ಸಾರಾಂಶ
ಧಾರವಾಡ:
ಇಲ್ಲಿಯ ಹೊಸ ಬಸ್ ನಿಲ್ದಾಣದ ಬಳಿ ನಿರ್ಮಿಸುತ್ತಿರುವ ಗಾಂಧಿ ಭವನ ಲೋಕಾರ್ಪಣೆ ವಿಚಾರವಾಗಿ ಹೋರಾಟಗಾರ ಶ್ರೀಶೈಲ ಕಮತರ ಹಾಗೂ ಗಾಂಧಿವಾದಿಗಳ ಆಗ್ರಹ ಹಾಗೂ ಧರಣಿ ಸತ್ಯಾಗ್ರಹಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು ಶುಕ್ರವಾರ ಗಾಂಧಿ ಭವನದ ಸ್ಥಳ ಪರಿಶೀಲಿಸಿ ಶೀಘ್ರ ಲೋಕಾರ್ಪಣೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.2016-17ನೇ ಸಾಲಿನ ಆಯವ್ಯಯದಲ್ಲಿ ಮಹಾತ್ಮ ಗಾಂಧೀಜಿ ಅವರ ಜೀವನ, ತತ್ವ, ಸಂದೇಶ ಮತ್ತು ಗಾಂಧಿ ವಿಚಾರಧಾರೆಗಳನ್ನು ಹೆಚ್ಚು ಪ್ರಚಾರ ಕೈಗೊಳ್ಳಲು ಪ್ರತಿ ಜಿಲ್ಲೆಯಲ್ಲಿ ತಲಾ ₹ 3 ಕೋಟಿ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಿಸಲು 2018ರಲ್ಲಿ ಅನುದಾನ ಬಿಡುಗಡೆ ಮಾಡಿತ್ತು. ಅದರಂತೆ ಅಂದಿನ ಜಿಲ್ಲಾಧಿಕಾರಿ ಗುಲಗಂಜಿಕೊಪ್ಪದ ಸರ್ವೆ ನಂ. 80, ಹೊಸ ಬಸ್ ನಿಲ್ದಾಣದ ಎದುರಿಗೆ ಇರುವ ಜಾಗದಲ್ಲಿ 29 ಗುಂಟೆ ಜಮೀನನ್ನು ನೀಡಿದ್ದರು. ಸರ್ಕಾರದ ಸೂಚನೆಯಂತೆ 2020ರ ಸೆಪ್ಟೆಂಬರ್‌ನಲ್ಲಿ ಕರ್ನಾಟಕ ರೂರಲ್ ಇನ್ ಫ್ರಾಸ್ಟ್ರಕ್ಚರ್ ಡೆವೆಲಪಮೆಂಟ್‌ಗೆ ಕಾಮಗಾರಿ ವಹಿಸಿ, ಆದೇಶಿಸಲಾಗಿತ್ತು. ಈಗ ಕಾಮಗಾರಿ ಪೂರ್ಣಗೊಂಡಿದ್ದು, ಕೊನೆಯ ಹಂತದ ಕೆಲಸ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಈ ಕುರಿತು ಚರ್ಚಿಸಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರೊಂದಿಗೆ ಮಾತನಾಡಿ ಶೀಘ್ರದಲ್ಲಿ ಜನ ಬಳಕೆಗಾಗಿ ಕಟ್ಟಡ ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಭವನದಲ್ಲಿ ಕಚೇರಿ, ತರಬೇತಿ ಕೇಂದ್ರ, ಗ್ರಂಥಾಲಯ, ವಸ್ತುಸಂಗ್ರಹಾಲಯ, 200 ಜನ ಆಸೀನರಾಗಬಹುದಾದ ಕಾರ್ಯಕ್ರಮ ಸಭಾಂಗಣ, ವಸ್ತು ಪ್ರದರ್ಶನ ಹಾಲ್, ಅಗತ್ಯ ಶೌಚಾಲಯ, ವಾಹನ ಪಾರ್ಕಿಂಗ್ ಮತ್ತು ಕಾರಿಡಾರ್ ನಿರ್ಮಿಸಲಾಗಿದೆ. ಕಟ್ಟಡ ಸುಂದರವಾಗಿದ್ದು, ಅರ್ಥಪೂರ್ಣವಾಗಿ ರೂಪಿಸಲಾಗಿದೆ. ಇದರ ಸದ್ಬಳಕೆ ಆಗಬೇಕು. ವಾರ್ತಾ ಇಲಾಖೆ ಆಯುಕ್ತರೊಂದಿಗೆ ಈ ಕುರಿತು ಮಾತನಾಡಿ, ಗಾಂಧಿ ಭವನ ನಿರಂತರವಾಗಿ ಗಾಂಧೀಜಿಯವರ ಜೀವನ ಸಂದೇಶ ಸಾರುವ ವಿಚಾರ ಸಂಕಿರಣ, ತರಬೇತಿ, ನಾಟಕ, ಗುಡಿ ಕೈಗಾರಿಕೆಗಳ ತರಬೇತಿಗಳು ಮುಂತಾದ ಗಾಂಧಿ ಪ್ರಣೀತ ಕಾರ್ಯಚಟುವಟಿಕೆಗಳಿಂದ ಸದಾ ಕಾಲ ಕ್ರಿಯಾಶೀಲವಾಗಿರುವಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.ಈ ವೇಳೆ ಕ್ರೇಡಿಲ್ ಕಾರ್ಯನಿರ್ವಾಹಕ ಎಂಜಿನಿಯರ್ ಸುಜಾತಾ ಕಾಳೆ, ಸಹಾಯಕ ವಾರ್ತಾಧಿಕಾರಿ ಡಾ. ಎಸ್.ಎಂ. ಹಿರೇಮಠ ಇದ್ದರು.