ಚಿಕ್ಕಮಗಳೂರುಹಿಂಸೆ, ಅಸಮಾನತೆ ಇರುವ ಪ್ರಸ್ತುತ ಸಮಾಜಕ್ಕೆ ಶ್ರೀ ಸಂತಸೇವಾಲಾಲ್‌ರ ತತ್ವಾದರ್ಶಗಳು ಮಾರ್ಗದರ್ಶನ ನೀಡುತ್ತವೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಪಟ್ಟರು.

ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ್ 287ನೇ ಜಯಂತಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಹಿಂಸೆ, ಅಸಮಾನತೆ ಇರುವ ಪ್ರಸ್ತುತ ಸಮಾಜಕ್ಕೆ ಶ್ರೀ ಸಂತಸೇವಾಲಾಲ್‌ರ ತತ್ವಾದರ್ಶಗಳು ಮಾರ್ಗದರ್ಶನ ನೀಡುತ್ತವೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಪಟ್ಟರು.ಜಿಲ್ಲಾಡಳಿತ, ಬಂಜಾರ ಸಂಘ ಭಾನುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ್ 287ನೇ ಜಯಂತಿಯಲ್ಲಿ ಮಾತನಾಡಿದ ಅವರು, ಅಸಮಾನತೆ, ಶೋಷಣೆ ಮುಕ್ತಮಾಡಿ, ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಸಮಸಮಾಜ ನಿರ್ಮಿಸಬೇಕು ಎಂಬ ಕಾರಣಕ್ಕೆ 12 ನೇ ಶತಮಾನದಲ್ಲಿ ಬಸವಣ್ಣ, 17 ನೇ ಶತಮಾನದಲ್ಲಿ ಶ್ರೀ ಸಂತ ಸೇವಾಲಾಲ್, 21ನೇ ಶತಮಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್, ಕುವೆಂಪು ಮತ್ತಿತರ ಮಹನೀಯರು ಸಮಾಜ ಸುಧಾರಣೆಗೆ ಹೋರಾಟ ಮಾಡಿದ್ದಾರೆ. ಸತ್ಯ, ಅಹಿಂಸೆ ಪಾಲನೆ ಸೇವಾಲಾಲ್‌ ಅವರ ಧ್ಯೇಯವಾಗಿತ್ತು ಎಂದು ಹೇಳಿದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ, ಸಂತ ಸೇವಾಲಾಲ್‌ ಬದುಕಿದ್ದಾಗ ಮಾಡಿದ್ದ ಸಮಾಜ ಮುಖಿ ಕಾರ್ಯಗಳಿಂದ ಸಮಾಜಕ್ಕೊಂದು ಆತ್ಮಶಕ್ತಿಯ ಜಾಗೃತಿ ಮೂಡಿದೆ. ಶ್ರೀಮಂತಿಕೆಯಿಂದಿದ್ದ ಬಂಜಾರ ಸಮಾಜ ಕಾಲದ ಪರಿಸ್ಥಿತಿಗೆ ಸಿಲುಕಿ ಇಂದು ನಿಕೃಷ್ಟ ಸ್ಥಿತಿಯಲಿದೆ. ಲಮಾಣಿ ಭಾಷೆ ಮತ್ತು ಸಂಸ್ಕೃತಿ ಉಳಿಸಲು ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಾಗ ಬಂಜಾರ ಅಕಾಡೆಮಿ ಸ್ಥಾಪನೆ ಮಾಡಿದ್ದೇವೆ ಎಂದು ಹೇಳಿದರು.ಉಪನ್ಯಾಸ ನೀಡಿದ ಮೀನಾಕ್ಷಿ ಬಾಯಿ, 1749 ರಲ್ಲಿ ದಾವಣಗೆರೆಜಿಲ್ಲೆ ನ್ಯಾಮತಿ ತಾಲೂಕು ಸೂರಗೊಂಡನ ಕೊಪ್ಪದಲ್ಲಿ ಸಂತ ಸೇವಾಲಾಲರು ಜನಿಸುವ ಮೂಲಕ ಮಾನವೀಯ ಮೌಲ್ಯಗಳ ಪುನರ್‌ ಜನ್ಮವಾದಂತಾಯಿತು. ಬಂಜಾರ ಸಮುದಾಯದ ಆತ್ಮಗೌರವದ ಉದಯವಾದಂತಾಯಿತು. ಶಿಕ್ಷಣದಿಂದ ವಂಚಿತರಾಗಿ ಶೋಷಣೆಗೆ ಒಳಗಾಗಿದ್ದ ಬಂಜಾರ ಸಮಾಜಕ್ಕೆ ದಿಕ್ಸೂಚಿಯಾದವರೇ ಸಂತ ಸೇವಲಾಲರು ಎಂದು ಹೇಳಿದರು.ಬ್ರಿಟಿಷರ ವಿರುದ್ಧ ಗಿರಿಜನ ಅಪರಾಧದಂಡ ಸಂಹಿತೆ ತಂದು ನಮ್ಮನ್ನು ಶೋಷಿಸಿದರು. ನಂತರ ಮೈಸೂರು ರಾಜರ ಕಾಲದಲ್ಲಿ ಶ್ರೀ ನಾಲ್ವಡಿಕೃಷ್ಣರಾಜ ಒಡೆಯರ್‌ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಹಕರಿಸಿದರು ಎಂದರು.

ಬಂಜಾರ ಸಮಾಜದ ಮುಖಂಡ ರಾಮನಾಯ್ಕ ಮಾತನಾಡಿದರು. ಸಿಡಿಎ ಅಧ್ಯಕ್ಷಎಚ್.ಪಿ.ಮಂಜೇಗೌಡ, ನಗರಸಭೆ ಉಪಾಧ್ಯಕ್ಷೆ ಲಲಿತಾಬಾಯಿ, ಉಪತಹಸಿಲ್ದಾರ್ ಪ್ರಸನ್ನ, ಬಂಜಾರ ಸಂಘದ ಮುಖಂಡರಾದ ಲಾಲ್‌ಸಿಂಗ್, ಆನಂದನಾಯ್ಕ ಮೊದಲಾದವರಿದ್ದರು.ಫೋಟೋ:

ಜಿಲ್ಲಾಡಳಿತ, ಬಂಜಾರ ಸಂಘ ಭಾನುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ್ 287ನೇ ಜಯಂತಿಯನ್ನು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಉದ್ಘಾಟಿಸಿದರು. ಶಾಸಕ ತಮ್ಮಯ್ಯ ಸೇರಿದಂತೆ ಮೊದಲಾದವರಿದ್ದರು.