ಹತ್ತು ತಿಂಗಳಲ್ಲಿ ರಾಜ್ಯ ಸರ್ಕಾರದ ಸಾಧನೆ ಶೂನ್ಯ: ಡಿ.ಎಸ್.ಅರುಣ್ ವಾಗ್ದಾಳಿ

| Published : Apr 03 2024, 01:32 AM IST

ಹತ್ತು ತಿಂಗಳಲ್ಲಿ ರಾಜ್ಯ ಸರ್ಕಾರದ ಸಾಧನೆ ಶೂನ್ಯ: ಡಿ.ಎಸ್.ಅರುಣ್ ವಾಗ್ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಸೊರಬ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಸೊರಬ

ಕಾಂಗ್ರೆಸ್ ಸರ್ಕಾರ ಕಳೆದ ೧೦ ತಿಂಗಳ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಶೂನ್ಯ ಸಂಪಾದನೆಯಲ್ಲಿದೆ. ರೈತರು, ಹಿಂದುಳಿದವರು, ಮಹಿಳೆಯರು ಮತ್ತು ದಲಿತ ವಿರೋಧಿ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರದಿಂದ ಜನತೆ ಬೇಸತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ, ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್.ಅರುಣ್ ಹೇಳಿದರು.ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಕರೆದಿದ್ದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕನಿಷ್ಠ ೧ ಕಿ.ಮೀ. ರಸ್ತೆಯನ್ನು ನಿರ್ಮಿಸಲು ಯೋಗ್ಯತೆ ಕಳೆದುಕೊಂಡಿದೆ. ಶಾಸಕರ ಅಭಿವೃದ್ಧಿ ಅನುದಾನದ ಹಣವನ್ನೂ ಸಹ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ರೈತರಿಗಾಗಿ ಜಾರಿಗೊಳಿಸಿದ ೪ ಸಾವಿರ ರು. ಕಿಸಾನ್ ಸಮ್ಮಾನ್ ಯೋಜನೆಯನ್ನು ನಿಲ್ಲಿಸಿ ಮಹಿಳೆಯರಿಗೆ ೨ ಸಾವಿರ ರು. ನೀಡುವ ಮೂಲಕ ಕಣ್ಣು ಒರೆಸುವ ತಂತ್ರ ರೂಪಿಸಿ ರೈತರನ್ನು ವಂಚಿಸಿದೆ. ಇದೂ ಅಲ್ಲದೇ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಕಡಿತಗೊಳಿಸಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರದ ಧೋರಣೆಯಿಂದ ರಾಜ್ಯದಲ್ಲಿ ೮೭೫ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿದರು. 4ಕ್ಕೆ ಸಮಾವೇಶ: ತಾಲೂಕಿನಲ್ಲಿ ೨೩೯ ಭೂತ್‌ಗಳಿದ್ದು, ಬಿಜೆಪಿ ಗ್ರಾಮಾಂತರ ಮಟ್ಟದಿಂದ ಸಂಘಟನಾತ್ಮಕವಾಗಿ ಮತದಾರರನ್ನು ಸೆಳೆಯುತ್ತಿದೆ. ಕೇಂದ್ರ ಸರ್ಕಾರದ ೧೦ ವರ್ಷಗಳ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಅಭಿವೃದ್ದಿಯ ಹರಿಕಾರ ಬಿ.ವೈ. ರಾಘವೇಂದ್ರ ೪ನೇ ಬಾರಿಗೆ ಸಂಸದ ರಾಗಿ ಜಯಗಳಿಸಬೇಕು. ಈ ನಿಟ್ಟಿನಲ್ಲಿ ಏ.೪ರಂದು ಪಟ್ಟಣದಲ್ಲಿ ಭೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಜಿಲ್ಲೆಯ ಮುಖಂಡರು ಭಾಗವಹಿಸಲಿದ್ದು, ಮಾಜಿ ಶಾಸಕ ಕುಮಾರ ಬಂಗಾರಪ್ಪ ಕೂಡ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಕುಟುಂಬ ರಾಜಕಾರಣ ಇಲ್ಲ: ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲ. ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ೧೧ ಕ್ಷೇತ್ರಗಳಲ್ಲಿ ಸಚಿವರು, ಶಾಸಕರ ಕುಟುಂಗಳಿಗೆ ಟಿಕೇಟ್ ನೀಡಿದೆ. ಹಾಗಾಗಿ ಕುಟುಂಬ ರಾಜಕಾರಣ ಎನ್ನುವುದು ಕಾಂಗ್ರೆಸ್‌ನಲ್ಲಿ ಮಾತ್ರ ಇದೆ. ಕೆ.ಎಸ್. ಈಶ್ವರಪ್ಪ ಹಿರಿಯರು. ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವೊಲಿಸುವ ಪ್ರಯತ್ನ ಕೇಂದ್ರ ಮತ್ತು ರಾಜ್ಯ ಮುಖಂಡರಿಂದ ನಡೆಯುತ್ತಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ಪ್ರಕಾಶ ತಲಕಾಲುಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಗಾಳಿಪುರ, ತಾಲೂಕು ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಎಂ.ಡಿ. ಉಮೇಶ, ಮುಖಂಡರಾದ ಎ.ಎಲ್. ಅರವಿಂದ, ಅಮಿತ್‌ಗೌಡ, ಮಲ್ಲಿಕಾರ್ಜುನ ಗುತ್ತೇರ್, ಮಧುರಾಯ ಜಿ. ಶೇಟ್, ನಿರಂಜನ ದೊಡ್ಮನೆ, ಡಿ. ಶಿವಯೋಗಿ, ಎಂ.ಕೆ. ಯೋಗೇಶ್ ಮೊದಲಾದವರು ಹಾಜರಿದ್ದರು.