ಇಂದು ಕೃಷ್ಣಾಷ್ಠಮಿ: ದೇವಾಲಯಗಳಲ್ಲಿ ವಿಶೇಷ ಪೂಜೆ

| Published : Aug 26 2024, 01:39 AM IST

ಸಾರಾಂಶ

ಶ್ರೀಕೃಷ್ಣ ಜನ್ಮಾಷ್ಠಮಿ ಹಿನ್ನೆಲೆಯಲ್ಲಿ ಸೋಮವಾರ ಇಸ್ಕಾನ್‌ ಸೇರಿ ನಗರದ ಹಲವು ಶ್ರೀಕೃಷ್ಣ, ವಿಷ್ಣು ಮಂದಿರ, ಮಠಗಳಲ್ಲಿ ವಿಶೇಷ ಧಾರ್ಮಿಕ ಕೈಂಕರ್ಯ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಶ್ರೀಕೃಷ್ಣ ಜನ್ಮಾಷ್ಠಮಿ ಹಿನ್ನೆಲೆಯಲ್ಲಿ ಸೋಮವಾರ ಇಸ್ಕಾನ್‌ ಸೇರಿ ನಗರದ ಹಲವು ಶ್ರೀಕೃಷ್ಣ, ವಿಷ್ಣು ಮಂದಿರ, ಮಠಗಳಲ್ಲಿ ವಿಶೇಷ ಧಾರ್ಮಿಕ ಕೈಂಕರ್ಯ ನಡೆಯಲಿದೆ. ಮಕ್ಕಳಿಗಾಗಿ ಕೃಷ್ಣ ಸೇರಿದಂತೆ ವಿವಿಧ ವೇಷ ಪ್ರದರ್ಶನ ಸೇರಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಪಂಚಾಮೃತ ಅಭಿಷೇಕ, ಉಯ್ಯಾಲೆ ಸೇವೆ, ವಿಶೇಷ ಅಲಂಕಾರ, 108 ಬಗೆಯ ಭಕ್ಷ್ಯಗಳ ನೈವೇದ್ಯ ಅರ್ಪಣೆ ಸೇರಿ ವಿವಿಧ ಬಗೆಯ ಪೂಜೆಗಳನ್ನು ದೇವಸ್ಥಾನಗಳಲ್ಲಿ ಆಯೋಜನೆ ಮಾಡಲಾಗಿದೆ.

ರಾಜಾಜಿನಗರದ ಇಸ್ಕಾನ್‌ ಹರೇಕೃಷ್ಣ ಗಿರಿ, ವೈಕುಂಠಿಗಿರಿ, ಮಲ್ಲೇಶ್ವರದ ವೇಣುಗೋಪಾಲಸ್ವಾಮಿ ದೇವಾಲಯ, ಬಸವನಗುಡಿಯ ಗೋವರ್ಧನಗಿರಿ ಮಠ, ಶ್ರೀನಗರದ ವಿದ್ಯಾಪೀಠ, ಕೋರಮಂಗಲದ ಎಡನೀರು ಮಠ, ಇಂದಿರಾನಗರದ ಶ್ರೀಕೃಷ್ಣ ದೇವಸ್ಥಾನಗಳಲ್ಲಿ ಪೂಜೆಗಳಿವೆ. ಇಸ್ಕಾನ್‌ನಲ್ಲಿ ತಡರಾತ್ರಿವರೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಿವೆ.

ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಬರುವುದದಿಂದ ದರ್ಶನ, ರಾಧಾಕೃಷ್ಣರ ಜುಲಾನ ಸೇವೆ ಸೇರಿದಂತೆ ವಿವಿಧ ಸೇವೆಗಳು, ಪ್ರಸಾದ ವಿತರಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜೊತೆಗೆ ಭಕ್ತರಿಗೆ ಅವಲಕ್ಕಿ ಪ್ರಸಾದ, ಪುಳಿಯೊಗರೆ ಸೇರಿ ಪ್ರಸಾದ ವಿತರಣೆ ಆಗಲಿದೆ. ಹಲವರು ಉಪವಾಸ ವ್ರತವನ್ನೂ ಆಚರಿಸಲಿದ್ದಾರೆ.

ಮಕ್ಕಳಿಗಾಗಿ ಸ್ಪರ್ಧೆ:

ವಿವಿಧೆಡೆ ಸಂಘ ಸಂಸ್ಥೆಗಳು, ಶಾಲೆ, ದೇವಸ್ಥಾನಗಳಿಂದ ಮಕ್ಕಳಿಗಾಗಿ ಶ್ರೀಕೃಷ್ಣ, ರಾಧೆಯರ ವೇಷಭೂಷಣ ಸ್ಪರ್ಧೆ, ಬಹುಮಾನ ವಿತರಣೆಯಂತ ಕಾರ್ಯಕ್ರಮ ಆಯೋಜಿಸಲಾಗಿದೆ. ಕೃಷ್ಣಾಷ್ಠಮಿ ಮುನ್ನಾದಿನವಾದ ಭಾನುವಾರ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬಕ್ಕಾಗಿ ಖರೀದಿ ಜೋರಾಗಿತ್ತು. ಹಣ್ಣು ಹಂಪಲು ಹೂವಿನ ಜೊತೆಗೆ , ಮಕ್ಕಳಿಗಾಗಿ ಶ್ರೀಕೃಷ್ಣನ ಅಲಂಕಾರಿಕ ಧರಿಸು, ಬಾಸಿಂಗ, ಕೊಳಲನ್ನು ಪಾಲಕರು ಖರೀದಿಸಿದರು.