ಹಳ್ಳಿಗಳಲ್ಲೀಗ ಹಪ್ಪಳ, ಸಂಡಿಗೆ ಸಪ್ಪಳ!

| Published : Feb 15 2024, 01:36 AM IST

ಸಾರಾಂಶ

ಪಟ್ಟಣ ಹಾಗೂ ನಗರ ಪ್ರದೇಶದಲ್ಲಿ ಸಂಡಿಗೆ, ಹಪ್ಪಳ ಸೇರಿ ನಾನಾ ಪದಾರ್ಥ ಸಿದ್ಧಪಡಿಸುವುದು ಕಾಣಿಸುತ್ತಿಲ್ಲ. ರೆಡಿಮೇಡ್ ಫುಡ್‌ಗಳ ನಡುವೆ ದೇಶೀಯ ಸೊಗಡು ಕಣ್ಮರೆಯಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ದೇಶಿ ಆಹಾರ ಪದ್ಧತಿ ಮಹಿಳೆಯರು ಇನ್ನೂ ಉಳಿಸಿಕೊಂಡು ಬರುವುದು ಕಂಡುಬರುತ್ತದೆ

ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ

ಬೇಸಿಗೆ ಆರಂಭವಾಗುತ್ತಿದ್ದಂತೆ ಗ್ರಾಮೀಣ ಪ್ರದೇಶದ ಮಹಿಳೆಯರು ಅತಿಥಿ ಸತ್ಕಾರಕ್ಕೆ ಬೇಕಾಗುವ ಸಂಡಿಗೆ, ಹಪ್ಪಳ ತಯಾರಿಸುವುದರಲ್ಲಿ ನಿರತರಾಗಿದ್ದಾರೆ.

ತಾಲೂಕಿನ ದೋಟಿಹಾಳ, ಕೇಸೂರು ಹಾಗೂ ಕಡೇಕೊಪ್ಪ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶದಲ್ಲಿ ಮನೆ ಮಾಳಿಗೆ ಮೇಲೆ, ಟ್ರ್ಯಾಕ್ಟರ್ ಟ್ರ್ಯಾಲಿ, ಹೆಂಚು, ಮನೆ ಮುಂಭಾಗದಲ್ಲಿ ನಾನಾ ಕಲಾಕೃತಿಯಲ್ಲಿ ಹಾಕಿದ ಸಂಡಿಗೆ ಹಾಗೂ ಹಪ್ಪಳಗಳು ಇದಕ್ಕೆ ಸಾಕ್ಷಿಯಾಗಿವೆ.

ಹಬ್ಬ ಹರಿದಿನ, ಮದುವೆ, ನಾಮಕರಣ, ಸೀಮಂತ, ಅತಿಥಿಗಳ ಸತ್ಕಾರ ಸೇರಿದಂತೆ ಸಭೆ ಹಾಗೂ ಸಮಾರಂಭಗಳ ಭೋಜನಕ್ಕೆ ಸಿದ್ದಪಡಿಸಿದ ಖಾದ್ಯಗಳೊಂದಿಗೆ ಸಂಡಿಗೆ, ಹಪ್ಪಳ, ಚಕ್ಕುಲಿ ಇಲ್ಲದಿದ್ದರೆ ಊಟ ಪೂರ್ಣ ಎನಿಸುವುದಿಲ್ಲ, ಮಹಿಳೆಯರು ಬೇಸಿಗೆ ದಿನಗಳಲ್ಲಿ 2-3 ದಿನಗಳ ಮುಂಚಿತವಾಗಿ ಪ್ಲಾಸ್ಟಿಕ್ ಹಾಳೆ, ತಗಡು, ಹೆಂಚುಗಳ ಮೇಲೆ ಹಾಕುತ್ತಾರೆ. ಹಪ್ಪಳ ಹಾಕುವ ಕೆಲಸ ಮುಗಿದ ನಂತರ ಧೂಳು, ಗಾಳಿ, ಕಸಕಡ್ಡಿಗಳಿಂದ ರಕ್ಷಣೆಗಾಗಿ ತೆಳ್ಳನೆಯ ಬಟ್ಟೆ ಹೊದಿಕೆಯನ್ನಾಗಿ ಮಾಡುತ್ತಾರೆ.

ದೇಶಿ ಆಹಾರ ಪದ್ಧತಿ: ಈ ಹಿಂದೆ ನಾಲ್ಕಾರು ಕುಟುಂಬಗಳ ಸದಸ್ಯರು ಸೇರಿಕೊಂಡು ಮನೆಯ ಮಾಳಿಗೆ ಮೇಲೆ ಸಂಡಿಗೆ, ಹಪ್ಪಳದ ಅಚ್ಚು ಹಿಡಿದು, ನಾನಾ ಆಕಾರಗಳಲ್ಲಿ ಹಾಕುವುದು, ಲಟ್ಟಣಿಕೆಗಳಿಂದ ಲಟ್ಟಿಸುವುದು ಕಂಡು ಬರುತ್ತಿತ್ತು. ಆದರೆ ಈಗ ಲಟ್ಟಿಸುವ ಶಬ್ದ ಸೇರಿದಂತೆ ಇತರೆ ತಯಾರಿಕೆ, ಬಳಕೆ ಪದ್ಧತಿ ಮಾಯವಾಗಿದೆ.

ಊಟಕ್ಕೆ ರುಚಿ: ಉತ್ತರ ಕರ್ನಾಟಕದ ಊಟದಲ್ಲಿ ಹಪ್ಪಳ, ಸಂಡಿಗೆಗೆ ಮೊದಲ ಸ್ಥಾನಮಾನ ನೀಡಿದೆ. ವಿಶೇಷ ದಿನಗಳಲ್ಲಿ ಮನೆಗೆ ಭೇಟಿ ನೀಡುವ ಬಂಧು-ಬಳಗದವರಿಗೆ ಊಟದ ಜತೆಗೆ ಕರಿದ ಸಂಡಿಗೆ, ಹಪ್ಪಳ ಬಡಿಸಿದರೆ ಮನೆ ಒಡತಿಗೆ ಎಲ್ಲಿಲ್ಲದ ಸಂತೋಷವಾಗುತ್ತದೆ.

ಪಟ್ಟಣ ಹಾಗೂ ನಗರ ಪ್ರದೇಶದಲ್ಲಿ ಸಂಡಿಗೆ, ಹಪ್ಪಳ ಸೇರಿ ನಾನಾ ಪದಾರ್ಥ ಸಿದ್ಧಪಡಿಸುವುದು ಕಾಣಿಸುತ್ತಿಲ್ಲ. ರೆಡಿಮೇಡ್ ಫುಡ್‌ಗಳ ನಡುವೆ ದೇಶೀಯ ಸೊಗಡು ಕಣ್ಮರೆಯಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ದೇಶಿ ಆಹಾರ ಪದ್ಧತಿ ಮಹಿಳೆಯರು ಇನ್ನೂ ಉಳಿಸಿಕೊಂಡು ಬರುವುದು ಕಂಡುಬರುತ್ತದೆ.

ಯಂತ್ರದಿಂದ ತಯಾರಿಸಿದ ಸಂಡಿಗೆ ಹಾಗೂ ಹಪ್ಪಳಗಳು ದುಡ್ಡು ಕೊಟ್ಟರೆ ಪಟ್ಟಣದಲ್ಲಿ ಸಾಕಾಗುವಷ್ಟು ಸಿಗುತ್ತವೆ, ಅದಕ್ಕೆ ಟೆಸ್ಟಿಂಗ್ ಪೌಡರ್ ಬಳಸಿ ತಯಾರಿಸುವುದರಿಂದ ಆರೋಗ್ಯಕ್ಕೆ ಯೋಗ್ಯವಲ್ಲ ಆದ ಕಾರಣ ನಮ್ಮ ಕೈಯಿಂದ ತಯಾರಿಸಿದ ಸಂಡಿಗೆ, ಹಪ್ಪಳ, ಚಕ್ಕುಲಿ ಬಹಳ ದಿನಗಳವರೆಗೆ ಬಾಳಿಕೆ ಬರುತ್ತವೆ ಎಂದು ಕಡೆಕೊಪ್ಪ ಗ್ರಾಮಸ್ಥರಾದ ಪಾರ್ವತೆಮ್ಮ ,ಶಾಂತಾ ಜಿಗೇರಿ ಹೇಳಿದರು.

ಸಂಡಿಗೆ, ಹಪ್ಪಳ ರೊಕ್ಕಾ ಕೊಟ್ಟ ಅಂಗಡಿ ಒಳಗ ತಂದು ತಿಂದ್ರ, ಮನ್ಯಾಗ ಮಾಡಿದಷ್ಟ ರುಚಿ ಬರುದಿಲ್ಲ. ನಮಗ ಬೇಕಾದಂಗ ನಾನಾ ಆಕಾರದ ಸಂಡಿಗೆಗಳು ಸಿಗುದಿಲ್ಲ. ಹೀಗಾಗಿ ವರ್ಷಕ್ಕೆ ಬೇಕಾಗುವಷ್ಟು ಸಂಡಿಗೆ ಹಪ್ಪಳಗಳು ಮನೆಯ ಅಕ್ಕ ಪಕ್ಕದ ಮಹಿಳೆಯರನ್ನು ಕರಕೊಂಡು ಸಂಡಿಗೆ ಮಾಡಿಕೊಳ್ಳುತ್ತೇವೆ ಎಂದು ಉಮಾದೇವಿ ಪಾಟೀಲ ಹೇಳಿದರು.