ಸಾರಾಂಶ
ಬೆಂಗಳೂರಿನ ಮಾವಳ್ಳಿಪುರದಲ್ಲಿ ಕ್ರೀಡಾ ನಗರವನ್ನು ನಿರ್ಮಿಸಲಾಗುತ್ತದೆ ಎಂದು ಸಚಿವ ಬಿ.ನಾಗೇಂದ್ರ ಅವರು ಅಧಿವೇಶನದಲ್ಲಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ವಿಧಾನಸಭೆ
ಬೆಂಗಳೂರು ನಗರದ ಮಾವಳ್ಳಿಪುರ ಬಳಿಯ 100 ಎಕರೆ ಜಮೀನನ್ನು ಸ್ಪೋರ್ಟ್ಸ್ ಸಿಟಿ ನಿರ್ಮಾಣಕ್ಕಾಗಿ ಕ್ರೀಡಾ ಇಲಾಖೆಗೆ ಹಸ್ತಾಂತರಿಸಲು ಕಂದಾಯ ಇಲಾಖೆ ಒಪ್ಪಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಪಿಪಿಪಿ ಮಾದರಿಯಲ್ಲಿ ಸ್ಪೋರ್ಟ್ಸ್ ಸಿಟಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಎಸ್.ಆರ್.ವಿಶ್ವನಾಥ್ ಪ್ರಶ್ನೆಗೆ ಉತ್ತರಿಸಿದ ಅವರು, ಮಾವಳ್ಳಿ ಪುರ ಬಳಿ 60 ಎಕರೆ ಕಂದಾಯ ಇಲಾಖೆ ಲಭ್ಯವಿದೆ. ಅದರ ಜತೆಗೆ ಇನ್ನೂ 40 ಎಕರೆ ಬೇರೆ ಸರ್ವೆ ಸಂಖ್ಯೆಯಲ್ಲಿ ಲಭ್ಯವಿದ್ದು, ಎರಡನ್ನೂ ಕೇಳಿದ್ದೇವೆ. ಇದಕ್ಕೆ ಕಂದಾಯ ಇಲಾಖೆಯೂ ಸಮ್ಮತಿಸಿದೆ. ಎಲ್ಲಾ ರೀತಿಯ ಕ್ರೀಡೆಗಳನ್ನು ಒಂದೇ ಸೂರಿನಡಿ ಆಡಲು ಹಾಗೂ ತರಬೇತುಗೊಳಿಸಲು ಅವಕಾಶವಾಗುವಂತೆ ಸ್ಪೋರ್ಟ್ಸ್ ಸಿಟಿ ನಿರ್ಮಾಣ ಮಾಡಲಾಗುವುದು. ಸರ್ಕಾರದಿಂದಲೇ ನಿರ್ಮಾಣ ಮಾಡಬೇಕೆ ಅಥವಾ ಪಿಪಿಪಿ ಮಾದರಿಯಲ್ಲಿ ಮಾಡಬೇಕೆ ಎಂಬ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದರು.
ಈ ವೇಳೆ ಧನ್ಯವಾದ ತಿಳಿಸಿದ ಎಸ್.ಆರ್. ವಿಶ್ವನಾಥ್, ಆ ಕೆಲಸ ಮಾಡಿದರೆ ನಿಮ್ಮನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡುತ್ತೇವೆ ಎಂದು ಹಾಸ್ಯ ಚಟಾಕಿ ಹಾರಿಸಿದರು.