ಸಾರಾಂಶ
ಎನ್‌ಸಿಒಆರ್‌ಡಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ ಉಡುಪಿಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಣಿಕೆ, ಮಾರಾಟ, ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಂಬಂಧಪಟ್ಟ ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಬುಧವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್‌ಸಿಒಆರ್‌ಡಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇಂದು ಯುವ ಸಮುದಾಯ ಮಾದಕ ವಸ್ತುಗಳಿಗೆ ಆಕರ್ಷಿತವಾಗುತ್ತಿದೆ. ಅವುಗಳ ಬಳಕೆಯಿಂದ ಅವರ ದೇಹ, ಮನಸ್ಸು, ಕುಟುಂಬಗಳ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ಅವುಗಳಿಂದ ದೂರ ಉಳಿಯುವಂತೆ ಜಾಗೃತಿ ಕಾರ್ಯಕ್ರಮಗಳು ಹಾಗೂ ವಿವಿಧ ಸ್ಪರ್ಧೆಗಳನ್ನು ವಿದ್ಯಾಸಂಸ್ಥೆಗಳಲ್ಲಿ ಮಾಡಬೇಕು ಎಂದು ಸೂಚನೆ ನೀಡಿದರು.ಈಗಾಗಲೇ ಕೆಲವು ವಿದ್ಯಾಸಂಸ್ಥೆಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇವುಗಳು ಎಷ್ಟು ಪ್ರಮಾಣದಲ್ಲಿ ಉಪಯುಕ್ತವಾಗುತ್ತದೆ ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕಬೇಕು ಎಂದರು.ತಂಬಾಕು ಉತ್ಪನ್ನಗಳು ಸೇರಿದಂತೆ ಮಾದಕ ವಸ್ತುಗಳ ದುಶ್ಚಟಗಳಿಗೆ ಕಾರ್ಮಿಕರು ವ್ಯಸನಿಗಳಾಗುತ್ತಿದ್ದಾರೆ. ಅವರಿಗೂ ಸಹ ಅರಿವು, ಮನಪರಿವರ್ತನೆ ಕಾರ್ಯಕ್ರಮಗಳನ್ನು ಕಾರ್ಮಿಕ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಬೇಕು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಯ ಸಿಬ್ಬಂದಿ ಕೃಷಿ ಭೂಮಿಯಲ್ಲಿ ಗಾಂಜಾ ಬೆಳೆಯುವ ಬಗ್ಗೆ, ಕರಾವಳಿ ಪೊಲೀಸರು ಮೀನುಗಾರಿಕಾ ಜೆಟ್ಟಿಗಳಲ್ಲಿ, ಬೀಚ್‌ಗಳಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣಿಕೆ ಬಗ್ಗೆ ನಿಗಾ ವಹಿಸಬೇಕು. ಅಂಚೆ ಇಲಾಖೆಯ ಪಾರ್ಸೆಲ್‌ಗಳಲ್ಲಿ ಮಾದಕವಸ್ತು ಸರಬರಾಜಿನ ಬಗ್ಗೆ ದೂರುಗಳಿಲ್ಲ. ಆದರೆ ಖಾಸಗಿ ಪಾರ್ಸೆಲ್ ಹಾಗೂ ಆನ್ಲೈನ್ ಮಾರುಕಟ್ಟೆಯ ಮೇಲೆ, ರೈಲ್ವೆ ನಿಲ್ದಾಣಗಳಲ್ಲಿ ಮಾದಕ ವಸ್ತುಗಳ ಸರಬರಾಜು ಬಗ್ಗೆ ನಿಗಾ ವಹಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಸೂಕ್ತ ತನಿಖೆ ಮಾಡಬೇಕು ಎಂದರು.ಸಭೆಯಲ್ಲಿ ಎಎಸ್ಪಿ ಪಿ.ಎ. ಹೆಗಡೆ, ಡಿಎಫ್ಓ ಗಣಪತಿ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.--------------
6 ಪ್ರಕರಣಗಳು, 80,000 ರು. ದಂಡಜಿಲ್ಲಾ ಪೊಲೀಸ್ ಅಧೀಕ್ಷಕ ಡಾ..ಅರುಣ್ ಕೆ. ಮಾತನಾಡಿ, ಜಿಲ್ಲೆಯಲ್ಲಿ ಅಸುರಕ್ಷಿತ ಆಹಾರ ಪದಾರ್ಥಗಳ ಮಾರಾಟದ 9 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿನ 6 ಪ್ರಕರಣಗಳಲ್ಲಿ 80,000 ರು. ದಂಡ ವಿಧಿಸಲಾಗಿದೆ. ಇನ್ನು 3 ಪ್ರಕರಣಗಳು ತನಿಖೆಯಲ್ಲಿವೆ. ಅಲ್ಲದೇ ಜೀವಕ್ಕೆ ಹಾನಿಯನ್ನುಂಟು ಮಾಡಬಹುದಾದ ಆಹಾರ ಪದಾರ್ಥಗಳ ಮಾರಾಟದ 6 ಪ್ರಕರಣಗಳು ಜಿಲ್ಲಾ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ ಎಂದು ಮಾಹಿತಿ ನೀಡಿದರು.