ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಸಹಕಾರಿ ಸಂಘಗಳು ಬೆಳೆದಷ್ಟು ಆಯಾ ಭಾಗದ ಶ್ರಮಿಕ ವರ್ಗಕ್ಕೆ ಆರ್ಥಿಕ ಸೌಕರ್ಯ ದೊರೆಯುವುದರಿಂದ ದುಡಿಯುವ ಜನರ ಆರ್ಥಿಕ ಸ್ಥಿತಿ ಸಶಕ್ತಗೊಂಡು ಬಡತನ ನಿವಾರಣೆಯಾಗುತ್ತದೆ ಎಂದು ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ಆಶೀರ್ವಚನ ನೀಡಿದರು.ಬನಹಟ್ಟಿಯ ಭದ್ರನ್ನವರ ಬಂಗ್ಲೆ ಆವರಣದಲ್ಲಿ ಗುರುವಾರ ನಡೆದ ದಿ.ಸಿದ್ದು ನ್ಯಾಮಗೌಡ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ಬಳಿಕ ಮಾತನಾಡಿದ ಶ್ರೀಗಳು, ಠೇವುದಾರರ ವಿಶ್ವಾಸಕ್ಕೆ ಚ್ಯುತಿಯಾಗದಂತೆ ಸಂಸ್ಥೆಗಳು ಕಾರ್ಯ ಮಾಡಬೇಕಾಗುತ್ತದೆ. ಅದರಂತೆ ಸಾಲಗಾರರು ಕೂಡ ಸಂಸ್ಥೆಯಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಪ್ರಾಮಾಣಿಕತೆ ಮೆರೆಸುವ ಜೊತೆಗೆ ಸಹಕಾರಿಯ ಸರ್ವತೋಮುಖ ಪ್ರಗತಿಗೆ ನೆರವಾಗಬೇಕು ಎಂದರು.
ಅತಿಥಿಗಳಾಗಿದ್ದ ಪ್ರೊ.ಬಸವರಾಜ ಕೊಣ್ಣೂರ, ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ, ಸಹಕಾರಿ ಧುರೀಣ ಭೀಮಶಿ ಮಗದುಮ ಮಾತನಾಡಿ, ಸಂಸ್ಥೆ ಆರಂಭಗೊಂಡು ಕೇವಲ ನಾಲ್ಕು ವರ್ಷದೊಳಗೆ ₹೪೦೦ ಕೋಟಿ ಠೇವಣಿ ಸಂಗ್ರಹಿಸಿರುವುದು ದಾಖಲೆಯಾಗಿದ್ದು, ಜನತೆ ಸಂಸ್ಥೆಯ ಮೇಲಿಟ್ಟಿರುವ ವಿಶ್ವಾಸದ ಪ್ರತೀಕವಾಗಿದೆ ಎಂದು ಹೇಳಿದರು.೨೦೨೧ರ ಅಂತ್ಯದಲ್ಲಿ ಆರಂಭಗೊಂಡ ಸಹಕಾರಿ ಮೊದಲ ಆರ್ಥಿಕ ವರ್ಷದಲ್ಲೇ ₹೧೪೮ ಕೋಟಿ ಠೇವಣಿ ಹೊಂದಿ, ₹೧ಕೋಟಿ ಲಾಭ ಗಳಿಸಿತು. ಅಲ್ಲದೇ ಸದಸ್ಯರಿಗೆ ಶೇ.೧೨ರಷ್ಟು ಲಾಭಾಂಶ ಹಂಚಿಕೆ ಮಾಡಿದೆ ಎಂದು ಅಧ್ಯಕ್ಷ ಆನಂದ ನ್ಯಾಮಗೌಡ ವಿವರಿಸಿದರು. ಅದೇ ಸಾಲಿನಲ್ಲಿ ೩ ಶಾಖೆಗಳನ್ನು ಪ್ರಾರಂಭಿಸಿ ₹೩೮೨ ಕೋಟಿ ಠೇವಣಿ ಹೊಂದಿತು. ಜತೆಗೆ ₹೩ ಕೋಟಿ ಲಾಭದೊಂದಿಗೆ ಸದಸ್ಯರಿಗೆ ಶೇ.೧೫ ಲಾಭಾಂಶ ವಿತರಿಸಲಾಗಿದೆ ಎಂದು ವಿವರಿಸಿದರು.ಈಗ ೪ನೇ ಶಾಖೆಯಾಗಿರುವ ಬನಹಟ್ಟಿಯಲ್ಲಿಯೂ ದಾಖಲೆಯ ಠೇವಣಿ ಮತ್ತು ವ್ಯವಹಾರ ನಡೆಸುವ ವಿಶ್ವಾಸವಿದ್ದು, ಮಾಸಾಂತ್ಯದಲ್ಲಿ ಮುಧೋಳ ನಗರದಲ್ಲೂ ೫ನೇ ಶಾಖೆ ಆರಂಭವಾಗಲಿದೆ. ಎಲ್ಲ ಶಾಖೆಗಳಲ್ಲಿ ಗ್ರಾಹಕರು ಮೊಬೈಲ್ ಆ್ಯಪ್ ಬಳಸಿ ವ್ಯವಹರಿಸಲು, ಇ-ಸ್ಟಾಂಪ್, ಸುಲಭ ಸಾಲ ಸೌಲಭ್ಯ ಮೊದಲಾದ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಸದ್ಯ ಸಹಕಾರಿಯ ಒಟ್ಟು ಠೇವಣಿ ₹೪೦೦ ಕೋಟಿಗೂ ಮೀರಿದೆ. ಮುಂಬರುವ ದಿನಗಳಲ್ಲಿ ಹೆಚ್ಚು ಶಾಖೆಗಳನ್ನು ಆರಂಭಿಸುವ ಮೂಲಕ ಕಾರ್ಮಿಕರಿಗೆ, ರೈತರಿಗೆ, ನೇಕಾರರಿಗೆ ಆರ್ಥಿಕ ಸಾಲ ಸೌಲಭ್ಯ ನೀಡಲಾಗುವುದು ಎಂದರು.
ನಮ್ಮ ತಂದೆಯವರ ಆಶಯದಂತೆ ಬಾಗಲಕೋಟ-ಕುಡಚಿ ರೈಲು ಮಾರ್ಗದ ಅನುಷ್ಠಾನಕ್ಕೆ ಆಗ್ರಹಿಸಿ ನಡೆಸಿದ್ದ ಹೋರಾಟದಿಂದ ಇಂದು ಕಾಮಗಾರಿ ನಡೆಯುತ್ತಿದೆ. ನಮ್ಮ ೧೧ ಜನ ಹೋರಾಟಗಾರರ ಮೇಲೆ ಈಗಲೂ ಪ್ರಕರಣಗಳು ಜೀವಂತವಾಗಿವೆ ಎಂದರು.ಜಮಖಂಡಿ ಜಿಲ್ಲಾ ಕೇಂದ್ರವಾಗಲು ಎಲ್ಲ ಅರ್ಹತೆ ಹೊಂದಿದ್ದು, ತಮ್ಮದೇ ನೇತೃತ್ವದಲ್ಲಿ ಜಿಲ್ಲಾ ಕೇಂದ್ರವಾಗಿಸಲು ಹೋರಾಟ ನಡೆಸಬೇಕೆಂದು ಭೀಮಶಿ ಮಗದುಮ ಆಗ್ರಹಿಸಿದರು.
ವೇದಿಕೆಯಲ್ಲಿ ಉದ್ಯಮಿ ಸುಭಾಷ್‌ಚಂದ್ರ ಭದ್ರನ್ನವರ, ಶ್ರೀಶೈಲ ದಬಾಡಿ, ಮಲ್ಲಿಕಾರ್ಜುನ ಬಾಣಕಾರ, ನೀಲಕಂಠ ಮುತ್ತೂರ, ಈಶ್ವರ ಬಿದರಿ, ಬಸವರಾಜ ದಲಾಲ್, ರಂಗನಗೌಡ ಪಾಟೀಲ, ಮಲ್ಲಪ್ಪ ಸಿಂಗಾಡಿ, ಬುಡನ್‌ಸಾಬ್ ಜಮಾದಾರ, ಅಪ್ಪಾಸಾಬ ಶಿಂಧೆ, ಬಸವರಾಜ ನ್ಯಾಮಗೌಡ, ವರ್ಧಮಾನ ನ್ಯಾಮಗೌಡ, ಅನ್ವರ ಮೋಮಿನ್, ಮುತ್ತಪ್ಪ ತಳವಾರ, ಡಾ.ನಯನಾ ಮಾಳಗಿ, ಪೂರ್ಣಿಮಾ ಮಾಳಿ ಉಪಸ್ಥಿತರಿದ್ದರು.ಬಸಲಿಂಗಯ್ಯ ಹಿರೇಮಠ ಪ್ರಾರ್ಥಿಸಿದರು. ವರ್ಧಮಾನ ನ್ಯಾಮಗೌಡ ಸ್ವಾಗತಿಸಿದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು. ಸಭೆಯಲ್ಲಿ ಹರ್ಷವರ್ಧನ ಪಟವರ್ಧನ, ಡಾ.ಪಿ.ವಿ.ಪಟ್ಟಣ, ಸಿದ್ಧನಗೌಡ ಪಾಟೀಲ, ಮಹಾದೇವ ಶಿರಹಟ್ಟಿ, ಚನವೀರಪ್ಪ ಹಾದಿಮನಿ, ರಾಜಮಹೇಂದ್ರ ಭದ್ರನ್ನವರ, ರಾಜು ಬಾಣಕಾರ, ಮಹಾದೇವ ಚರಕಿ, ಶಿವಲಿಂಗಪ್ಪ ಶಿರಹಟ್ಟಿ, ಕಿರಣ ಕರ್ಲಟ್ಟಿ ಸೇರಿದಂತೆ ಪ್ರಮುಖರಿದ್ದರು.