ಶೃಂಗೇರಿ 3 ತಾಲೂಕುಗಳ ಅತಿವೃಷ್ಠಿಗೆ ಪರಿಹಾರ ರೂಪಿಸಲು ವಿಫಲ

| Published : Oct 07 2024, 01:38 AM IST

ಸಾರಾಂಶ

ನರಸಿಂಹರಾಜಪುರ, ಈ ವರ್ಷ ಶೃಂಗೇರಿ ಕ್ಷೇತ್ರದಲ್ಲಿ ಬಾರೀ ಮಳೆಯಾಗಿ ಅಡಕೆ, ಕಾಫಿ, ಕಾಳು ಮೆಣಸು ಸೇರಿದಂತೆ ಹಲವು ಬೆಳೆಗಳು ಹಾಳಾಗಿದ್ದರೂ ಶೃಂಗೇರಿ ಕ್ಷೇತ್ರದ 3 ತಾಲೂಕನ್ನು ಅತಿವೃಷ್ಠಿ ಪ್ರದೇಶವೆಂದು ಘೋಷಿಸಲು ಶಾಸಕ ಟಿ.ಡಿ.ರಾಜೇಗೌಡರು ವಿಫಲರಾಗಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಅರುಣಕುಮಾರ್‌ ಆರೋಪಿಸಿದರು.

- ಬಿಜೆಪಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಅರುಣಕುಮಾರ್ ಆರೋಪ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಈ ವರ್ಷ ಶೃಂಗೇರಿ ಕ್ಷೇತ್ರದಲ್ಲಿ ಬಾರೀ ಮಳೆಯಾಗಿ ಅಡಕೆ, ಕಾಫಿ, ಕಾಳು ಮೆಣಸು ಸೇರಿದಂತೆ ಹಲವು ಬೆಳೆಗಳು ಹಾಳಾಗಿದ್ದರೂ ಶೃಂಗೇರಿ ಕ್ಷೇತ್ರದ 3 ತಾಲೂಕನ್ನು ಅತಿವೃಷ್ಠಿ ಪ್ರದೇಶವೆಂದು ಘೋಷಿಸಲು ಶಾಸಕ ಟಿ.ಡಿ.ರಾಜೇಗೌಡರು ವಿಫಲರಾಗಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಅರುಣಕುಮಾರ್‌ ಆರೋಪಿಸಿದರು.

ಶನಿವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವನ್ಯಜೀವಿ ಸಪ್ತಾಹದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರು ನೂರಾರು ಎಕ್ರೆ ಅರಣ್ಯ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ ಎಂದು ಹೇಳಿದ್ದಾರೆ. ಶಾಸಕ ಟಿ.ಡಿ. ರಾಜೇಗೌಡರು ಒತ್ತುವರಿ ಅರಣ್ಯ ಭೂಮಿ ತೆರವುಗೊಳಿಸಿದ್ದಾರೆ ಎಂದು ಅರಣ್ಯ ಮಂತ್ರಿಗಳೇ ಹೇಳಿರುವುದರಿಂದ ಶಾಸಕರು ರೈತರ ಪರವಾಗಿ ಇಲ್ಲ ಎಂಬುದು ಸಾಬೀತಾಗಿದೆ ಎಂದರು.

ಕಳೆದ 2023ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡಿ.ಎನ್‌.ಜೀವರಾಜ್‌ ಅವರು ಟಿ.ಡಿ.ರಾಜೇಗೌಡರ ವಿರುದ್ದ 200 ಮತಗಳ ಅಂತರದಿಂದ ಸೋತಿದ್ದರು. ಅಂಚೆ ಮತ ಎಣಿಕೆ ನಡೆದಿಲ್ಲ ಹಾಗೂ ಚುನಾವಣಾ ಅಕ್ರಮ ನಡೆದಿದೆ ಎಂದು ಡಿ.ಎನ್‌.ಜೀವರಾಜ್‌ ಹೈಕೋರ್ಟಿಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡರು ಆ ಅರ್ಜಿ ವಜಾ ಮಾಡಬೇಕು ಹೈಕೋರ್ಟಿಗೆ ಅರ್ಜಿ ಹಾಕಿದ್ದರು. ಹೈಕೋರ್ಟ್‌ ಅರ್ಜಿ ವಜಾಗೊಳಿಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಶಾಸಕ ಟಿ.ಡಿ.ರಾಜೇಗೌಡರು ಸುಪ್ರೀಂ ಕೋರ್ಟನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸುರ್ಪೀಂ ಕೋರ್ಟ ವಿಚಾರಣೆ ನಡೆಸಿ ಈ ಪ್ರಕರಣ ಹೈಕೋರ್ಟ ಮುಂದುವರಿಸಲಿ ಎಂದು ಹೇಳಿದೆ. ಕೆಲವು ಕಾಂಗ್ರೆಸ್‌ ನಾಯಕರು ಜೀವರಾಜ್‌ ಗೆ ಹಿನ್ನಡೆಯಾಗಿದೆ ಎಂದಿದ್ದಾರೆ. ಆದರೆ, ಇದು ಹಿನ್ನೆಡೆಯಾಗಿಲ್ಲ. ಶಾಸಕ ರಾಜೇಗೌಡರೇ ಗಡಿಬಿಡಿ ಗೊಂಡಿದ್ದು ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ ಎಂದು ಟೀಕಿಸಿದರು.

ಸರ್ಕಾರ ಬಿಪಿಎಲ್‌ ಕಾರ್ಡುದಾರಿಗೆ ಕೆಲವು ನಿಯಮ ಹೇರಿ ಉಚಿತ ಅಕ್ಕಿ ನಿಲ್ಲಿಸಿ 1 ಕೆಜಿ ಅಕ್ಕಿಗೆ ₹ 34 ತೆಗೆದುಕೊಳ್ಳುತ್ತಿದ್ದಾರೆ. ಕಾರು, ಬೈಕ್‌ ಇದ್ದವರಿಗೆ ಅಕ್ಕಿ ನಿರಾಕರಿಸಲಾಗಿದೆ. ಪ್ರಸ್ತತ ಎಲ್ಲಾ ಕೂಲಿ ಕಾರ್ಮಿಕರು ಸಹ ಕಾರು ಇಟ್ಟುಕೊಳ್ಳುತ್ತಿದ್ದಾರೆ. ಸಣ್ಣ ವ್ಯಾಪಾರಕ್ಕೂ ಕಾರು, ಬೈಕ್‌ ಅವಶ್ಯಕವಾಗಿದೆ. ಸರ್ಕಾರದ ಈ ಆದೇಶದಿಂದ ಬಡವರಿಗೆ ತೊಂದರೆಯಾಗಿದೆ. ಬಿಪಿಎಲ್‌ ಕಾರ್ಡುದಾರರಿಗೆ ಈ ಹೊಸ ಕಾನೂನು ಜಾರಿ ಮಾಡಿರುವುದನ್ನು ಬಿಜೆಪಿ ಖಂಡಿಸುತ್ತದೆ ಎಂದರು.

ಸರ್ಕಾರ 3 ಎಕರೆವರೆಗಿನ ಒತ್ತುವರಿ ಭೂಮಿ ತೆರವುಗೊಳಿಸುವುದಿಲ್ಲ ಎಂದು ಹೇಳುತ್ತಿದೆ. ಇದನ್ನು 1983 ರಲ್ಲಿ ಕೋರ್ಟೇ ಆದೇಶ ಮಾಡಿತ್ತು. ಇದು ಈ ಸರ್ಕಾರದ ಹೊಸ ಕಾನೂನು ಅಲ್ಲ. 25 ಎಕರೆವರೆಗೆ ಲೀಸ್‌ ಮೇಲೆ ಕೊಡುವ ಕಾನೂನನ್ನು ಮೊದಲು ಸರ್ಕಾರ ಜಾರಿಗೆ ತರಲಿ. 4- ನೋಟಿಫಿಕೇಷನ್‌ ಗೆ ಸಂಬಂಧಪಟ್ಟಂತೆ ಕಡೂರಿನಲ್ಲಿ ಮಾತ್ರ ಸೆಟಲ್‌ ಮೆಂಟ್ ಅಧಿಕಾರಿ ಇದ್ದಾರೆ. ಶೃಂಗೇರಿ ಕ್ಷೇತ್ರಕ್ಕೂ ಒಬ್ಬ ಸೆಟಲ್‌ ಮೆಂಟ್ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ಮುಖಂಡ ಎಚ್‌.ಡಿ.ಲೋಕೇಶ್‌, ಎನ್‌.ಎಂ.ಕಾಂತರಾಜ್‌, ಕೆಸವಿ ಮಂಜುನಾಥ್‌, ಪರ್ವೀಜ್‌, ಸುರಭಿ ರಾಜೇಂದ್ರ ಇದ್ದರು.