ಸಾರಾಂಶ
ಬಿಡದಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಕಲ್ಲುಗೋಪಹಳ್ಳಿ ಗ್ರಾಮದ ಎನ್.ಕೆ.ಕುಮಾರ್ ಆಯ್ಕೆಯಾಗಿದ್ದಾರೆ.
ರಾಮನಗರ: ಬಿಡದಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಕಲ್ಲುಗೋಪಹಳ್ಳಿ ಗ್ರಾಮದ ಎನ್.ಕೆ.ಕುಮಾರ್ ಆಯ್ಕೆಯಾಗಿದ್ದಾರೆ.
ಸಂಘದ ಅಧ್ಯಕ್ಷರಾಗಿದ್ದ ಮಹೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಂಘದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾದ ಕಲ್ಲುಗೋಪಹಳ್ಳಿ ಗ್ರಾಮದ ಎನ್.ಕೆ.ಕುಮಾರ್ ಹಾಗೂ ಜೆಡಿಎಸ್ ಬೆಂಬಲಿತರಾದ ನೀಲಮ್ಮ ನಡುವೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.ಒಟ್ಟು 13 ನಿರ್ದೇಶಕ ಸ್ಥಾನಗಳನ್ನು ಹೊಂದಿರುವ ಸಂಘದಲ್ಲಿ 7 ಮಂದಿ ಜೆಡಿಎಸ್ ಬೆಂಬಲಿತ ಹಾಗೂ 5 ಮಂದಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿದ್ದು, ಒಂದು ಸ್ಥಾನ ಬಿಡಿಸಿಸಿ ಬ್ಯಾಂಕ್‌ನಿಂದ ನಾಮ ನಿರ್ದೇಶನದ ಮತದಾನದ ಹಕ್ಕು ಇತ್ತು.
ಚುನಾವಣೆಯಲ್ಲಿ ಎನ್.ಕೆ.ಕುಮಾರ್ 7 ಮತ ಪಡೆದು ಗೆಲವು ಸಾಧಿಸಿದರೆ, ಪ್ರತಿಸ್ಪರ್ಧಿ ನೀಲಮ್ಮ 6 ಮತಗಳನ್ನ ಪಡೆದು ಸೋಲು ಕಂಡರು. ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಸಂಘದ ಸಿಇಒ ಕಿರಣ್ ಕರ್ತವ್ಯ ನಿರ್ವಹಿಸಿದ್ದರು.ಅಧ್ಯಕ್ಷರಾಗಿ ಎನ್.ಕೆ.ಕುಮಾರ್ ಆಯ್ಕೆಯಾಗುತ್ತಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಪ್ರಕ್ರಿಯೆ ಮುಗಿಸಿ ಹೊರ ಬರುತ್ತಿದಂತೆ ಹೂವಿನ ಹಾರಗಳನ್ನು ಹಾಕಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಸದಸ್ಯರಾದ ಪುಟ್ಟಣ್ಣ, ನಿರ್ದೇಶಕರಾದ ಮಹೇಶ್, ಜೀವನ್ ಬಾಬು, ಮುಖಂಡರಾದ ಯೋಗನಂದ, ಕಾಕರಾಮನಹಳ್ಳಿ ಹೇಮಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.