ಶ್ರೀರಾಮಮಯ ಗುಮ್ಮಟನಗರಿ

| Published : Jan 23 2024, 01:46 AM IST

ಸಾರಾಂಶ

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆ ಪ್ರಯುಕ್ತ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಹಬ್ಬದ ವಾತಾವರಣ, ಇಡೀ ಗುಮ್ಮಟ ನಗರಿಯೇ ರಾಮಮಯವಾಗಿ ಕಂಗೊಳಿಸಿತು.

ಖಾಜಾಮೈನುದ್ದೀನ್‌ ಪಟೇಲ್‌

ಕನ್ನಡಪ್ರಭ ವಾರ್ತೆ ವಿಜಯಪುರ

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆ ಪ್ರಯುಕ್ತ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಹಬ್ಬದ ವಾತಾವರಣ, ಇಡೀ ಗುಮ್ಮಟ ನಗರಿಯೇ ರಾಮಮಯವಾಗಿ ಕಂಗೊಳಿಸಿತು.

ನಗರದಲ್ಲಿ ಜೈ ಶ್ರೀರಾಮ, ಜೈ ಜಯ ಶ್ರೀರಾಮ ಎಂದು ಭಕ್ತಿಭರಿತ ಉತ್ಸಾಹದಿಂದ ವಿವಿಧ ಕಡೆ ಎಲ್ಲೆಡೆ ಯುವಕರು ಉತ್ಸಾಹದಿಂದ ಶ್ರೀರಾಮನ ಭಾವಚಿತ್ರವುಳ್ಳ ಕೇಸರಿ ಶಲ್ಯ ಧರಿಸಿ, ಕೇಸರಿ ವರ್ಣದ ಟೊಪ್ಪಿಗೆ ಧರಿಸಿ ಭಕ್ತಿಭಾವದಿಂದ ಜಯಘೋಷ ಮೊಳಗಿಸಿದರು. ಮನೆ-ಮನೆಗಳ ಮುಂದೆ ರಂಗವಲ್ಲಿಯ ದಿವ್ಯ ಚಿತ್ತಾರ, ಕೇಸರಿ ವರ್ಣದಲ್ಲಿ ಮಿಂದೆದಿದ್ದ ನಗರ, ಎಲ್ಲೆಡೆ ಮಂಟಪದಲ್ಲಿ ವಿರಾಜಮಾನ ಶ್ರೀರಾಮನ ಭವ್ಯ ಪ್ರತಿಮೆಗೆ ವಿಶೇಷ ಪೂಜೆ.

ಬನಾಯೇಂಗೆ ಮಂದಿರ, ರಾಮ ರಾಮ ಜೈ ರಾಜಾ ರಾಮ, ಜೈ ಶ್ರೀರಾಮ ಜೈ ಶ್ರೀರಾಮ ಎಂಬಿತ್ಯಾದಿ ಭಕ್ತಿ ಭಾವದ ಗೀತೆಗಳನ್ನು ಪ್ರಸಾರ ಪಡಿಸಲಾಯಿತು. ಅನೇಕ ಸಂಘ-ಸಂಸ್ಥೆಗಳು ಬೃಹತ್ ಎಲ್‌ಇಡಿ ಪರದೆಗಳನ್ನು ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಇರಿಸಿ ರಾಮ ಮಂದಿರ ಲೋಕಾರ್ಪಣೆಯ ದೃಶ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಿದ್ದರು.

ಕರಸೇವಕರಿಗೆ ಹೃದಯಸ್ಪರ್ಶಿ ಸನ್ಮಾನ:

ರಾಮ ನವಮಿ ಉತ್ಸವ ಅಂಗವಾಗಿ ಬೃಹತ್ ಮೆರವಣಿಗೆ, ಅರ್ಥಫೂರ್ಣವಾದ ಕಾರ್ಯಕ್ರಮಗಳ ಆಚರಣೆಗೆ ಸದಾ ಮುಂಚೂಣಿ ವಹಿಸುವ ಉಮೇಶ ವಂದಾಲ ನೇತೃತ್ವದಲ್ಲಿ ರಾಮ ಮಂದಿರ ಲೋಕಾರ್ಪಣೆಯನ್ನು ಹಬ್ಬದಂತೆ ಆಚರಿಸಲು ಕಾರ್ಯಯೋಜನೆ ರೂಪಿಸಿದ್ದು ಯಶಸ್ಸು ಕಂಡಿತು.

ಶ್ರೀರಾಮ ಮಂದಿರ ಆವರಣದಲ್ಲಿ ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆದವು. ಶ್ರೀ ರವೀಂದ್ರನಾಥ ಟ್ಯಾಗೋರ ಶಾಲೆಯ ಮಕ್ಕಳು ಭಕ್ತಿಗೀತೆಗಳಿಗೆ ಹೆಜ್ಜೆ ಹಾಕುವ ಮೂಲಕ ರಾಮ ಮಂದಿರ ಲೋಕಾರ್ಪಣೆಗೆ ಸಾಂಸ್ಕೃತಿಕ ಮೆರಗು ತುಂಬಿದರು.

ನಂತರ ನಡೆದ ವೇದಿಕೆಯ ಕಾರ್ಯಕ್ರಮದಲ್ಲಿ ಕರಸೇವಕರಿಗೆ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ, ಕಾಷ್ಠದ ಶ್ರೀರಾಮ ಮೂರ್ತಿಯನ್ನು ನೀಡಿ ಗೌರವಿಸಲಾಯಿತು. ಕರಸೇವೆಯಲ್ಲಿ ಪಾಲ್ಗೊಂಡ ಅನುಭವಗಳನ್ನು ಕಾರಸೇವಕರು ಹಂಚಿಕೊಂಡರು.

ಮಂಟಪದಲ್ಲಿ ಶ್ರೀರಾಮ:

ಯುವ ಭಾರತ ಸಂಸ್ಥೆಯ ವತಿಯಿಂದ ಶ್ರೀ ರಾಮಮಂದಿರ ಲೋಕಾರ್ಪಣೆಯನ್ನು ಅರ್ಥಪೂರ್ಣವಾಗಿ ಸಂಭ್ರಮಿಸಲಾಯಿತು.

ಕಿರಾಣಾ ಮಾರುಕಟ್ಟೆಯಲ್ಲಿ ಚಿನ್ನದ ವರ್ಣದಲ್ಲಿ ಭವ್ಯ ಮಂಟಪ ನಿರ್ಮಿಸಿ ಅಲ್ಲಿ ಅಯೋಧ್ಯೆಯಲ್ಲಿರುವ ಶ್ರೀರಾಮನ ಪವಿತ್ರ ಪ್ರತಿಮೆಯ ಪ್ರತಿರೂಪವನ್ನು ಇರಿಸಲಾಗಿತ್ತು. ಸಾಕ್ಷಾತ್ ಅಯೋಧ್ಯೆಯ ರಾಮಮಂದಿರ ಪ್ರತಿಮೆಯನ್ನೇ ನೋಡುವಂತೆ ಆಪ್ತವಾಗಿರುವ ಮೂರ್ತಿ ಇರಿಸಿ ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.

ಭವ್ಯ ಶ್ರೀರಾಮ ಮಂದಿರ, ಅದಕ್ಕೆ ಹೊಂದಿಕೊಂಡಂತೆ ಧನುರ್ಧಾರಿ ಶ್ರೀರಾಮನ ಪ್ರತಿಕೃತಿ ಹಾಗೂ ಹೃದಯ ಮಂದಿರದಲ್ಲಿ ಶ್ರೀರಾಮ ಸೀತೆಯನ್ನು ಇರಿಸಿದ ಹನುಮಂತನ ದೃಶ್ಯದ ಪ್ರತಿರೂಪ ಭಕ್ತಿಭಾವಕ್ಕೆ ಸಾಕ್ಷಿಯಾಯಿತು.

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ವಿಜಯಪುರದ ಗಣೇಶ ನಗರದಲ್ಲಿರುವ ಸಾಕ್ಷಿ ಹನುಮಾನ ದೇವಾಲಯದಲ್ಲಿ ಒಂದು ಲಕ್ಷ ಸ್ವಾಹಾಕಾರ ಸಹಿತ ಶ್ರೀರಾಮ ತಾರಕ ಯಜ್ಞ ಭಕ್ತಿಭಾವದಿಂದ ನಡೆಯಿತು. ವಿದ್ವಾನ್ ಗುರುರಾಜ ಆಚಾರ್ಯ ಹೆರಕಲ್ಲ ಅವರ ನೇತೃತ್ವದಲ್ಲಿ ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಯಜ್ಞಕ್ಕೂ ಮುನ್ನ ಶ್ರೀರಾಮನ ಭಾವಚಿತ್ರವನ್ನು ಪಾಲಕಿಯಲ್ಲಿ ಇರಿಸಿ ವೈಭವದ ಮೆರವಣಿಗೆ ನಡೆಯಿತು. ನೂರಾರು ಮಹಿಳೆಯರು ಭಕ್ತಿಭಾವದಿಂದ ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಡೊಳ್ಳು ಕುಣಿತ, ಕರಡಿ ಮಜಲು ಸೇರಿದಂತೆ ಅನೇಕ ಕಲಾ ತಂಡಗಳು ಮೆರವಣಿಗೆಯ ವೈಭವ ಹೆಚ್ಚಿಸಿದವು.

ನಂತರ ಸಾಕ್ಷಿ ಹನುಮಾನ ದೇವಾಲಯದ ಸನ್ನಿಧಿಯಲ್ಲಿ ಒಂದು ಲಕ್ಷ ಸ್ವಾಹಾಕಾರ ಸಹಿತ ಶ್ರೀರಾಮ ತಾರಕ ಯಜ್ಞ ಭಕ್ತಿಪೂರ್ವಕವಾಗಿ ನಡೆಯಿತು. ಶ್ರೀರಾಮ ಜಯ ರಾಮ ಜೈ ಜೈ ರಾಮ್...ಎಂಬ ಭಕ್ತಿಪೂರ್ವಕ ನಾಮಸ್ಮರಣೆ ಮುಗಿಲು ಮುಟ್ಟಿತ್ತು. ಸುಮಾರು ೨೫ಕ್ಕೂ ಹೆಚ್ಚು ಋತ್ವಿಕರು ವಿದ್ವಾನ್ ಗುರುರಾಜ ಆಚಾರ್ಯ ಹೆರಕಲ್ಲ ನೇತೃತ್ವದಲ್ಲಿ ಯಜ್ಞವನ್ನು ನೆರವೇರಿಸಿದರು. ಒಟ್ಟು ೫ ಹೋಮಕುಂಡಗಳಲ್ಲಿ ಹೋಮ-ಹವನ ನಡೆಯಿತು. ಸಂಜೆ ಮಹಿಳಾ ಭಜನಾ ಮಂಡಳಿಗಳಿಂದ ಭಜನೆ ಹಾಗೂ ದಿಪೋತ್ಸವ ನಡೆಯಲಿದೆ ಎಂದರು.ಇಂದು ಸಮಸ್ತ ಭಾರತೀಯರ ಕನಸು ನನಸಾಗಿದೆ. ಇಂದು ಇಡೀ ದೇಶವೇ ಹೆಮ್ಮೆಪಡುವ ಹಬ್ಬದ ದಿನ, ಅನೇಕ ಜನರ ತ್ಯಾಗದ ಫಲವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕನಸು ನನಸಾಗಿದೆ.

-ಉಮೇಶ ಕಾರಜೋಳ,

ಅಧ್ಯಕ್ಷರು ಯುವ ಭಾರತ ಸಂಸ್ಥೆ ವಿಜಯಪುರ.