ವಿಜೃಂಭಣೆಯಿಂದ ಜರುಗಿದ ಶ್ರೀಗಂಗಾಧರೇಶ್ವರಸ್ವಾಮಿ ರಥೋತ್ಸವ

| Published : Mar 26 2024, 01:15 AM IST / Updated: Mar 26 2024, 01:16 AM IST

ಸಾರಾಂಶ

ರಥೋತ್ಸವದ ಅಂಗವಾಗಿ ಭಾನುವಾರ ಇಡೀ ರಾತ್ರಿ ಶ್ರೀಕ್ಷೇತ್ರದಲ್ಲಿ ವಿವಿಧ ಬಗೆಯ ಪೂಜಾ ಕೈಂಕರ್ಯ, ಪೌರಾಣಿಕ ನಾಟಕ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶ್ರೀಕ್ಷೇತ್ರದ ಅಧಿದೇವತೆ ಗಂಗಾಧರೇಶ್ವರ ಸ್ವಾಮಿಯನ್ನು ಅಲಂಕೃತಗೊಂಡಿದ್ದ ರಥದಲ್ಲಿ ಕೂರಿಸಲಾಗಿತ್ತು. ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ನೆರೆದಿದ್ದ ಭಕ್ತರು ರಥವನ್ನು ಎಳೆಯುವ ಜೊತೆಗೆ ಹಣ್ಣು, ಜವನ ಎಸೆದು ಭಕ್ತಿ ಭಾವ ಮೆರೆದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹೋಳಿ ಹುಣ್ಣಿಮೆಯ ದಿನವಾದ ಸೋಮವಾರ ಮುಂಜಾನೆ ೪.೩೦ರ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀಗಂಗಾಧರೇಶ್ವರಸ್ವಾಮಿ ಮಹಾರಥೋತ್ಸವ ಹಾಗೂ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವವು ಸಾಗರೋಪಾದಿಯಲ್ಲಿ ಹರಿದುಬಂದಿದ್ದ ಲಕ್ಷಾಂತರ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ನೆರವೇರಿತು.

ಸೋಮವಾರ ಸೂರ್ಯೋದಯಕ್ಕೂ ಮುನ್ನ ನಸುಕಿನಲ್ಲಿ ಶ್ರೀಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಕ್ಷೇತ್ರದ ರಥ ಬೀದಿಯಲ್ಲಿ ಬಗೆ ಬಗೆಯ ಹೂವು ಮತ್ತು ವಿದ್ಯುತ್‌ ದೀಪಗಳಿಂದ ಸರ್ವಾಲಂಕೃತವಾಗಿದ್ದ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಶ್ರೀಗಂಗಾಧರೇಶ್ವರಸ್ವಾಮಿ ಮಹಾ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ರಥೋತ್ಸವದ ಅಂಗವಾಗಿ ಭಾನುವಾರ ಇಡೀ ರಾತ್ರಿ ಶ್ರೀಕ್ಷೇತ್ರದಲ್ಲಿ ವಿವಿಧ ಬಗೆಯ ಪೂಜಾ ಕೈಂಕರ್ಯ, ಪೌರಾಣಿಕ ನಾಟಕ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶ್ರೀಕ್ಷೇತ್ರದ ಅಧಿದೇವತೆ ಗಂಗಾಧರೇಶ್ವರ ಸ್ವಾಮಿಯನ್ನು ಅಲಂಕೃತಗೊಂಡಿದ್ದ ರಥದಲ್ಲಿ ಕೂರಿಸಲಾಗಿತ್ತು. ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ನೆರೆದಿದ್ದ ಭಕ್ತರು ರಥವನ್ನು ಎಳೆಯುವ ಜೊತೆಗೆ ಹಣ್ಣು, ಜವನ ಎಸೆದು ಭಕ್ತಿ ಭಾವ ಮೆರೆದರು.

ರಥೋತ್ಸವಕ್ಕೆ ಚಾಲನೆ ನೀಡಿದ ಬಳಿಕ ನಿರ್ಮಲಾನಂದನಾಥ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವವೂ ಕೂಡ ಪ್ರಾರಂಭವಾಯಿತು. ಒಂದೆಡೆ ಭಕ್ತರು ರಥವನ್ನು ಎಳೆದು ಧನ್ಯರಾಗುತ್ತಿದ್ದರೆ ಇನ್ನೊಂದೆಡೆ ಸರ್ವಾಲಂಕಾರ ಭೂಷಿತರಾಗಿ ಚಿನ್ನದ ಕಿರೀಟ ಧರಿಸಿ ಪಲ್ಲಕ್ಕಿಯಲ್ಲಿ ಕುಳಿತು ಭಕ್ತಾದಿಗಳಿಗೆ ದರ್ಶನ ನೀಡುತ್ತಿದ್ದ ಶ್ರೀಗಳನ್ನು ನೋಡಿ ಕಣ್ತುಂಬಿಕೊಂಡರು. 100 ಕ್ಕೂ ಹೆಚ್ಚು ಗ್ರಾಮದೇವತೆಗಳ ಮೆರವಣಿಗೆವೈಭವಯುತವಾಗಿ ನಡೆದ ಗಿರಿಪ್ರದಕ್ಷಿಣೆಕನ್ನಡಪ್ರಭ ವಾರ್ತೆ ನಾಗಮಂಗಲತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ಸಂಜೆ ಶ್ರೀ ಕ್ಷೇತ್ರದ ಸುತ್ತಮುತ್ತಲ ಗ್ರಾಮಗಳ 100 ಕ್ಕೂ ಹೆಚ್ಚು ಗ್ರಾಮದೇವತೆಗಳ ಮೆರವಣಿಗೆ ಮುಖಾಂತರ ಗಿರಿಪ್ರದಕ್ಷಿಣೆ ಬಹಳ ವೈಭವಯುತವಾಗಿ ನಡೆಯಿತು.ಶ್ರೀಕ್ಷೇತ್ರದಲ್ಲಿ ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಿದ ನಂತರ ಸಂಜೆ ಗಿರಿ ಪ್ರದರ್ಶನದಲ್ಲಿ ಪಾಲ್ಗೊಂಡ ನೂರಾರು ಗ್ರಾಮದೇವತೆಗಳ ಉತ್ಸವ ಮೂರ್ತಿಗಳಿಗೆ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಪೂಜೆ ಸಲ್ಲಿಸುವ ಮೂಲಕ ಗಿರಿಪ್ರದಕ್ಷಿಣೆಗೆ ಚಾಲನೆ ನೀಡಿದರು.100ಕ್ಕೂ ಹೆಚ್ಚು ಗ್ರಾಮದೇವತೆಗಳ ಈ ಉತ್ಸವ ಕ್ಷೇತ್ರಪಾಲಕ ಶ್ರೀ ಕಾಭೈರವೇಶ್ವರಸ್ವಾಮಿ ದೇಗುಲದಿಂದ ಹೊರಟು ಗಿರಿಯ ಸುತ್ತ ನಿರ್ಮಾಣವಾಗಿರುವ ರಸ್ತೆಯಲ್ಲಿ ಕಣಿವೆ ಆಂಜನೇಯಸ್ವಾಮಿಯ, ಕೂಗುಬಂಡೆ ಮಾರ್ಗವಾಗಿ ನಾಗರಕಲ್ಲು(ನಾಗದೇವತೆ) ಬಳಸಿಕೊಂಡು ರಥಬೀದಿಯ ಮೂಲಕ ಸನ್ನಿಧಿಯನ್ನು ತಲುಪಿತು.ಈ ಗಿರಿಪ್ರದಕ್ಷಿಣೆ ಉತ್ಸವ ಮೆರವಣಿಗೆಯಲ್ಲಿ ಸಹಸ್ರಾರು ಭಕ್ತರು ಹಾಗೂ ಕ್ಷೇತ್ರದ ಸುತ್ತಮುತ್ತಲ ಗ್ರಾಮಗಳ ಜನರು ಪಾಲ್ಗೊಂಡು ಭಕ್ತಿಭಾವ ಸಮರ್ಪಿಸಿದರು. ನಂತರ ಶ್ರೀ ಸೋಮೇಶ್ವರಸ್ವಾಮಿ ಉತ್ಸವ ನಡೆಯಿತು.ಶ್ರೀಮಠದ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಸೇರಿದಂತೆ ವಿವಿಧ ಶಾಖಾಮಠಗಳ ಶ್ರೀಗಳು ಹಾಗೂ ಸಾವಿರಾರು ಸಂಖ್ಯೆಯ ಭಕ್ತರು ಇದ್ದರು.ಜಾತ್ರಾ ಮಹೋತ್ಸವಕ್ಕೆ ಇಂದು ತೆರೆ:ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ಮಾ.26ರ ಮಂಗಳವಾರ ತೆರೆ ಬೀಳಲಿದೆ.ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಅವರ ಸಾನಿಧ್ಯದಲ್ಲಿ ಶ್ರೀಕ್ಷೇತ್ರದ ಬಿಂದು ಸರೋವರದಲ್ಲಿ ಗಂಗಾ ಪೂಜೆ, ಅವಭೃತ ಸ್ನಾನ ಇತ್ಯಾದಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ನಂತರ ಧರ್ಮ ಧ್ವಜಾವರೋಹಣ ಹಾಗೂ ಸಭಾ ಕಾರ್ಯಕ್ರಮದ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ