ಸಾರಾಂಶ
ಕೃಷ್ಣ ಮಠದ ಪರ್ಯಾಯ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ, ಪರ್ಯಾಯದ ಕಾಲದಲ್ಲಿ ಪ್ರಥಮ ಬಾರಿಗೆ ಉಡುಪಿಗೆ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ಶುಕ್ರವಾರ ಆಗಮಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಕೃಷ್ಣ ಮಠದ ಪರ್ಯಾಯ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ, ಪರ್ಯಾಯದ ಕಾಲದಲ್ಲಿ ಪ್ರಥಮ ಬಾರಿಗೆ ಉಡುಪಿಗೆ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ಶುಕ್ರವಾರ ಆಗಮಿಸಿದರು.ಅವರನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಮತ್ತು ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಶ್ರೀಕೃಷ್ಣ ಮಠಕ್ಕೆ ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತ, ಆದರದಿಂದ ಬರಮಾಡಿಕೊಂಡರು. ಈ ಸಂದರ್ಭ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಉಪಸ್ಥಿತರಿದ್ದರು.ಬಳಿಕ ಶ್ರೀಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆದ ಮಂತ್ರಾಲಯ ಶ್ರೀಪಾದರನ್ನು ಗಂಧಾದ್ಯುಪಚಾರಗಳಿಂದ ಸತ್ಕರಿಸಿದ ಪೂಜ್ಯ ಪರ್ಯಾಯ ಶ್ರೀಪಾದರು, ತಮ್ಮ ಮಠಕ್ಕೂ ಮಂತ್ರಾಲಯ ಮಠಕ್ಕೂ ಇರುವ ಅವಿನಾಭಾವ ಮಧುರ ಸಂಬಂಧಗಳನ್ನು ಸ್ಮರಿಸಿ ಮುಂದೆಯೂ ಇದು ಶಾಶ್ವತವಾಗಿ ಮುಂದುವರಿಯಲಿ ಎಂದು ಹಾರೈಸಿದರು.
ನಮ್ಮ ಮಂತ್ರಾಲಯ ರಾಘವೇಂದ್ರ ಮಠದ ಪೀಠದಲ್ಲಿ ಬಂದ ಅನೇಕ ಯತಿಗಳ ಮತ್ತು ಉಡುಪಿ ಪುತ್ತಿಗೆ ಮಠದ ಪೀಠದಲ್ಲಿ ಬಂದ ಅನೇಕ ಯತಿಗಳ ಹೆಸರು ಒಂದೇ ಆಗಿದೆ ಎಂದು ಉಲ್ಲೇಖಿಸಿದ ಸುಬುಧೇಂದ್ರ ತೀರ್ಥ ಶ್ರೀಪಾದರು, ಸುಗುಣೇಂದ್ರ ತೀರ್ಥರು ಕೂಡ ನಮ್ಮ ಪೂರ್ವಿಕ ಯತಿಗಳಲ್ಲೊಬ್ಬರು ಎಂದು ಸ್ಮರಿಸಿ, ಈ ಪುತ್ತಿಗೆ ಮಠದ ಶ್ರೀಗಳು ನನಗೆ ಅಣ್ಣನ ಸಮಾನ, ಇವರ ಚತುರ್ಥ ಪರ್ಯಾಯಕ್ಕೆ ತಮ್ಮ ಶಾರ್ಟ್ ವಿಸಿಟ್ ಇದು. ಮತ್ತೆ ಸಂಸ್ಥಾನ ಸಮೇತ ಆಗಮಿಸುತ್ತೇವೆ ಎಂದರು.ವಿರೇಂದ್ರ ಹೆಗ್ಗಡೆ ಮಾತನಾಡಿ, ಉಡುಪಿ, ಧರ್ಮಸ್ಥಳ, ಮಂತ್ರಾಲಯಗಳ ಪ್ರತಿನಿಧಿಗಳು ಒಂದೆಡೆ ಇಂದು ಸೇರಿದ್ದು, ತ್ರಿವೇಣಿ ಸಂಗಮ ಸದೃಶವಾಗಿ ಒಂದರ್ಥದಲ್ಲಿ ಮಹಾ ಕುಂಭ ನೆನೆಪಿಸುವಂತಿದೆ ಎಂದು ಪ್ರಶಂಸಿಸಿದರು. ಅವರನ್ನು ಉಭಯ ಶ್ರೀಪಾದರೂ ಗೌರವಿಸಿದರು.
ಪರ್ಯಾಯ ಮಠದ ದಿವಾನರಾದ ನಾಗರಾಜಾಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರತೀಶ ತಂತ್ರಿ ಮತ್ತು ಮಠದ ವಿದ್ವಾಂಸರು ಅನೇಕ ಭಕ್ತರು ಉಪಸ್ಥಿತರಿದ್ದರು.