ಶೃಂಗೇರಿ: ಚಂದ್ರಶೇಖರ ಭಾರತೀ ಸ್ವಾಮಿಗಳ 71 ನೇ ಆರಾಧನಾ ಮಹೋತ್ಸವ ಸಂಪನ್ನ

| Published : Sep 22 2025, 01:00 AM IST

ಶೃಂಗೇರಿ: ಚಂದ್ರಶೇಖರ ಭಾರತೀ ಸ್ವಾಮಿಗಳ 71 ನೇ ಆರಾಧನಾ ಮಹೋತ್ಸವ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ ಶ್ರೀ ಶಾರದಾ ಪೀಠದ 34 ನೇ ಪೀಠಾಧಿಪತಿಗಳಾಗಿದ್ದ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿಗಳ 71 ನೇ ಆರಾಧನಾ ಮಹೋತ್ಸವ ಮಹಾಲಯ ಅಮಾವಾಸ್ಯೆ ದಿನವಾದ ಭಾನುವಾರ ನಡೆಯಿತು.

ಮಹಾಲಯ ಅಮಾವಾಸ್ಯೆ ಯಂದೇ ದೇಹತ್ಯಾಗ ಮಾಡಿದ್ದ ಶ್ರೀ । ಜಗದ್ಗುರು ಶ್ರೀ ಭಾರತೀ ತೀರ್ಥರ ವಿಶೇಷ ಪೂಜೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಶ್ರೀ ಶಾರದಾ ಪೀಠದ 34 ನೇ ಪೀಠಾಧಿಪತಿಗಳಾಗಿದ್ದ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿಗಳ 71 ನೇ ಆರಾಧನಾ ಮಹೋತ್ಸವ ಮಹಾಲಯ ಅಮಾವಾಸ್ಯೆ ದಿನವಾದ ಭಾನುವಾರ ನಡೆಯಿತು.

ಶ್ರೀ ಮಠದ ನರಸಿಂಹವನದಲ್ಲಿನ ಅದಿಷ್ಠಾನ ಮಂದಿರದಲ್ಲಿ ಜಗದ್ಗುರು ಶ್ರೀ ಭಾರತೀ ತೀರ್ಥರು ವಿಶೇಷ ಪೂಜೆ ನೆರವೇರಿಸಿದರು. ವಿಶೇಷ ಪೂಜೆ ಸಹಿತ ಮಹಾಮಂಗಳಾರತಿ, ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಹಿನ್ನೆಲೆ-ಇವರನ್ನು 1912 ರಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮಿ, ಶ್ರೀ ಚಂದ್ರಶೇಖರ ಭಾರತೀ ಎಂಬ ಯೋಗಪಟ್ಟ ನೀಡಿ (ಮೂಲ ಹೆಸರು ನರಸಿಂಹಶಾಸ್ತ್ರಿ) ತನ್ನ ಉತ್ತರಾಧಿಕಾರಿಯಾಗಿ ನೇಮಿಸಿದ್ದರು.

ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳು 34 ನೇ ಪೀಠಾಧಿಪತಿಯಾಗಿ ನೇಮಕಗೊಂಡ ನಂತರ 1916 ರಲ್ಲಿ ಶಾರದಾ ಕುಂಬಾಭಿಷೇಕ ನೆರವೇರಿಸಿದರು. 1924 ರಲ್ಲಿ ಮೊದಲ ವಿಜಯಯಾತ್ರೆ ಕೈಗೊಂಡರು.1927 ರಲ್ಲಿ ಕಾಲಟಿಯಲ್ಲಿ ವೇದಾಂತ ಪಾಠ ಶಾಲೆ ಪ್ರತಿಷ್ಠಾಪಿಸಿದರು. ನಂತರ ಅವಧೂತ ಸ್ಥಿತಿಗೆ ಮರಳಿದ ಶ್ರೀಗಳು ಆದ್ಯಾತ್ಮ, ಧ್ಯಾನ, ಚಿಂತನೆಯಲ್ಲಿ ಹೆಚ್ಚು ಸಮಯ ಕಳೆಯಲು ಪೀಠದ ಉತ್ತರಾಧಿಕಾರಿಯನ್ನು ಹೆಸರಿಸಿ 1931ರಲ್ಲಿ ಅಭಿನವ ವಿದ್ಯಾತೀರ್ಥ (ಮೂಲಹೆಸರು ಶ್ರೀನಿವಾಸ ಶಾಸ್ತ್ರಿ) ರಿಗೆ ಯೋಗಪಟ್ಟ ನೀಡಿ ತನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸಿದರು.

ಮಠದ ಎಲ್ಲಾ ವ್ಯವಹಾರಗಳಿಂದ ದೂರ ಉಳಿದ ಶ್ರೀಗಳು 1938 ರಲ್ಲಿ ಬೆಂಗಳೂರು, ಮೈಸೂರು, ಕಾಲಟಿಗೆ ಯಾತ್ರೆ ಕೈ ಗೊಂಡು ಶೃಂಗೇರಿಗೆ ಮರಳಿ ವೇದಾಂತ ಕುರಿತು ತರಗತಿಗಳನ್ನು ಪುನರ್ ಆರಂಭಿಸಿದ್ದರು.1945ರ ನಂತರ ಶ್ರೀಮಠದ ಎಲ್ಲಾ ಚಟುವಟಿಕೆಗಳಿಂದ ವಿಮುಖರಾಗಿ ಆತ್ಮಾರಾಮರಾಗಿ ಆಧ್ಯಾತ್ಮ ಸಾಧನೆಯಲ್ಲಿ ತೊಡಗಿಸಿಕೊಂಡರು. 1954 ಸೆ. 26 ರಂದು ಮಹಾಲಯ ಅಮವಾಸ್ಯೆ ದಿನದಂದು ತುಂಗಾ ನದಿ ದಡದಲ್ಲಿ ಸ್ನಾನ ವಿಧಿ ಮುಗಿಸಿ ಪದ್ಮಾಸನದಲ್ಲಿ ಕುಳಿತು ಯೋಗ ನಿರತರಾಗಿ ವಿದೇಹ ಮುಕ್ತಿ ಪಡೆದಿದ್ದರು. ಇವರ ಸ್ಮರಣಾರ್ಥ ಚಂದ್ರಶೇಖರ ಭಾರತೀ ಸ್ವಾಮಿಗಳ 71 ನೇ ಆರಾಧನಾ ಮಹೋತ್ಸವ ನೇರವೇರಿತು.

ನರಸಿಂಹವನದ ಅಧಿಷ್ಠಾನ ಮಂದಿರದಲ್ಲಿರುವ ಇವರ ಸಮಾಧಿ ಪಕ್ಕದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಲಾಗಿದ್ದು, ಶಿವಲಿಂಗಕ್ಕೆ ಇಂದಿಗೂ ಪೂಜಿಸಲಾಗುತ್ತಿದೆ. ಇದನ್ನು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ಲಿಂಗ ಎಂದು ಕರೆಯಲಾಗುತ್ತದೆ.

--

21 ಶ್ರೀ ಚಿತ್ರ 3-

ಶೃಂಗೇರಿ ಶ್ರೀಮಠದ ನರಸಿಂಹವನದ ಅಧಿಷ್ಠಾನ ಮಂದಿರದಲ್ಲಿ 34 ನೇ ಪೀಠಾಧಿಪತಿ ಚಂದ್ರಶೇಖರ ಭಾರತೀ ಸ್ವಾಮಿಗಳ 71 ಆರಾಧನಾ ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ ನೆರವೇರಿಸಿದರು.

21 ಶ್ರೀ ಚಿತ್ರ 2-

ಶೃಂಗೇರಿ ಪೀಠದ 34 ನೇ ಪೀಠಾಧಿಪತಿ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳು.