ಮಕ್ಕಳಿಗೆ ಶಿಸ್ತಿನ ಪಾಠ ಕಲಿಸಲು ಕ್ರೀಡೆ ಸಹಕಾರಿ

| Published : Sep 29 2025, 01:02 AM IST

ಸಾರಾಂಶ

ಅನೇಕರು ಕ್ರೀಡೆಯ ಗಂಧ ಅರಿಯದೆ ಶಿಕ್ಷಣದ ಮೂಲಕ ದೊಡ್ಡ ಹುದ್ದೆಯಲ್ಲಿದ್ದರೂ ಸಹ ಒಳ್ಳೆಯ ನಡತೆ ಗುಣಗಳ ಕೊರತೆಯಿಂದಾಗಿ ಅವರಿಗೆ ಸಮರ್ಪಕವಾದ ಸರಿ. ತಪ್ಪು, ಶಿಸ್ತು, ನಡತೆಗಳ ಅರಿವು ಇಲ್ಲದಿರುವುದನ್ನು ಕಾಣಬಹುದು. ಕೋಲಾರದ ಜನತೆಯನ್ನು ಎಲ್ಲಾ ಕ್ಷೇತ್ರಗಳಲ್ಲೂ ಸಾಧಕರನ್ನು ಕಾಣಬಹುದಾಗಿದೆ

ಕನ್ನಡಪ್ರಭ ವಾರ್ತೆ ಕೋಲಾರಮಕ್ಕಳ ಜೀವನದಲ್ಲಿ ಶಿಕ್ಷಣದಷ್ಟೇ ಕ್ರೀಡೆಗಳು ಸಹ ಮುಖ್ಯ, ಕ್ರೀಡೆಗಳ ಮೂಲಕ ಸರಿ ತಪ್ಪುಗಳ ಅರಿವು ಮೂಡಿಸಿದಾಗ ಭವಿಷ್ಯದಲ್ಲಿ ಸರಿ ತಪ್ಪುಗಳ ಅರಿವುಂಟಾಗಲು ಸಹಕಾರಿಯಾಗಲಿದೆ. ಶಿಸ್ತಿನ ನಡತೆ ಪಾಠದ ಮಾರ್ಗದರ್ಶನ ಪಡೆದು ಮಕ್ಕಳು ಉತ್ತಮ ಪ್ರಜೆಗಳಾಗಲು ಪೂರಕವಾಗಲಿದೆ ಎಂದು ಎಸ್ಪಿ ಬಿ. ನಿಖಿಲ್ ಅಭಿಪ್ರಾಯಪಟ್ಟರು.ನಗರದ ಕಠಾರಿಪಾಳ್ಯದ ಕನಕ ಬಾಸ್ಕೆಟ್ ಬಾಲ್ ಕೋರ್ಟ್‌ನಲ್ಲಿ ದಸರಾ ಕ್ರೀಡಾ ಕೊಟದ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ವಿತರಿಸಿ ಅವರು ಮಾತನಾಡಿದರು. ಕ್ರೀಡೆ ಶಿಸ್ತು ಕಲಿಸುತ್ತದೆ

ಅನೇಕರು ಕ್ರೀಡೆಯ ಗಂಧ ಅರಿಯದೆ ಶಿಕ್ಷಣದ ಮೂಲಕ ದೊಡ್ಡ ಹುದ್ದೆಯಲ್ಲಿದ್ದರೂ ಸಹ ಒಳ್ಳೆಯ ನಡತೆ ಗುಣಗಳ ಕೊರತೆಯಿಂದಾಗಿ ಅವರಿಗೆ ಸಮರ್ಪಕವಾದ ಸರಿ. ತಪ್ಪು, ಶಿಸ್ತು, ನಡತೆಗಳ ಅರಿವು ಇಲ್ಲದಿರುವುದನ್ನು ಕಾಣಬಹುದು. ಕೋಲಾರದ ಜನತೆಯನ್ನು ಎಲ್ಲಾ ಕ್ಷೇತ್ರಗಳಲ್ಲೂ ಕಾಣಬಹುದು, ವಿಧಾನಸೌಧ, ಹೈಕೋರ್ಟ್ ಸೇರಿದಂತೆ ಎಲ್ಲಡೆ ಇರುವುದು ಕಂಡಿದ್ದೇನೆ. ಅದೇ ರೀತಿ ಕ್ರೀಡೆಗಳಲ್ಲೂ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಪ್ರಶಸ್ತಿಗೆ ಭಜನರಾಗುವಂತಾಗಲಿ ಎಂದು ಹಾರೈಸಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ಕೋಲಾರ ಪ್ರಕೃತಿಯಲ್ಲಿ ಬರ ಇದ್ದರೂ ಕ್ರೀಡೆಗಳಲ್ಲಿ ಸಮೃದ್ದಿಯಾಗಿದೆ. ಬಾಸ್ಕೆಟ್ ಬಾಲ್ ಹಾಗೂ ಖೋಖೋ ಕ್ರೀಡೆಗಳಲ್ಲಿ ಕೋಲಾರದ ಕ್ರೀಡಾಪಟುಗಳು ರಾಜ್ಯದಲ್ಲಿ ಹೆಸರು ವಾಸಿಯಾಗಿದ್ದರು ಎಂದು ನೆನಪಿಸಿದರು. ಮಕ್ಕಳಿಗೆ ಆಟದ ಪರಿಕರ ಕೊಡಿಸಿ

ಮಕ್ಕಳ ಕೈಗೆ ಮೊಬೈಲ್ ನೀಡದೆ ಆಟದ ಪರಿಕರ ನೀಡಿ ಅವರ ಗಮನ ಕ್ರೀಡೆಗಳ ಕಡೆ ಸೆಳೆದು ಉತ್ತಮ ಶಿಕ್ಷಣದ ಜೊತೆಗೆ ಕ್ರೀಡೆಗಳಿಗೆ ಪ್ರೋತ್ಸಾಹಿಸಿ ಜಿಲ್ಲೆಗೆ ಹಾಗೂ ಪೋಷಕರಿಗೆ ಉತ್ತಮ ಹೆಸರು ತರುವಂತಾಗಬೇಕೆಂದು ಪೋಷಕರಿಗೆ ಕಿವಿಮಾತು ಹೇಳಿದರು. ಸಿಎಂ ಅನುದಾನದಲ್ಲಿ ಕನಕ ಬ್ಯಾಸ್ಕೆಟ್ ಬಾಲ್ ಕೋರ್ಟ್ ಮೇಲ್ಚಾವಣೆಗೆ ಒಂದು ಕೋಟಿ ರು.ಗಳನ್ನು ಮಂಜೂರು ಮಾಡಿಸುವಲ್ಲಿ ಅಂಚೆ ಅಶ್ವಥ್ ಯಶಸ್ವಿಯಾಗಿದ್ದಾರೆ. ವೈ.ಎಫ್.ಬಿ.ಸಿ ಕೋರ್ಟ್‌ನ್ನು ಮೇಲ್ದೆರ್ಜೆಗೆ ಏರಿಸಿ ಸಿಂಥೇಟಿಕ್ ಕೋರ್ಟ್ ಮಂಜೂರಾತಿ ಮಾಡಿ ಗುದ್ದಲಿ ಪೂಜೆ ಸಹ ನೆರವೇರಿಸಿದೆ ಎಂದು ತಿಳಿಸಿದರು.

ಪತ್ರಕರ್ತ ಬಿ.ವಿ.ಗೋಪಿನಾಥ್ ಮಾತನಾಡಿ, ಕೋಲಾರವು ಕುಸ್ತಿಗೆ ಹೆಸರುವಾಸಿಯಾಗಿತ್ತು. ಇದಕ್ಕೆ ಕಾರಣ ಕಠಾರಿಪಾಳ್ಯದ ದಿ.ಅಂಚೆ ರಾಮಚಂದ್ರಪ್ಪನವರು. ನಂತರದಲ್ಲಿ ಅಂಚೆ ಅಶ್ವಥ್ ಬ್ಯಾಸ್ಕೆಟ್ ಬಾಲ್ ಕ್ರೀಡೆ ಕೋಲಾರದಲ್ಲಿ ಹೆಸರು ವಾಸಿಯಾಗುವಂತೆ ಮಾಡಿದರು. ಅವರಿಗೆ ೭೬ ವರ್ಷಗಳಾಗಿದ್ದರೂ ಸಹ ಇನ್ನು ನವಯುವಕರಂತೆ ಚಟುವಟಿಕೆಯಿಂದ ಇರಲು ಕಾರಣ ಅವರಲ್ಲಿನ ಕಳೆದ ೬ ದಶಕಗಳಿಂದ ಅಳವಡಿಸಿಕೊಂಡು ಬಂದಿರುವ ಕ್ರೀಡಾ ಸ್ಫೂರ್ತಿ ಎಂದರು.ಕ್ರೀಡಾ ವಿಜೇತರಿಗೆ ಪ್ರಶಸ್ತಿ

ಇದೇ ಸಂದರ್ಭದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಅಭಿನಂದಿಸಿ ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ಗಣ್ಯರು ವಿತರಿಸಿದರು. ಕ್ರೀಡಾ ತರಭೇತಿದಾರ ರಘುರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಕನಕ ಬಾಸ್ಕೆಟ್ ಬಾಲ್ ಗೌರವಾಧ್ಯಕ್ಷ ಶ್ರೀಕೃಷ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ. ಕೆ.ಯು.ಡಿ.ಎ. ಮಾಜಿ ಅಧ್ಯಕ್ಷ ಅಬ್ದುಲ್ ಖಯ್ಯೂಂ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವೈ. ಶಿವಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ವಿ.ಪ್ರಕಾಶ್, ಅ.ಕೃ.ಸೋಮಶೇಖರ್. ಮುಖಂಡರಾದ ನರೇಂದ್ರಬಾಬು(ಗಂಗಣ್ಣ), ವಕೀಲರಾದ ದಿವಾಕರ್, ಆದಿನಾರಾಯಣ್, ಜಯಪ್ರಕಾಶ್ ನಾರಾಯಣ್, ಬೆಮೆಲ್ ಮುದ್ದಣ್ಣ, ನಗರಸಭೆ ಸದಸ್ಯ ಅಮರ್‌ನಾಥ್, ಮಾಜಿ ಸದಸ್ಯ ಮೋಹನ್ ಪ್ರಸಾದ್, ಯುವ ಕಾಂಗ್ರೆಸ್ ಕಾರ್ಯದರ್ಶಿ ಭರತ್, ಶಬರೀಶ್ ಇದ್ದರು.