ಹೊಸಹಳ್ಳಿ, ರಾಮನಹಳ್ಳಿ ಗ್ರಾಮಸ್ಥರಿಂದ ಶ್ರೀಮಾರಮ್ಮನ ಉತ್ಸವ ಅದ್ಧೂರಿಯಾಗಿ ಆಚರಣೆ

| Published : May 15 2025, 01:44 AM IST

ಹೊಸಹಳ್ಳಿ, ರಾಮನಹಳ್ಳಿ ಗ್ರಾಮಸ್ಥರಿಂದ ಶ್ರೀಮಾರಮ್ಮನ ಉತ್ಸವ ಅದ್ಧೂರಿಯಾಗಿ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಪೂರ್ವಿಕರ ಕಾಲದಿಂದಲೂ ಗ್ರಾಮದೇವತೆ ಶ್ರೀಮಾರಮ್ಮ ಮತ್ತು ಶ್ರೀಬಿಸಿಲು ಮಾರಮ್ಮ ಉತ್ಸವವನ್ನು ಎರಡು ಗ್ರಾಮಗಳ ಯಜಮಾನರ ಸಮ್ಮುಖದಲ್ಲಿ ನಡೆಸಲಾಗುತ್ತಿದೆ. 3 ವರ್ಷಗಳಿಗೊಮ್ಮೆ ಗ್ರಾಮದೇವತೆ ಶ್ರೀಮಾರಮ್ಮ ಹಬ್ಬವನ್ನು ಮೂರು ದಿನಗಳ ಕಾಲ ಸಂಭ್ರಮದಿಂದ ಆಚರಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಹೊಸಹಳ್ಳಿ- ರಾಮನಹಳ್ಳಿ ಗ್ರಾಮಸ್ಥರು ಗ್ರಾಮದೇವತೆ ಶ್ರೀಮಾರಮ್ಮ ಮತ್ತು ಶ್ರೀಬಿಸಿಲು ಮಾರಮ್ಮ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು.ಗ್ರಾಮದ ಶ್ರೀಮಾರಮ್ಮ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನಡೆದು ಸಾಮೂಹಿಕ ತಂಬಟ್ಟಿನ ಆರತಿಯೊಂದಿಗೆ ಪೂಜಾ ಕುಣಿತ, ವೀರಗಾಸೆ ಕುಣಿತದೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿದರು. ನಂತರ ಹೊಸಹಳ್ಳಿ-ರಾಮನಹಳ್ಳಿ ವೃತ್ತದ ಶ್ರೀಬಿಸಿಲಿ ಮಾರಮ್ಮ ದೇವಾಲಯದಲ್ಲಿ ಗ್ರಾಮದೇವತೆಗೆ ತಂಪು ತೋರಿದರು.

ಮುಖಂಡ ಹೊಸಹಳ್ಳಿ ಶಿವಲಿಂಗೇಗೌಡ, ನಮ್ಮ ಪೂರ್ವಿಕರ ಕಾಲದಿಂದಲೂ ಗ್ರಾಮದೇವತೆ ಶ್ರೀಮಾರಮ್ಮ ಮತ್ತು ಶ್ರೀಬಿಸಿಲು ಮಾರಮ್ಮ ಉತ್ಸವವನ್ನು ಎರಡು ಗ್ರಾಮಗಳ ಯಜಮಾನರ ಸಮ್ಮುಖದಲ್ಲಿ ನಡೆಸಲಾಗುತ್ತಿದೆ. 3 ವರ್ಷಗಳಿಗೊಮ್ಮೆ ಗ್ರಾಮದೇವತೆ ಶ್ರೀಮಾರಮ್ಮ ಹಬ್ಬವನ್ನು ಮೂರು ದಿನಗಳ ಕಾಲ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದರು.

ಮೇ 13ರಂದು ದೇವಾಲಯದ ಆವರಣದಲ್ಲಿ ತಂಬಿಟ್ಟಿನ ಬುಟ್ಟಿಯಲ್ಲಿ ಅಕ್ಕಿ ತಂದು ತೊಳೆದು ಒಣಹಾಕಿದ ನಂತರ ಅತ್ತಿಗೆ-ನಾದಿನಿ, ಅಕ್ಕ-ತಂಗಿಯರು, ಹೆಣ್ಣುಮಕ್ಕಳು ನೀರು ಎರಚುವ ಉತ್ಸವದಲ್ಲಿ ಸಂಭ್ರಮಿಸಿದರು. ಬಳಿಕ ಅಕ್ಕಿಯನ್ನು ಮನೆಗೆ ಕೊಂಡೊಯ್ಯುತ್ತಾರೆ. ಸಂಜೆ ಪೂಜಾ ಕುಣಿತ ನಡೆಯಿತು.

ಬುಧವಾರ ಬೆಳಗ್ಗೆ ಎರಡು ಗ್ರಾಮಸ್ಥರು ಒಗ್ಗೂಡಿ ಭಾವೈಕ್ಯತೆಯಿಂದ ಶ್ರೀಮಾರಮ್ಮ ದೇವತೆಗೆ ಶ್ರದ್ಧಾಭಕ್ತಿಯಿಂದ ಪೂಜಾ ಕೈಂಕರ್ಯಗಳು ನಡೆದು ಬಿದಿರು ಬುಟ್ಟಿಯಲ್ಲಿ ತಂಬಿಟ್ಟಿನ ಆರತಿಯ ಮೆರವಣಿಗೆ ಸಾಗಿ ತಂಪು ತೋರಿ ಪೂಜೆ ಸಲ್ಲಿಸಿದರು. ಹಬ್ಬದ ಪ್ರಯುಕ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಗೆಳತಿಗುಡ್ಡದಲ್ಲಿ ಜೂ.22 ರಂದು ರಾಜ್ಯ ಮಟ್ಟದ ಕವಿ ಸಮ್ಮೇಳನ

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣದ ಹೊರವಲಯ ಐತಿಹಾಸಿಕ ಮತ್ತು ಪಾಕೃತಿಕ ಸೌಂದರ್ಯದ ತಾಣವಾದ ಗೆಳತಿಗುಡ್ಡದಲ್ಲಿ ಜೂ.22ರ ಭಾನುವಾರ ರಾಜ್ಯ ಮಟ್ಟದ ಕವಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ಕವಿಗಳಿಂದ ಕವಿಗೋಷ್ಠಿ, ಸಂವಾದ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗೆಳತಿಗುಡ್ಡ ಪರಿಸರಕೂಟದ ಸದಸ್ಯರು ತಿಳಿಸಿದ್ದಾರೆ.

ಪಟ್ಟಣದ ಗೆಳತಿಗುಡ್ಡ ಪರಿಸರಕೂಟ, ಕನ್ನಡ ಸಂಘ ಮತ್ತು ಸಾಹಿತ್ಯ ಚಾವಡಿಯ ಸಂಯುಕ್ತಾಶ್ರಯದಲ್ಲಿ ಕಾವ್ಯರಚನೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಹ್ವಾನಿತ ವಿದ್ವಾಂಸರಿಂದ ಉಪನ್ಯಾಸ ಮತ್ತು ಸಂವಾದ ಗೋಷ್ಠಿಗಳಿದ್ದು ಪೂರ್ವಭಾವಿಯಾಗಿ ಆಯ್ಕೆಯಾದ ಸುಮಾರು 40 ಕವಿಗಳಿಂದ ಕವಿಗೋಷ್ಠಿ ಮತ್ತು ಸಂವಾದವನ್ನು ಆಯೋಜಿಸಲಾಗಿದೆ. ಜೂ.22 ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆವರೆಗೆ ನಡೆಯಲಿವೆ. ರಾಜ್ಯಮಟ್ಟದ ಕವಿ ಸಮ್ಮೇಳನದ ಕವಿಗೋಷ್ಠಿಗೆ ಆಯ್ಕೆಯಾದ ಕವಿಗಳಿಗೆ ಪ್ರಯಾಣ ಭತ್ಯೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು ತಮ್ಮ ಮೂರು ಕವನಗಳ ಪ್ರತಿಗಳನ್ನು ಈ ಕೆಳಗೆ ನೀಡಿರುವ ವಿಳಾಸಕ್ಕೆ ಕಳುಹಿಸಿ ಕೊಡಬೇಕು. ಬರುವ ಕವಿತೆಗಳನ್ನು ನಾಡಿನ ಇಬ್ಬರು ಹಿರಿಯ ವಿದ್ವಾಂಸರಿಂದ ಪರಿಶೀಲಿಸಿ ಅಂತಿಮವಾಗಿ 40 ಸಂಖ್ಯೆಗೆ ಸೀಮಿತಿಗೊಳಿಸುವಂತೆ ಆಯ್ಕೆ ಮಾಡಲಾಗುವುದು. ಕವನಗಳನ್ನು ಸ್ವೀಕರಿಸಲು ಮೇ 31 ಕೊನೆ ದಿನ.

ಸಮ್ಮೇಳನಕ್ಕೆ ಭಾಗವಹಿಸುವ ಕವಿಗಳು ಮತ್ತು ಸಾಹಿತ್ಯಾಸಕ್ತರಿಗೆ ಪ್ರವೇಶ ಉಚಿತವಾಗಿದೆ. ಕಾರ್ಯಕಮದ ದಿನದಂದು ಪಟ್ಟಣದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ವಾಹನ ಸೌಕರ್ಯ ಮತ್ತು ಮಧ್ಯಾಹ್ನದ ಭೋಜನ, ಚಹಾ ವ್ಯವಸ್ಥೆ ಮಾಡಲಾಗುವುದು. ಆದ್ದರಿಂದ ರಾಜ್ಯಾದಂತ ಹೆಚ್ಚಿನ ಸಂಖ್ಯೆಯಲ್ಲಿ ಕವಿಗಳು, ಸಾಹಿತ್ಯ ಪ್ರೇಮಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.

ಕವನಗಳನ್ನು mdk053@gmail.com - prasad.nkn@gmail.com ಗೆ ಇಮೇಲ್ ಮಾಡಬಹುದು. ಅಥವಾ ಜೀರಹಳ್ಳಿ ರಮೇಶಗೌಡ. ವಕೀಲರು, ಬಿಂಡಿಗನವಿಲೆ ರಸ್ತೆ, ಟಿ.ಬಿ. ಬಡಾವಣೆ, ನಾಗಮಂಗಲ-571432. ಮತ್ತು ಮಹಮ್ಮದ್ ಕಲೀಂ ಉಲ್ಲಾ, ಮೊ.87622925443ಗೆ ಕಳಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.