40 ಸಾವಿರ ಸರ್ಕಾರಿ ಶಾಲೆಗಳ ಮುಚ್ಚಲು ಬಿಡೋದಿಲ್ಲ

| Published : Nov 22 2025, 01:30 AM IST

40 ಸಾವಿರ ಸರ್ಕಾರಿ ಶಾಲೆಗಳ ಮುಚ್ಚಲು ಬಿಡೋದಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಸೇರಿದಂತೆ ರಾಜ್ಯದಾದ್ಯಂತ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಲ್ಲಿ 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನ ಉದ್ದೇಶ ಖಂಡಿಸಿ ಎಐಡಿಎಸ್‌ಒ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

- ಪ್ರತಿಭಟನೆಯಲ್ಲಿ ಸರ್ಕಾರ ವಿರುದ್ಧ ಪೂಜಾ ನಂದಿಹಳ್ಳಿ ಕಿಡಿ

- ಕೆಪಿಎಸ್ ಮ್ಯಾಗ್ನೆಟ್ ಶಾಲೆ ವಿರುದ್ಧ ಎಐಡಿಎಸ್‌ಒ ಹೋರಾಟ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಸೇರಿದಂತೆ ರಾಜ್ಯದಾದ್ಯಂತ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಲ್ಲಿ 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನ ಉದ್ದೇಶ ಖಂಡಿಸಿ ಎಐಡಿಎಸ್‌ಒ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀ ಜಯದೇವ ವೃತ್ತದಿಂದ ಸಂಘಟನೆ ಜಿಲ್ಲಾ ಅಧ್ಯಕ್ಷೆ ಪೂಜಾ ನಂದಿಹಳ್ಳಿ ಇತರೆ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಂತರ ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ, ಎಸಿ ಕಚೇರಿ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಅರ್ಪಿಸಿದರು.

ಪೂಜಾ ನಂದಿಹಳ್ಳಿ ಮಾತನಾಡಿ, ರಾಜ್ಯದಲ್ಲಿ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚಲು ಹೊರಟಿರುವ ಸರ್ಕಾರದ ಕ್ರಮ ಖಂಡಿಸಿ ರಾಜ್ಯವ್ಯಾಪಿ ಬಲಿಷ್ಠ ಹೋರಾಟವನ್ನು ಬೆಳೆಸಬೇಕಾಗಿದೆ ಎಂದರು.

ಸರ್ಕಾರಿ ಶಾಲೆಗಳ ವಿಲೀನ ಹೆಸರಿನಲ್ಲಿ ಮುಚ್ಚುವ ಮೂಲಕ, ಬಡ, ಮಧ್ಯಮ ವರ್ಗ, ಗ್ರಾಮೀಣ ವಿದ್ಯಾರ್ಥಿಗಳ ಬದುಕು, ಭವಿಷ್ಯವನ್ನೇ ಕತ್ತಲಿಗೆ ನೂಕುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಮೊದಲ ಹಂತದಲ್ಲಿ 700 ಮ್ಯಾಗ್ನೆಟ್ ಶಾಲೆಗಳನ್ನು ಗುರುತಿಸಿ, ಅವುಗಳ ಸುತ್ತ ಇರುವ ಸಾವಿರಾರು ಶಾಲೆಗಳನ್ನು ಮುಚ್ಚಲು ಸರ್ಕಾರ ತಯಾರಿ ನಡೆಸುತ್ತಿದೆ. ಈಗಾಗಲೇ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮದ ಸರ್ಕಾರಿ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯೆಂದು ಗುರುತಿಸಿದೆ. ಹೊಂಗನೂರಿನಿಂದ 6 ಕಿಮೀ ವ್ಯಾಪ್ತಿ ಶಾಲೆಗಳನ್ನು ತುರ್ತಾಗಿ ವಿಲೀನಗೊಳಿಸಲು ಆದೇಶಿಸಲಾಗಿದೆ ಎಂದರು.

ಇದೇ ರೀತಿ ದಾವಣಗೆರೆ ತಾಲೂಕಿನ ಕಕ್ಕರಗಳ್ಳ, ಆವರಗೊಳ್ಳ, ಹದಡಿ, ಲೋಕಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ಚನ್ನಗಿರಿ ತಾ. ನಲ್ಲೂರು, ಹಿರೇಕೋಗಲೂರು ಪಿಯು ಕಾಲೇಜು, ಹೊನ್ನಾಳಿಯ ಸವಳಂಗ ಪಿಯು ಕಾಲೇಜು, ಹರಿಹರದ ಗುತ್ತೂರು, ಯರಚಿಕ್ಕನಹಳ್ಳಿ ಹಿ.ಪ್ರಾ. ಶಾಲೆಗಳು, ಜಗಳೂರು, ಹರಿಹರ ತಾಲೂಕಿನ ಶಾಲೆಗಳೂ ಸೇರಿದಂತೆ ಜಿಲ್ಲಾದ್ಯಂತ 20 ಮ್ಯಾಗ್ನೆಟ್ ಶಾಲೆಗಳ ಪಟ್ಟಿ ಮಾಡಿದ್ದಾರೆ. ಸುತ್ತಲಿನ ನೂರಾರು ಸರ್ಕಾರಿ ಶಾಲೆಗಳನ್ನು ಅಲ್ಲಿ ಮುಚ್ಚುವ ಹುನ್ನಾರ ಇದೆ ಎಂದು ಪೂಜಾ ಕಿಡಿಕಾರಿದರು.

ಮ್ಯಾಗ್ನೆಟ್ ಶಾಲೆ ಯೋಜನೆಗಾಗಿ ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್‌ನಿಂದ ₹2500 ಕೋಟಿ ಸಾಲ ಪಡೆದ ಸರ್ಕಾರ ಇನ್ನೂ ₹10 ಸಾವಿರ ಕೋಟಿ ಸಾಲ ಪಡೆಯುವ ಉದ್ದೇಶ ಹೊಂದಿದೆ. ಸ್ಪಷ್ಟವಾಗಿ ಕಾರ್ಪೋರೇಟ್‌ ಹಿತಾಸಕ್ತಿ ಕಾಪಾಡುವ ಕೆಲಸ ಸರ್ಕಾರ ಮಾಡುತ್ತಿರುವುದು ಸ್ಪಷ್ಟವಾಗಿದೆ. ದೇಶದ ನವೋದಯ ಚಳವಳಿಯ ಹರಿಕಾರರು, ಮಹಾನ್ ವ್ಯಕ್ತಿಗಳ ಆಶಯಗಳಿಗೆ ವಿರುದ್ಧವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಲಸ ಸರ್ಕಾರವೇ ಮಾಡುತ್ತಿದೆ. ಇದರ ವಿರುದ್ಧ ಪಾಲಕರು, ಶಿಕ್ಷಕರು, ಶಿಕ್ಷಣ ಪ್ರೇಮಿಗಳು, ವಿದ್ಯಾರ್ಥಿ, ಯುವ ಜನರು ಪ್ರಬಲ ಹೋರಾಟಕ್ಕೆ ಸಜ್ಜಾಗಬೇಕು ಎಂದು ಪೂಜಾ ನಂದಿಹಳ್ಳಿ ಮನವಿ ಮಾಡಿದರು.

ಸಂಘಟನೆ ಜಿಲ್ಲಾ ಕಾರ್ಯದರ್ಶಿ ಟಿ.ಎಸ್.ಸುಮನ್‌, ಎಚ್.ಡಿ.ಗಂಗಾಧರ, ಪ್ರಿಯಾಂಕ, ಸಿದ್ದಿಕ್ ಆವರಗೆರೆ, ಎಂ.ಆರ್.ವಿಕಾಸ್‌, ದೇವಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

- - -

-21ಕೆಡಿವಿಜಿ3, 4.ಜೆಪಿಜಿ:

ದಾವಣಗೆರೆಯಲ್ಲಿ ಶುಕ್ರವಾರ ರಾಜ್ಯಾದ್ಯಂತ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಲ್ಲಿ 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ವಿಲೀನ ಖಂಡಿಸಿ ಎಐಡಿಎಸ್‌ಒ ಜಿಲ್ಲಾ ಘಟಕದಿಂದ ಪ್ರತಿಭಟಿಸಲಾಯಿತು.