ಸುಪ್ತ ಮನಸ್ಸಿನ ಭಾವನೆ ಅರಳಲು ಪ್ರತಿಭಾ ಕಾರಂಜಿ ಪೂರಕ: ಆರ್.ಪುಷ್ಪಾ

| Published : Aug 28 2024, 12:50 AM IST

ಸಾರಾಂಶ

ಸೊರಬ ತಾಲೂಕಿನ ತೆಲಗುಂದ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಪುಷ್ಪಾ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಸೊರಬ

ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪುಷ್ಪಾ ಹೇಳಿದರು.

ಮಂಗಳವಾರ ತಾಲೂಕಿನ ಚಂದ್ರಗುತ್ತಿ ಸಮೀಪದ ತೆಲಗುಂದ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೨೦೨೪-೨೫ನೇ ಸಾಲಿನ ಹರೀಶಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಸಂಯೋಜನೆಗೊಳ್ಳುವ ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಿದೆ. ಮಕ್ಕಳಲ್ಲಿ ಅಡಗಿರುವ ಸುಪ್ತ ಮನಸ್ಸಿನ ಭಾವನೆಗಳು ಅರಳಲು ಸರ್ಕಾರ ರೂಪಿಸಿರುವ ಪ್ರತಿಭಾ ಕಾರಂಜಿಯಂತಹ ಸ್ಪರ್ಧಾ ಕಾರ್ಯಕ್ರಮಗಳು ಪೂರಕವಾಗಿದೆ. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಒತ್ತು ನೀಡಲಾಗುತ್ತಿದೆ. ಪಠ್ಯದಜೊತೆ ಪಠ್ಯೇತರ ಚಟುವಟಿಕೆಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ ಎಂದ ಅವರು, ಇದಕ್ಕೆ ಪೋಷಕರ ಸಹಕಾರ ಹೆಚ್ಚಿನ ಅಗತ್ಯವಿದೆ ಎಂದರು.

ಹರೀಶಿ ಕ್ಲಸ್ಟರ್ ವ್ಯಾಪ್ತಿಯ ೧೫ ಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಕಂಠಪಾಠ, ಭಾಷಣ, ಧಾರ್ಮಿಕ ಪಠಣ, ಛದ್ಮವೇಶ, ಸೇರಿದಂತೆ ಅನೇಕ ಕಲಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ರಂಜಿಸಿದರು.

ಗ್ರಾಪಂ ಅಧ್ಯಕ್ಷೆ ಸೋನಿಯಾ ಗಣಪತಿನಾಯ್ಕ್, ಕ್ಷೇತ್ರ ಸಮನ್ವಯ ಅಧಿಕಾರಿ ದಯಾನಂದ್ ಕಲ್ಲೇರ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಧುಕರ್, ಗ್ರಾಪಂ ಸದಸ್ಯರಾದ ರಾಕೇಶ್, ಜಯಲಕ್ಷ್ಮಿ, ಗ್ರಾಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಶಿಕ್ಷಣ ಇಲಾಖೆಯ ಇ.ಸಿ.ಒ. ಪ್ರೇಮ್‌ಕುಮಾರ್, ಅರುಣ್‌ಕುಮಾರ್, ಬಿ.ಆರ್.ಪಿ. ಮಂಜಪ್ಪ, ಸಿ.ಆರ್.ಪಿ. ರಾಘವೇಂದ್ರ, ಮಂಜುನಾಥ್, ಮುಖ್ಯ ಶಿಕ್ಷಕಿ ಉಷಾ ಭಟ್, ಸೇರಿದಂತೆ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಕ್ಲಸ್ಟರ್ ವ್ಯಾಪ್ತಿಯ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.