ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಸ್ವಸಾಮರ್ಥ್ಯದೊಂದಿಗೆ ಪ್ರತಿಭೆ ಮೆರೆಯುವ ಕ್ರೀಡಾ ಪ್ರತಿಭೆಗಳು ನಾಯಕತ್ವ ಗುಣದೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕ್ರೀಡೆಯೇ ಮೊದಲ ಮೆಟ್ಟಿಲು. ಕ್ರೀಡಾಪಟುಗಳು ತಮ್ಮ ಸಾಧನೆ ಮತ್ತು ಮತ್ತು ನಡತೆಯಿಂದ ದೇಶದ ಕೀರ್ತಿಯನ್ನು ಮೆರೆಯುವ ಪ್ರತಿಭೆಗಳಾಗಿಯೂ ಹೊರ ಹೊಮ್ಮಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಕೋಣಂದೂರಿನ ರಾಷ್ಟ್ರೀಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಮಂಗಳವಾರ ಸುರಿಯುವ ಮಳೆಯ ನಡುವೆಯೇ ಆರಂಭಗೊಂಡ ಎರಡು ದಿನಗಳ ತಾಲೂಕು ಮಟ್ಟದ ಪಿಯು ಕಾಲೇಜು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಈಚಿನ ದಿನಗಳಲ್ಲಿ ಪಿಯು ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದು ಚಿಂತೆಯ ವಿಷಯವಾಗಿದೆ. ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕೋಣಂದೂರಿನಲ್ಲಿ ಪ್ರೌಡಶಾಲೆ ಮತ್ತು ಪದವಿ ಕಾಲೇಜನ್ನು ತೆರೆಯದಿದ್ದರೆ ನನ್ನಂತಹ ನೂರಾರು ಮಂದಿಯ ಶಿಕ್ಷಣ ಪ್ರಾಥಮಿಕ ಹಂತಕ್ಕೆ ಕೊನೆಗೊಳ್ಳುತ್ತಿತ್ತು. ಈ ಸಂಸ್ಥೆ ನಾನೂ ಸೇರಿದಂತೆ ಈ ಭಾಗದ ನೂರಾರು ಬಡ ವಿಧ್ಯಾರ್ಥಿಗಳ ಬದುಕನ್ನು ರೂಪಿಸಿದೆ ಎಂದು ಹೇಳಿದರು.
ಈ ಅವಧಿಯಲ್ಲಿ ಕ್ರೀಡಾಂಗಣ ಕೆಸರುಗದ್ದೆಯಂತಿರುತ್ತದೆ. ಶೈಕ್ಷಣಿಕ ಇಲಾಖೆ ಆರಂಭಿಕ ಹಂತದ ಕ್ರೀಡಾಕೂಟಗಳನ್ನು ಮಳೆಗಾಲದ ಪ್ರತಿಕೂಲ ವಾತಾವರಣದ ಅವಧಿಯಲ್ಲೇ ನಡೆಸಬೇಕಾದ ಅನಿವಾರ್ಯತೆಯಿಂದಾಗಿ ಮಲೆನಾಡು ಮತ್ತು ಕರಾವಳಿ ಭಾಗದ ಪ್ರತಿಭಾವಂತ ಕ್ರೀಡಾ ಪ್ರತಿಭೆಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕ್ರೀಡಾ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ ಮಲೆನಾಡು ಮತ್ತು ಕರಾವಳಿ ಭಾಗದ ಪ್ರತಿಭಾವಂತ ಕ್ರೀಡಾ ಪ್ರತಿಭೆಗಳಿಗೆ ಶಾಪವಾಗಿ ಪರಿಣಮಿಸಿದೆ ಎಂದು ಹೇಳಿದರು.ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಮಾತನಾಡಿ, ಸನ್ನಡತೆ, ವ್ಯಕ್ತಿತ್ವದೊಂದಿಗೆ ಮನೋಸ್ಥೈರ್ಯವನ್ನು ರೂಪಿಸುವ ಕ್ರೀಡೆ ಮನುಷ್ಯ ಮಾತ್ರವಲ್ಲದೇ ಎಲ್ಲ ಜೀವಿಗಳಿಗೂ ಬದುಕಿನ ಭಾಗವಾಗಿದೆ. ತಪ್ಪು ಮಾಡಿದಾಗ ವಕೀಲರಂತೆ ವರ್ತಿಸುವ ನಾವು ಬೇರೆಯವರು ಮಾಡಿದ ತಪ್ಪನ್ನು ನ್ಯಾಯಾಧೀಶರಂತೆ ಭಾವಿಸುತ್ತೇವೆ. ಕ್ರೀಡಾಪಟುಗಳು ಬದುಕು ನ್ಯಾಯಾಧೀಶರಂತಿರಬೇಕು ಎಂದರು.
ಪದವಿ ಪೂರ್ವ ಇಲಾಖೆಯ ಉಪನಿರ್ದೆಶಕ ಚಂದ್ರಪ್ಪ ಗುಂಡಪಲ್ಲಿ, ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ಎನ್.ನಾಗರಾಜ್, ಕೋಣಂದೂರು ಗ್ರಾಪಂ ಅಧ್ಯಕ್ಷ ಮಂಗಳ ಗೋಪಿ ಮಾತನಾಡಿದರು. ವೇದಿಕೆಯಲ್ಲಿ ರಾಷ್ಟ್ರೀಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ವಾಸುದೇವ್ ಮತ್ತಿತರರು ಇದ್ದರು. ಕ್ರೀಡಾಕೂಟದಲ್ಲಿ 13 ತಂಡಗಳು ಪಾಲ್ಗೊಂಡಿದ್ದವು.