ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಸರ್ಕಾರ ಜಾರಿಗೆ ತಂದಿರುವ ಐದು ಭರವಸೆ (ಗ್ಯಾರಂಟಿ) ಯೋಜನೆಗಳಿಂದ ಯಾವುದೇ ಅರ್ಹ ಫಲಾನುಭವಿಗಳು ವಂಚಿತರಾಗಬಾರದು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್ ಅಧಿಕಾರಿಗಳಿಗೆ ತಾಕೀತು ಮಾಡಿದರು.ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಯೋಜನೆಗಳ ಅನುಷ್ಠಾನ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನ ಬಹುತೇಕ ಯೋಜನೆಗಳು ಗರಿಷ್ಠ ಮಟ್ಟದಲ್ಲಿ ಜಾರಿಗೆ ಬಂದಿರುವುದು ಸಂತೋಷದ ವಿಚಾರ ಎಂದರು. ಹಾಸನ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ತಿಳಿಸಿದಂತೆ, ಅರಸೀಕೆರೆ ತಾಲೂಕಿನಲ್ಲಿ ಒಟ್ಟು 733 ಫಲಾನುಭವಿಗಳು ಯುವನಿಧಿ ಪಡೆಯುತ್ತಿದ್ದಾರೆ. ಇದರಲ್ಲಿ ಪುರುಷರು 365, ಮಹಿಳೆಯರು 378. ಈ ಯೋಜನೆಯಡಿ ಕೇವಲ ಎರಡು ವರ್ಷಗಳವರೆಗೆ ಮಾತ್ರ ಹಣ ಲಭ್ಯವಾಗುತ್ತದೆ. ನಂತರ ಸ್ವ ಉದ್ಯೋಗ ಪ್ರಾರಂಭಿಸಲು ಸ್ಥಳೀಯ ಐಟಿಐಗಳಲ್ಲಿ ತರಬೇತಿ ನೀಡಲಾಗುವುದು ಎಂದು ಅವರು ವಿವರಿಸಿದರು. ಈ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕು ಮತ್ತು ಪ್ರತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಫಲಕ ಅಳವಡಿಸಬೇಕು ಎಂದು ಅಧ್ಯಕ್ಷ ಧರ್ಮಶೇಖರ್ ಸೂಚಿಸಿದರು.
ಸಾರಿಗೆ ಡಿಪೋ ವ್ಯವಸ್ಥಾಪಕರು ನೀಡಿದ ಮಾಹಿತಿಯಂತೆ, ಸ್ತ್ರೀ ಶಕ್ತಿ ಯೋಜನೆ ಜಾರಿಯಾದ ನಂತರ ಈ ನವೆಂಬರ್ 19ರವರೆಗೆ ಒಟ್ಟು 2,39,41,508 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, 815,153,768 ಆದಾಯ ಲಭಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಧರ್ಮಶೇಖರ್, ಅನೇಕ ಬಸ್ಸುಗಳು ದುಸ್ಥಿತಿಯಲ್ಲಿರುವುದನ್ನು ಗಂಭೀರವಾಗಿ ತೆಗೆದುಕೊಂಡು, ಡಿಪೋ ಬಿಡುವ ಮೊದಲು ಬಸ್ಸುಗಳನ್ನು ಎರಡು ಬಾರಿ ಪರೀಕ್ಷಿಸುವಂತೆ ಸೂಚಿಸಿದರು. ಇತ್ತೀಚೆಗೆ ಬಸ್ ಮರಕ್ಕೆ ಡಿಕ್ಕಿ ಹೊಡೆದಾಗ ಗಾಯಗೊಂಡ ಪ್ರಯಾಣಿಕರಿಗೆ 2 ಸಾವಿರದಿಂದ 40 ಸಾವಿರದ ವರೆಗೆ ಪರಿಹಾರ ನೀಡಲಾಗಿದೆ ಎಂದು ವ್ಯವಸ್ಥಾಪಕರು ತಿಳಿಸಿದರು.ಶಿಶು ಅಭಿವೃದ್ಧಿ ಕಚೇರಿ ಸಿಬ್ಬಂದಿ ನೀಡಿದ ಮಾಹಿತಿಯ ಪ್ರಕಾರ, ತಾಲೂಕಿನ ಗೃಹಲಕ್ಷ್ಮಿ ಯೋಜನೆ ಶೇ. 100 ಸಾಧಿಸಿದೆ. ಒಟ್ಟು 79,072 ಮಹಿಳೆಯರು ಯೋಜನೆಯಡಿ ಹಣ ಪಡೆಯುತ್ತಿದ್ದಾರೆ. ಪ್ರತಿ ತಿಂಗಳು 15,80,84,000 ಮತ್ತು ಇದುವರೆಗೆ 347,78,48,000 ರು. ಜಮೆಯಾಗಿದೆ. ಒಟ್ಟು 81,930 ಪಡಿತರ ಕಾರ್ಡ್‌ಗಳಿದ್ದು, 2,76,708 ಪ್ರಯೋಜನ ಪಡೆಯುತ್ತಿದ್ದಾರೆ. ಹೊಸ ಕಾರ್ಡ್‌ಗಳ ವಿತರಣೆ ಪ್ರಸ್ತುತ ನಿಲ್ಲಿಸಲಾಗಿದೆ. 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಘೋಷಿಸಿದವರ ಬಿಪಿಎಲ್ ಕಾರ್ಡ್‌ಗಳನ್ನು ಮಾತ್ರ ರದ್ದುಪಡಿಸಲಾಗಿದೆ. ಈಗಾಗಲೇ 2,300 ಕಾರ್ಡ್ ಪರಿಶೀಲನೆ ಮಾಡಿ ವಜಾ ಮಾಡಲಾಗಿದ್ದು, ಇನ್ನೂ 1,823 ಕಾರ್ಡ್‌ಗಳ ಪರಿಶೀಲನೆ ಬಾಕಿಯಿದೆ.ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದಂತೆ ತಾಲೂಕಿನ 83,147 ಗ್ರಾಹಕರು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿದ್ದು, 241 ಮಂದಿ ಮಾತ್ರ ನೋಂದಣಿಗೆ ಬಾಕಿ. ಒಟ್ಟಾರೆ 99.71% ಪ್ರಗತಿ ಕಂಡಿದೆ. ಪಿಡಿಒ ನೇಮಕಕ್ಕೆ ಒತ್ತಾಯ:
ಸಭೆ ಪ್ರಾರಂಭಕ್ಕೂ ಮುನ್ನ ದೊಮ್ಮೆನಹಳ್ಳಿ ಗ್ರಾಮಸ್ಥರು ಪಂಚಾಯಿತಿಯಲ್ಲಿ ಮೂರು ತಿಂಗಳಿಂದ ಪಿಡಿಒ ಇಲ್ಲದೇ ಕೆಲಸಗಳು ನಿಂತಿವೆ ಎಂದು ಅಹವಾಲು ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಧರ್ಮಶೇಖರ್ ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿ ಗಂಗಣ್ಣ, ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದಿದ್ದು, ಇನ್ನೂ ಎರಡು ದಿನಗಳೊಳಗೆ ಹೊಸ ಪಿಡಿಒ ನೇಮಕವಾಗುವುದಾಗಿ ಭರವಸೆ ನೀಡಿದರು.ಸಭೆಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))