತ್ಪತ್ತಿ ಮಾಡುವ ಕೇಂದ್ರವಾಗಿದ್ದು ಭಟ್ಕಳದಿಂದ ಮಾಜಾಳಿಯವರಿಗೆ ಯಾಂತ್ರಿಕ ಮತ್ತು ನಾಡ ದೋಣಿ ಮೀನುಗಾರರು ಈ ಭಾಗದಲ್ಲಿ ಮೀನುಗಾರಿಕೆ ಮಾಡಿ ಸ್ವಾವಲಂಬಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಅಭಿವೃದ್ಧಿ ಚಟುವಟಿಕೆಗಳಿಂದ ಮೀನು ಹಾಗೂ ಜಲಚರಗಳ ಸಂತತಿ ನಾಶವಾಗಲಿದೆ ಎಂದು ಮನವರಿಕೆ ಮಾಡಿದರು.
ದೇಶದ ರಕ್ಷಣೆಗಾಗಿಯೇ ನಿರ್ಮಾಣಗೊಂಡಿರುವ ನೌಕಾನೆಲೆ ವ್ಯಾಪ್ತಿ ಪ್ರದೇಶದ ಹತ್ತಿರದಲ್ಲಿ ಇಂತಹ ಅವೈಜ್ಞಾನಿಕ ಮತ್ತು ಭವಿಷ್ಯದಲ್ಲಿ ಭದ್ರತೆಗೆ ಆತಂಕವಾಗಿರುವ ಇಂತಹ ಯೋಜನೆಯನ್ನು ಅನುಷ್ಠಾನಗೊಳಿಸಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಕೇಣಿ ವಾಣಿಜ್ಯ ಬಂದರು ಯೋಜನೆಯನ್ನು ಕೈ ಬಿಟ್ಟು ಮುಂದೆಯೂ ಜನರ ಬದುಕು ಕಸಿಯುವಂತಹ ಮತ್ತು ಪರಿಸರಕ್ಕೆ ಮಾರಕವಾದ ಯಾವುದೇ ಯೋಜನೆಗಳನ್ನು ಉತ್ತರ ಕನ್ನಡ ಜಿಲ್ಲೆಯ ಮೇಲೆ ಹೇರಬಾರದು ಎಂದು ಮನವಿ ಸಲ್ಲಿಸಿದರು.ಯೋಜನೆಯಿಂದ ನಿಮಗೆ ತೊಂದರೆಯಾಗುತ್ತಿದ್ದರೆ, ಈ ಬಗ್ಗೆ ಪರಾಮರ್ಶೆ ನಡೆಸಲಾಗುವುದು. ನಿಮಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ವಿಶೇಷವಾಗಿ ಪ್ರಯತ್ನಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕೇಣಿಯ ಬಂದರು ವಿರೋಧಿ ಹೋರಾಟದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾದಾಗ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೇಣಿಯ ಜನತೆಯೊಂದಿಗೆ ನಾನೆಂದು ಜೊತೆಗಿರುತ್ತೇನೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಹೇಳಿದ್ದಾರೆ.ಈ ಸಂದರ್ಭ ಸಂಜೀವ ಬಲೇಗಾರ, ಪ್ರಮೋದ ಬಾನಾವಳಿಕರ,ವೆಂಕಟೇಶ ದುರ್ಗೆಕರ,ಕೇಶವ ನಾಯ್ಕ, ಕಷ್ಣಮೂರ್ತಿ ನಾಯಕ, ಗೋವಿಂದ ಗೌಡ, ಮಂಜುನಾಥ ಟಾಕೇಕರ ಸೇರಿದಂತೆ ಇತರರು ಇದ್ದರು.