ಇಂದಿನಿಂದ ಶ್ರೀವರದರಾಯಸ್ವಾಮಿ ಜಾತ್ರಾ ಮಹೋತ್ಸವ

| Published : Mar 26 2024, 01:16 AM IST

ಸಾರಾಂಶ

ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಹುಳ್ಳೇನಹಳ್ಳಿಯ ಶ್ರೀಮಾಯಮ್ಮದೇವಿ, ಶ್ರೀದೈತಮ್ಮದೇವಿ ದೇವಸ್ಥಾನಗಳಲ್ಲಿ ಮಂಗಳವಾರ ಬೆಳಗ್ಗೆಯಿಂದ ರಾತ್ರಿವರೆಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳ ಜೊತೆಗೆ ಅರಿವಾಣ ಪೂಜೆ ನಡೆದ ನಂತರ ಶ್ರೀ ಮಾಯಮ್ಮದೇವಿಯ ಮಠ ಮನೆಗೆ ಅರಿವಾಣ ಪೂಜೆಯನ್ನು ಕೊಂಡೊಯ್ಯಲಾಗುವುದು. ಬಳಿಕ ಭಕ್ತಾದಿಗಳಿಂದ ಅರಿವಾಣ ತಟ್ಟೆಗೆ ಬಾಳೆಹಣ್ಣು ತುಂಬಿಸುವ ಕಾರ್ಯ ನಡೆಯಲಿದೆ.

ಕನ್ನಡ ಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಹುಳ್ಳೇನಹಳ್ಳಿ ಗ್ರಾಮದ ಶ್ರೀಮಾಯಮ್ಮದೇವಿ, ಶ್ರೀದೈತಮ್ಮದೇವಿ ಹಾಗೂ ದಂಡಿಗನಹಳ್ಳಿ ಗ್ರಾಮದ ಶ್ರೀ ವರದರಾಯಸ್ವಾಮಿ ಜಾತ್ರಾ ಮಹೋತ್ಸವವು ಮಾ.೨೬ ಮತ್ತು ೨೭ರಂದು ಬಹಳ ವಿಜೃಂಭಣೆಯಿಂದ ನಡೆಯಲಿದೆ.

ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಹುಳ್ಳೇನಹಳ್ಳಿಯ ಶ್ರೀಮಾಯಮ್ಮದೇವಿ, ಶ್ರೀದೈತಮ್ಮದೇವಿ ದೇವಸ್ಥಾನಗಳಲ್ಲಿ ಮಂಗಳವಾರ ಬೆಳಗ್ಗೆಯಿಂದ ರಾತ್ರಿವರೆಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳ ಜೊತೆಗೆ ಅರಿವಾಣ ಪೂಜೆ ನಡೆದ ನಂತರ ಶ್ರೀ ಮಾಯಮ್ಮದೇವಿಯ ಮಠ ಮನೆಗೆ ಅರಿವಾಣ ಪೂಜೆಯನ್ನು ಕೊಂಡೊಯ್ಯಲಾಗುವುದು. ಬಳಿಕ ಭಕ್ತಾದಿಗಳಿಂದ ಅರಿವಾಣ ತಟ್ಟೆಗೆ ಬಾಳೆಹಣ್ಣು ತುಂಬಿಸುವ ಕಾರ್ಯ ನಡೆಯಲಿದೆ.

ನಂತರ ೧೨ವರ್ಷದೊಳಗಿನ ಹೆಣ್ಣು ಮಕ್ಕಳನ್ನು ಮಠಮನೆಯಲ್ಲಿ ಸಾಲಾಗಿ ನಿಲ್ಲಿಸಿ ಅರಿವಾಣ ತಟ್ಟೆಯನ್ನು ಎಲ್ಲ ಮಕ್ಕಳ ತಲೆಯ ಮೇಲಿರಿಸಿ ಬುಧವಾರ ಮುಂಜಾನೆ ೪ ಗಂಟೆವರೆಗೂ ದೇವಿಯನ್ನು ಪೂಜಿಸಲಾಗುವುದು. ಯಾವ ಹೆಣ್ಣು ಮಗುವಿನ ಮೇಲೆ ದೇವಿಯ ಆವಾಹನೆಯಾಗುತ್ತದೆಯೋ ಆ ಹೆಣ್ಣು ಮಗು ಅರಿವಾಣ ತಟ್ಟೆಯನ್ನು ಹಿಡಿದುಕೊಳ್ಳುತ್ತದೆ. ಬಳಿಕ ಅರಿವಾಣ ತಟ್ಟೆ ಹೊತ್ತ ಮಗುವನ್ನು ಹುಳ್ಳೇನಹಳ್ಳಿ ಕೆರೆ ಏರಿಯ ಮೇಲಿರುವ ಶ್ರೀ ತೋಪಿನಮ್ಮದೇವಿ ದೇವಸ್ಥಾನದವರೆಗೂ ಕರೆದೊಯ್ದು ಪೂಜಾ ಕಾರ್ಯ ನಡೆಸಿದ ನಂತರ ಶ್ರೀ ಮಾಯಮ್ಮದೇವಿಯ ಮೂಲ ಸ್ಥಾನಕ್ಕೆ ಕರೆತರುವುದೇ ಈ ಜಾತ್ರೆಯ ವಿಶೇಷತೆ.

ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದಂಡಿಗನಹಳ್ಳಿಯ ಶ್ರೀವರದರಾಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ಬೆಳಗ್ಗೆಯಿಂದ ಸಂಜೆವರೆಗೂ ಪಂಚಾಮೃತ ಮಹಾಭಿಷೇಕ, ಹೂವಿನ ಅಲಂಕಾರ, ಮಹಾ ಮಂಗಳಾರತಿ ನೆರವೇರಲಿದೆ. ನಂತರ ಗ್ರಾಮದ ಸುಮಂಗಲಿಯರು ಮಂಗಳವಾದ್ಯ ಸಹಿತವಾಗಿ ತೆರಳಿ ಕಲ್ಯಾಣಿಯಿಂದ ಮಣ್ಣಿನ ಕಳಶದಲ್ಲಿ ಮೀಸಲು ನೀರನ್ನು ತಂದು ಆ ನೀರಿನಿಂದಲೇ ಅವರೇಕಾಳು ಬೇಯಿಸಿ, ತಂಬಿಟ್ಟು ಸಿದ್ಧಪಡಿಸಿ ಶ್ರೀ ವರದರಾಯಸ್ವಾಮಿಗೆ ನೈವೇದ್ಯ ಸಲ್ಲಿಸುವರು.

ಪೂಜಾ ಕೈಂಕರ್ಯಗಳ ನಂತರ ಶ್ರೀವರದರಾಯಸ್ವಾಮಿ ಉತ್ಸವ ಮೂರ್ತಿಯನ್ನು ಸರ್ವಾಲಂಕೃತ ರಥದಲ್ಲಿರಿಸಿ ಮಂಗಳವಾರ ತಡರಾತ್ರಿ ೨ ಗಂಟೆ ವೇಳೆಗೆ ಹುಳ್ಳೇನಹಳ್ಳಿ ಗ್ರಾಮದ ಶ್ರೀಮಾಯಮ್ಮದೇವಿ, ಶ್ರೀದೈತಮ್ಮದೇವಿಯ ಸನ್ನಿಧಿಗೆ ಕರೆದೊಯ್ಯಲಾಗುವುದು. ಇದೇ ಸಮಯಕ್ಕೆ ಬಿಂಡೇನಹಳ್ಳಿ ಗ್ರಾಮದಿಂದ ಸರ್ವಾಲಂಕೃತ ಶ್ರೀಕೃಷ್ಣದೇವರ ಉತ್ಸವ ಮೂರ್ತಿಯ ಪಾಲಕಿ ಉತ್ಸವವೂ ಹುಳ್ಳೇನಹಳ್ಳಿಗೆ ಬಂದು ಸೇರಲಿದೆ.

ಅರಿವಾಣ ತಟ್ಟೆಯನ್ನು ನೋಡುವ ಸಲುವಾಗಿಯೇ ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ೨೫ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಮಂಗಳವಾರ ರಾತ್ರಿಯಿಂದಲೇ ಹುಳ್ಳೇನಹಳ್ಳಿಯ ಶ್ರೀ ಮಾಯಮ್ಮದೇವಿ ದೇವಸ್ಥಾನ ಮತ್ತು ಮಠಮನೆ ಮುಂಭಾಗ ಜಮಾಯಿಸುವರು. ಗ್ರಾಮದ ಶ್ರೀ ಕೋಣೆ ಚಿಕ್ಕಮ್ಮ ದೇವಸ್ಥಾನದಲ್ಲಿಯೂ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ.