ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್
ಮಹಾಶಿವರಾತ್ರಿ ಪ್ರಯುಕ್ತ ಕೋಟಿಲಿಂಗೇಶ್ವರ ದೇವಾಲಯವು ಸಕಲ ರೀತಿಯಲ್ಲಿ ಸಜ್ಜುಗೊಂಡಿದ್ದು, ಶಿವರಾತ್ರಿಯಂದು ದೇವಾಲಯದಲ್ಲಿ ದಿನದ ೨೪ ಗಂಟೆಗಳ ಕಾಲ ವಿಶೇಷ ಪೂಜೆಗಳು ನಡೆಯಲಿದ್ದು, ಶಿವನ ಆರಾಧನೆಯ ಮೂಲಕ ಲಕ್ಷಾಂತರ ಭಕ್ತರು ಶಿವರಾತ್ರಿಯಂದು ದರ್ಶನ ಪಡೆಯಲಿದ್ದಾರೆ.ಕಳೆದ ೪೮ ವರ್ಷದ ಹಿಂದೆ ಸ್ಥಾಪನೆಯಾದ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಹಂತ ಹಂತವಾಗಿ ಪ್ರತಿ ವರ್ಷ ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡುತ್ತಾ ಬರಲಾಗಿದ್ದು, ದೇವಾಲಯದಲ್ಲಿ ೯೦ ಲಕ್ಷಕ್ಕೂ ಹೆಚ್ಚು ಶಿವಲಿಂಗಗಳ ಪ್ರತಿಷ್ಠಾಪಿಸಲಾಗಿದೆ. ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡಿರುವ ಕುಟುಂಬಗಳು ಶಿವರಾತ್ರಿಯಂದು ದೇವಾಲಯಕ್ಕೆ ಬಂದು ಪೂಜೆ ನೇರವೇರಿಸುವುದು ಶಿವರಾತ್ರಿಯ ವಿಶೇಷವಾಗಿದೆ.
ಕ್ಷೇತ್ರಕ್ಕೆ ಜನಸ್ತೋಮ:ಶ್ರೀ ಕ್ಷೇತ್ರಕ್ಕೆ ರಾಜ್ಯದ ನಾನಾ ಭಾಗಗಳ ಜತೆಗೆ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿ ಹಲವು ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಶಿವರಾತ್ರಿಯಂದು ವಿಶೇಷ ಪೂಜೆ, ಉಪವಾಸ, ವ್ರತ, ಜಾಗರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ದೇವಾಲಯಕ್ಕೆ ಬರುವ ಭಕ್ತರಿಗೆ ನಿತ್ಯ ಮಧ್ಯಾಹ್ನದಂದು ಅನ್ನಸಂತರ್ಪಣೆ ಮಾಡಲಾಗುತ್ತದೆ. ಅನ್ನದಾನ ಕಾರ್ಯಕ್ರಮಕ್ಕಾಗಿ ವಿಶೇಷ ಅಡುಗೆ ಕೋಣೆ, ಭೋಜನಾಲಯವನ್ನು ಸ್ಥಾಪಿಸಲಾಗಿದೆ. ವಿಶ್ರಾಂತಿ ಗೃಹಗಳನ್ನು ಸಹ ಸ್ಥಾಪಿಸಲಾಗಿದೆ.
ನಾನಾ ದೇವಾಲಯಗಳ ಸ್ಥಾಪನೆ:ಕೋಟಿಲಿಂಗೇಶ್ವರ ದೇವಾಲಯದ ಆವರಣದಲ್ಲಿ ವಿಘ್ನೇಶ್ವರ ದೇವಾಲಯ, ಬ್ರಹ್ಮ, ವಿಷ್ಣು, ಮಹೇಶ್ವರ, ಮಂಜುನಾಥ, ವೆಂಕಟರಮಣಸ್ವಾಮಿ, ಅಯ್ಯಪ್ಪ, ಅನ್ನಪೂರ್ಣೇಶ್ವರಿ, ರಾಘವೇಂದ್ರ ಸ್ವಾಮಿ, ಸಂತೋಷ ಮಾತೆ, ಪಾಂಡುರಂಗಸ್ವಾಮಿ, ಪಂಚಮುಖಿ ಗಣಪತಿ, ಶ್ರೀರಾಮಚಂದ್ರ ದೇವಾಲಯ, ಪಂಚಮುಖಿ ಅಂಜನೇಯ ದೇವಾಲಯ, ಕನ್ಯಕಾ ಪರಮೇಶ್ವರಿ, ದತ್ತಾತ್ರೇಯ ದೇವಾಲಯ, ಕರಿಮಾರಿಯಮ್ಮ, ಶನೇಶ್ವರಸ್ವಾಮಿ ದೇವಾಲಯ, ೧೮ ಓಂ ಶಕ್ತಿ ದೇವಾಲಯಗಳು, ೧೦೮ ಅಡಿ ಬೃಹತ್ ಲಿಂಗ, ೫೬ ಅಡಿ ಎತ್ತರದ ನಂದಿ, ಜಲಕಂಠೇಶ್ವರ ದೇವಾಲಯ, ಶಿರಡಿ ಸಾಯಿಬಾಬ ಮಂದಿರದಂತಹ ದೇವಾಲಯಗಳ ಸಮುಚ್ಛಯ ನಿರ್ಮಾಣ ಮಾಡಲಾಗಿದೆ, ಶಿವರಾತ್ರಿಯ ಮುನ್ನಾದಿನ ಕಲ್ಯಾಣ ಉತ್ಸವವನ್ನು ಮಾಡಲಾಗುವುದು.
ಗಣ್ಯರಿಂದ ಶಿವಲಿಂಗ ಪ್ರತಿಷ್ಠಾಪನೆ:ಶ್ರೀ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮೆಗಾಸ್ಟಾರ್ ಚಿರಂಜೀವಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಎಂ.ವೀರಪ್ಪ ಮೊಯ್ಲಿ, ಜೆ.ಎಚ್.ಪಟೇಲ್, ಧರಂ ಸಿಂಗ್ ಸೇರಿದಂತೆ ಸಿನಿಮಾ ರಂಗದ ಪ್ರಮುಖರು, ರಾಜಕಾರಣಿಗಳು ಹಾಗೂ ಉದ್ಯಮಿಗಳು ತಮ್ಮ ಹೆಸರಿನಲ್ಲಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಿರುವುದು ಈ ಕ್ಷೇತ್ರದ ವಿಶೇಷವಾಗಿದೆ.
ಶಾಸಕರಿಂದ ೨೫ ಲಕ್ಷ ರು.ಗಳ ಸಿಮೆಂಟ್ ರಸ್ತೆ:ದೇವಾಲಯಕ್ಕೆ ಬರುವ ಶಿವನ ಭಕ್ತರ ಅನುಕೂಲಕ್ಕಾಗಿ ಶಾಸಕಿ ರೂಪಕಲಾ ಶಶಿಧರ್ ಅನುದಾನದಲ್ಲಿ ೨೫ ಲಕ್ಷ ರು.ಗಳ ವೆಚ್ಚದಲ್ಲಿ ದೇವಾಲಯದ ಸುತ್ತಲೂ ಸಿಮೆಂಟ್ ರಸ್ತೆಯನ್ನು ನಿರ್ಮಿಸಿದ್ದಾರೆ. ಇದರಿಂದ ದೇವಾಲಯಕ್ಕೆ ಬರುವ ಭಕ್ತರಿಗೆ ಅನುಕೂಲವಾಗಿದ್ದು, ಶಾಸಕರಿಗೆ ಧನ್ಯವಾದ ತಿಳಿಸುವುದಾಗಿ ಆಡಳಿತಾಧಿಕಾರಿ ಕೆ.ವಿ.ಕುಮಾರಿ ತಿಳಿಸಿದರು.
ಶಿವರಾತ್ರಿ ಪ್ರಯುಕ್ತ ಬ್ರಹ್ಮರಥೋತ್ಸವ:ಈಗಾಗಲೇ ಶಿವರಾತ್ರಿ ಪ್ರಯುಕ್ತ ದೇವಾಲಯದಲ್ಲಿ ಶಿವಲಿಂಗಗಳಿಗೆ ಬಣ್ಣವನ್ನು ಬಳಿದು ಸಕಲ ರೀತಿಯಲ್ಲಿ ಭಕ್ತರಿಗೆ ದರ್ಶನಕ್ಕೆ ಸಜ್ಜುಗೊಳಿಸಲಾಗಿದ್ದು, ಶಿವರಾತ್ರಿ ಪ್ರಯುಕ್ತ ಬೆಳಿಗ್ಗೆ ದೇವಾಲಯದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ, ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ಹವನ, ಲಿಂಗಗಳಿಗೆ ಅಭಿಷೇಕವನ್ನು ಪ್ರಧಾನ ಅರ್ಚಕರು ನೇರವೇರಿಸಲಿದ್ದಾರೆ. ಇಡೀ ರಾತ್ರಿ ಶಿವನ ಸನ್ನಿಧಿಯಲ್ಲಿ ಜಾಗರಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಕೋಲಾಟ, ಹರಿಕಥೆ ,ಶಿವನ ಭಜನೆ ಏರ್ಪಡಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದೇವಾಲಯದ ಆವರಣದಲ್ಲಿ ನಡೆಯುವ ಶಿವನ ಜಾಗರಣೆಯಲ್ಲಿ ಭಾಗವಹಿಸಲು ಕೋರುವುದಾಗಿ ಕೋಟಿಲಿಂಗೇಶ್ವರ ದೇವಾಲಯದ ಆಡಳಿತಾಧಿಕಾರಿ ಕೆ.ವಿ.ಕುಮಾರಿ ತಿಳಿಸಿದ್ದಾರೆ.