ಕನ್ನಡ ನಾಟಕ ಲೋಕಕ್ಕೆ ಶ್ರೀರಂಗರದು ಭಿನ್ನ ಕೊಡುಗೆ: ಡಾ. ಗಣೇಶ ಅಮೀನಗಡ

| Published : Apr 03 2024, 01:32 AM IST

ಸಾರಾಂಶ

ಶ್ರೀರಂಗರು ಮೇಲ್ವರ್ಗದಲ್ಲಿ ಹುಟ್ಟಿದರೂ ಅವರ ನಾಟಕಗಳ ಸಾರಾಂಶಗಳೆಲ್ಲವೂ ಸಾಮಾಜಿಕ ಸಮಸ್ಯೆಗಳ ಕುರಿತು ಸಂದೇಶವನ್ನು ನೀಡಿವೆ ಎಂದು ನಾಟಕಕಾರ ಡಾ. ಗಣೇಶ ಅಮೀನಗಡ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಸ್ವಾತಂತ್ರ್ಯ ನಂತರದ ಕಾಲಘಟ್ಟದ ಮೌಲ್ಯಗಳ ಸ್ಥಿತ್ಯಂತರ, ಪಲ್ಲಟ ಹಾಗೂ ವಿದ್ಯಮಾನಗಳನ್ನು ತಮ್ಮ ನಾಟಕಗಳ ಮೂಲಕ ಶ್ರೀರಂಗರು ಪ್ರಸ್ತುತಪಡಿಸಿದರು ಎಂದು ಪತ್ರಕರ್ತ ಮತ್ತು ನಾಟಕಕಾರ ಡಾ. ಗಣೇಶ ಅಮೀನಗಡ ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಮಂಗಳವಾರ ನಡೆದ ಶ್ರೀರಂಗ ದತ್ತಿ ನಿಧಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ “ಶ್ರೀರಂಗರ ನಾಟಕಗಳ ವೈಶಿಷ್ಟ್ಯ” ಎಂಬ ವಿಷಯದ ಕುರಿತು ಮಾತನಾಡಿದರು.ಶ್ರೀರಂಗರು ತಮ್ಮ ನಾಟಕಗಳಲ್ಲಿ ವಸ್ತು, ತಂತ್ರ ಮತ್ತು ನಾಟಕಗಳ ಪ್ರಯೋಗದ ದೃಷ್ಟಿಯಿಂದ ಭಿನ್ನವಾದ ನಾಟಕಗಳನ್ನು ಕನ್ನಡ ನಾಟಕ ಲೋಕಕ್ಕೆ ನೀಡಿದ್ದಾರೆ ಎಂದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶ್ರೀರಂಗರು ಮೇಲ್ವರ್ಗದಲ್ಲಿ ಹುಟ್ಟಿದರೂ ಅವರ ನಾಟಕಗಳ ಸಾರಾಂಶಗಳೆಲ್ಲವೂ ಸಾಮಾಜಿಕ ಸಮಸ್ಯೆಗಳ ಕುರಿತು ಸಂದೇಶವನ್ನು ನೀಡಿವೆ. ಗಣೇಶ ಅಮೀನಗಡ ಅವರ ‘ಕೌದಿ’ ನಾಟಕ ಕೌದಿ ಹೊಲೆಯುವವರ ಬದುಕು ಬವಣೆಗಳನ್ನು ತಿಳಿಸುತ್ತದೆ ಎಂದರು.

ಶ್ರೀರಂಗ ದತ್ತಿ ನಿಧಿ ಸಂಚಾಲಕ ಹಾಗೂ ಕನ್ನಡ ಭಾಷಾಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಅಶೋಕ ಕುಮಾರ ರಂಜೇರೆ ಪ್ರಾಸ್ತಾವಿಕ ಮಾತನಾಡಿ, ನಾಟಕ ಕ್ಷೇತ್ರಕ್ಕೆ ಟಿ.ಪಿ. ಕೈಲಾಸಂ ಅವರನ್ನು ಬಿಟ್ಟರೆ ಕನ್ನಡ ರಂಗಭೂಮಿಗೆ ರಚನೆ ಮತ್ತು ನಿರ್ದೇಶನದ ದೃಷ್ಟಿಯಿಂದ ಹೊಸ ತಿರುವನ್ನು ನೀಡಿದವರು ಶ್ರೀರಂಗರು ಎಂದರು.

ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥ ಡಾ. ಪಿ. ಮಹಾದೇವಯ್ಯ, ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಡಿ. ಪಾಂಡುರಂಗ ಬಾಬು, ಲಲಿತ ಕಲಾ ನಿಕಾಯದ ಡೀನ್‌ ಡಾ. ಶಿವಾನಂದ ಎಸ್. ವಿರಕ್ತಮಠ, ವಿಜ್ಞಾನಗಳ ನಿಕಾಯದ ಡೀನ್‌ ಡಾ. ಶೈಲಜಾ ಹಿರೇಮಠ, ಕನ್ನಡ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಶೋಧನಾರ್ಥಿ ದಿನೇಶ್ ಎಸ್., ಅಂಬಿಕಾ, ವಿನೀತಾ ಜೆ.ಎಂ., ಶಿಲ್ಪಾ ಎಚ್.ವಿ., ಶ್ರೀದೇವಿ ನಿರ್ವಹಿಸಿದರು.