ಬೆಂಗಳೂರು : ರಾಜ್ಯದಲ್ಲಿ ಆರಂಭಗೊಂಡಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಬೂತ್‌ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಕಡ್ಡಾಯವಾಗಿ ಮನೆ-ಮನೆಗೆ ತೆರಳಿ ಮತದಾರರಿಗೆ ಗಣತಿ ನಮೂನೆ ನೀಡುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ ಅವರು ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನಗಳು, ಮಾರ್ಗಸೂಚಿಗಳು ಮತ್ತು ವೇಳಾಪಟ್ಟಿ ಪ್ರಕಾರ ಜೂ.30ರಿಂದ ಮತದಾರರಿಗೆ ಗಣತಿ ನಮೂನೆ ವಿತರಣೆ ಪ್ರಾರಂಭವಾಗಿದೆ. ಆದರೂ ಬಿಎಲ್‌ಒಗಳು ಮನೆ-ಮನೆಗೆ ತೆರಳಿ ಗಣತಿ ನಮೂನೆ ವಿತರಿಸುತ್ತಿಲ್ಲ ಎಂಬ ಆರೋಪ ಸಂಬಂಧ ದೂರುಗಳು ಬಂದಿವೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮಾರ್ಗಸೂಚಿ ಪ್ರಕಾರ ಎಲ್ಲಾ ಬಿಎಲ್‌ಒಗಳು ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಿಸಬೇಕು. ಎಸ್‌ಐಆರ್‌ ಕುರಿತು ಆಯೋಗದ ಎಲ್ಲ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದ್ದಾರೆ.


ಗಣತಿ ನಮೂನೆ ಫಾರ್ಮ್‌ಗಳನ್ನು ಭರ್ತಿ ಮಾಡಲು ಸಾಧ್ಯವಾಗದ ಮತದಾರರಿಗೆ ಅಗತ್ಯ ಸಹಾಯಕ್ಕಾಗಿ ಮತದಾರರ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಎಸ್‌ಐಆರ್‌: 4ನೇ ದಿನದಲ್ಲಿ 2.01 ಕೋಟಿ ಅರ್ಜಿ ವಿತರಣೆ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ 6 ಗಂಟೆ ವೇಳೆಗೆ ರಾಜ್ಯಾದ್ಯಂತ 2.01 ಕೋಟಿ ಮತದಾರರಿಗೆ ಗಣತಿ ನಮೂನೆ ವಿತರಿಸಲಾಗಿದೆ. ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ ಈವರೆಗೆ ಶೇ.36.30ರಷ್ಟು ಪ್ರಗತಿ ಸಾಧಿಸಲಾಗಿದೆ. ಈವರೆಗೆ ವಿತರಿಸಲಾದ ಗಣತಿ ನಮೂನೆಗಳ ಪೈಕಿ 12.07 ಲಕ್ಷ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ.

54,823 ಮತದಾರರು ಗಣತಿ ನಮೂನೆ ಭರ್ತಿ

ಆನ್‌ಲೈನ್‌ ಮುಖಾಂತರ 54,823 ಮತದಾರರು ಗಣತಿ ನಮೂನೆ ಭರ್ತಿ ಮಾಡಿ ಸಲ್ಲಿಸಿದ್ದಾರೆ. ಪತ್ತೆಯಾಗದ ಮತ್ತು ಗೈರಾದ ಮತದಾರರು 264, ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು 6,828, ಮೃತಪಟ್ಟ ಮತದಾರರು 8,853, ಈಗಾಗಲೇ ನೋಂದಣಿ ಮಾಡಿಕೊಂಡ ಮತದಾರರು 1,636 ಹಾಗೂ ಇತರೆ 107 ಮತದಾರರ ಮಾಹಿತಿ ಸಂಗ್ರಹಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.