ಪಿಯುಸಿ ಪರೀಕ್ಷೆ ಫಲಿತಾಂಶ ಹೆಚ್ಚಳಕ್ಕೆ ನಾನಾ ಕಸರತ್ತು

| Published : Feb 15 2024, 01:36 AM IST

ಪಿಯುಸಿ ಪರೀಕ್ಷೆ ಫಲಿತಾಂಶ ಹೆಚ್ಚಳಕ್ಕೆ ನಾನಾ ಕಸರತ್ತು
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವರ್ಷ ರಾಜ್ಯಮಟ್ಟದಲ್ಲಿ 27ನೇ ಸ್ಥಾನಕ್ಕೆ ಕುಸಿದಿದ್ದ ಅಖಂಡ ಬಳ್ಳಾರಿ ಜಿಲ್ಲೆಯನ್ನು ಈ ಬಾರಿ 10ನೇ ಸ್ಥಾನದೊಳಗೆ ತರಲು ಇಲಾಖೆ ಶತಾಯಗತಾಯ ಪ್ರಯತ್ನದಲ್ಲಿದೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ವಿದ್ಯಾರ್ಥಿ ಜೀವನದ ಪ್ರಮುಖ ತಿರುವು ಎನ್ನಲಾಗುವ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 1ರಂದು ಶುರುವಾಗಲಿದ್ದು, ಪರೀಕ್ಷೆ ಸುಗಮವಾಗಿ ನಡೆಯಲು ಪದವಿಪೂರ್ವ ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ. ಕಳೆದ ವರ್ಷ ರಾಜ್ಯಮಟ್ಟದಲ್ಲಿ 27ನೇ ಸ್ಥಾನಕ್ಕೆ ಕುಸಿದಿದ್ದ ಅಖಂಡ ಬಳ್ಳಾರಿ ಜಿಲ್ಲೆಯನ್ನು ಈ ಬಾರಿ 10ನೇ ಸ್ಥಾನದೊಳಗೆ ತರಲು ಇಲಾಖೆ ಶತಾಯಗತಾಯ ಪ್ರಯತ್ನದಲ್ಲಿದೆ. ಪ್ರತಿ ಬಾರಿ ಫಲಿತಾಂಶದಲ್ಲಿ ಹಿಂದುಳಿಯುವ ಸರ್ಕಾರಿ ಕಾಲೇಜುಗಳ ಕಡೆ ಹೆಚ್ಚಿನ ನಿಗಾ ವಹಿಸಲಾಗಿದ್ದು, ಆಯಾ ಕಾಲೇಜುಗಳ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯುವಿಕೆಯನ್ನು ಗುರುತಿಸಿ, ಪೂರಕ ಕ್ರಮಗಳತ್ತ ಇಲಾಖೆ ಹೆಜ್ಜೆ ಇರಿಸಿದೆ.

ವಿಶೇಷ ತರಗತಿಗಳು: ಫಲಿತಾಂಶ ಉತ್ತಮಗೊಳಿಸಲು ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವಿಶೇಷ ತರಗತಿಗಳು, ಸಿದ್ಧತಾ ಪರೀಕ್ಷೆಗಳು, ಕಿರು ಪರೀಕ್ಷೆಗಳು, ಹಳೆಯ ಪ್ರಶ್ನೆಪತ್ರಿಕೆಗಳ ಅಭ್ಯಾಸ, ಉಪನ್ಯಾಸಕರ ಕೊರತೆ ಇರುವ ಕಡೆ ಅತಿಥಿ ಉಪನ್ಯಾಸಕರ ನಿಯೋಜನೆ ಹಾಗೂ ಕಲಿಕೆಯಲ್ಲಿ ತೀರಾ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಉತ್ತೀರ್ಣಕ್ಕೆ ಬೇಕಾದ ಅಂಕಗಳನ್ನು ಗಳಿಸಲು, "ಕನಿಷ್ಠ ವಿಷಯ ಗರಿಷ್ಠ ಅಭ್ಯಾಸ " ಯೋಜನೆ ರೂಪಿಸಿಕೊಳ್ಳಲಾಗಿದೆ. ವಿಷಯ ತಜ್ಞರಿಂದ ಸೂಕ್ತ ತರಬೇತಿಯನ್ನು ಸಹ ನೀಡಲಾಗುತ್ತಿದೆ. ಫಲಿತಾಂಶ ಹೆಚ್ಚಳಗೊಳಿಸಲು ಹಾಗೂ ಪರೀಕ್ಷೆ ಸುಗಮವಾಗಿ ನಡೆಯಲು ಬೇಕಾದ ಸಿದ್ಧತೆ ಕುರಿತಂತೆ ಈಗಾಗಲೇ ಆಯಾ ಕಾಲೇಜು ಮುಖ್ಯಸ್ಥರ ಸಭೆ ನಡೆಸಲಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಕುರಿತು ಮನವರಿಕೆ ಮಾಡಿಕೊಡಲಾಗಿದ್ದು, ಹೀಗೆ ವಿವಿಧ ಹಂತದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸುತ್ತಿದೆ.

ಕಡಿಮೆ ಫಲಿತಾಂಶ ಕಾಲೇಜು ಕಡೆ ನಿಗಾ: ಕಳೆದ ವರ್ಷದ ಪರೀಕ್ಷೆಯಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದಿರುವ ಸರ್ಕಾರಿ ಕಾಲೇಜುಗಳನ್ನು ಗುರುತಿಸಿಕೊಳ್ಳಲಾಗಿದ್ದು, ಫಲಿತಾಂಶ ಹಿನ್ನಡೆಗೆ ಕಾರಣಗಳೇನು? ಸ್ಥಳೀಯವಾಗಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು, ಗುರುತಿಸಿಕೊಂಡಿರುವ ಕಾಲೇಜುಗಳ ಕಡೆ ಹೆಚ್ಚು ನಿಗಾ ವಹಿಸಿ, ವಿಶೇಷ ಕಾರ್ಯಯೋಜನೆ ರೂಪಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಜತೆ ಮೌಖಿಕವಾಗಿ ಚರ್ಚಿಸಿ, ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ, ಕಾರಣಗಳೇನು? ಎಂಬಿತ್ಯಾದಿ ಮಾಹಿತಿ ಪಡೆದು ವಿದ್ಯಾರ್ಥಿಗಳ ಉತ್ತೀರ್ಣಕ್ಕೆ ಬೇಕಾದ ಅಂಕಗಳಿಕೆಗೆ ವಿಷಯವಾರು ತಜ್ಞರಿಂದ ವಿಶೇಷ ತರಗತಿಗಳನ್ನು ನೀಡಲಾಗುತ್ತಿದ್ದು, ಒಟ್ಟಾರೆ ಈ ಬಾರಿಯ ಫಲಿತಾಂಶ ಏರಿಕೆಯ ಕ್ರಮಾಂಕ ಕಂಡುಕೊಳ್ಳಲು ಇಲಾಖೆ ನಾನಾ ಪ್ರಯತ್ನಗಳಲ್ಲಿದೆ.

29,946 ಪರೀಕ್ಷಾರ್ಥಿಗಳು

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಒಟ್ಟು 29,946 ಜನರು ಪರೀಕ್ಷೆ ಎದುರಿಸಲಿದ್ದು, ಈ ಪೈಕಿ 25,821 ಹೊಸಬರು(ಫ್ರೆಷರ್ಸ್), 1296 ಖಾಸಗಿ ಹಾಗೂ 2829 ಜನ ಪುನರಾವರ್ತಿತ ಅಭ್ಯರ್ಥಿಗಳಿದ್ದಾರೆ.

ಬಳ್ಳಾರಿ 16 ಹಾಗೂ ವಿಜಯನಗರ ಜಿಲ್ಲೆಯ 18 ಸೇರಿದಂತೆ ಒಟ್ಟು 34 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಸೇರಿದಂತೆ ಒಟ್ಟು 178 ಪದವಿಪೂರ್ವ ಕಾಲೇಜುಗಳಿವೆ. ವಿವಿಧ ಯೋಜನೆ: ಪರೀಕ್ಷೆಗೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಪರೀಕ್ಷಾರ್ಥಿಗಳಿಗೆ ಕುಡಿಯುವ ನೀರು, ಗಾಳಿ, ಬೆಳಕು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಈ ಬಾರಿ ಫಲಿತಾಂಶ ಹೆಚ್ಚಿಸಲು ವಿವಿಧ ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ. ಪಾಲಾಕ್ಷ ತಿಳಿಸಿದರು.ಉತ್ತಮ ಫಲಿತಾಂಶ ನಿರೀಕ್ಷೆ: ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ನಿತ್ಯ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಗಮನ ಹರಿಸಲಾಗುತ್ತಿದ್ದಾರೆ. ಈ ಬಾರಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದು ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅರುಣಾ, ಎಸ್.ವಿ. ಮಹಿಮಾ ಹಾಗೂ ವಿಜಯಲಕ್ಷ್ಮಿ ತಿಳಿಸಿದರು.