ಕನ್ನಡಪ್ರಭ ವಾರ್ತೆ ಹಾಸನ

ಸರ್ವಜ್ಞರ ತ್ರಿಪದಿಗಳು ಮಾನವ ಕುಲಕ್ಕೆ ಹಾಗೂ ಸಮಾಜ ಸುಧಾರಣೆಗೆ ದಾರಿದೀಪವಾಗಿದ್ದು, ಸಂತ ಕವಿಯನ್ನು ನೆನಪು ಮಾಡಿಕೊಳ್ಳುವುದೇ ಹೆಮ್ಮೆಯ ವಿಷಯವಾಗಿದ್ದು, ಇಂತಹ ದಾರ್ಶನಿಕ ವ್ಯಕ್ತಿತ್ವವನು ಸ್ಮರಿಸುತ್ತಿರುವ ನಾವೇ ಧನ್ಯರು ಎಂದು ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ ತಿಳಿಸಿದರು.

ನಗರದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರದಂದು ಸಂತ ಕವಿ ಸರ್ವಜ್ಞರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸರ್ವಜ್ಞರನ್ನು ಸ್ಮರಿಸುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಇಂತಹ ಮಹಾನ್ ದಾರ್ಶನಿಕ, ಸಮಾಜ ಸುಧಾರಕನನ್ನು ನೆನಪಿಸಿಕೊಳ್ಳುವ ಅವಕಾಶ ದೊರೆತಿರುವುದು ನಮ್ಮ ಭಾಗ್ಯ. ಸರ್ವಜ್ಞರು ತಮ್ಮ ತ್ರಿಪದಿಗಳ ಮೂಲಕ ಸಮಾಜದ ಒಳಹೊರಗಿನ ಅಸಮಾನತೆ, ಕಪಟಾಚಾರ, ಅಜ್ಞಾನ ಮತ್ತು ಅನ್ಯಾಯಗಳನ್ನು ಧೈರ್ಯವಾಗಿ ಪ್ರಶ್ನಿಸಿದ್ದಾರೆ. ಸುಮಾರು ಮೂರು ಸಾವಿರಕ್ಕೂ ಹೆಚ್ಚು ತ್ರಿಪದಿಗಳಲ್ಲಿ ಅವರು ಜೀವನದ ತತ್ತ್ವ, ನೈತಿಕ ಮೌಲ್ಯಗಳು ಹಾಗೂ ಮಾನವೀಯತೆಯ ಮಹತ್ವವನ್ನು ಸಾರಿದ್ದಾರೆ. ಅವರ ಕಾವ್ಯ ಕೇವಲ ಸಾಹಿತ್ಯ ಸೃಷ್ಟಿಯಲ್ಲ; ಅದು ಸಮಾಜ ಪರಿವರ್ತನೆಯ ಘೋಷಣೆಯಾಗಿದೆ. ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡುವ ಮನೋಭಾವವನ್ನು ಬೆಳೆಸಿದವರು ಸರ್ವಜ್ಞರು ಎಂದು ಹೇಳಿದರು.ಹೆಬ್ಬಾಲೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಖ್ಯಶಿಕ್ಷಕ ಬಿ.ಡಿ. ಶಂಕರೇಗೌಡ ಉಪನ್ಯಾಸ ನೀಡಿ, ಕುಂಬಾರಿಕೆ ಜಗತ್ತಿನ ಮೊದಲ ಕೈಗಾರಿಕೆ ಎಂಬುದನ್ನು ಇತಿಹಾಸದ ಉದಾಹರಣೆಗಳೊಂದಿಗೆ ವಿವರಿಸಿದರು. ಹರಪ್ಪ ಹಾಗೂ ಗ್ರೀಕ್ ನಾಗರಿಕತೆಗಳಲ್ಲಿ ಮಡಿಕೆಯ ಬಳಕೆ ವ್ಯಾಪಕವಾಗಿತ್ತು. ಮನುಕುಲದ ಅಭಿವೃದ್ಧಿಯಲ್ಲಿ ಕುಂಬಾರ ಸಮುದಾಯದ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ಸರ್ವಜ್ಞರು ಕೇವಲ ಒಂದು ಸಮುದಾಯದವರಲ್ಲ; ಅವರು ಸರ್ವಜ್ಞಾನಿ, ಸಮಸ್ತ ಮಾನವಕುಲದ ಆಸ್ತಿಯಾಗಿದ್ದಾರೆ. ಅವರನ್ನು ಒಂದೇ ವರ್ಗಕ್ಕೆ ಸೀಮಿತಗೊಳಿಸುವುದು ನೋವಿನ ಸಂಗತಿ ಎಂದರು. ಸರ್ವಜ್ಞರ ವಚನಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ವ್ಯಕ್ತಿ ಸತ್ಪ್ರಜೆಯಾಗಲು ಸಾಧ್ಯ. ಅವರ ತ್ರಿಪದಿಗಳು ಇಂದಿನ ಯುವಜನತೆಗೆ ಮಾರ್ಗದರ್ಶನ ನೀಡುವ ದೀಪಸ್ತಂಭಗಳಂತಿವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಎಂ. ಬಾಬು, ಕುಂಬಾರ ಸಂಘದ ಜಿಲ್ಲಾ ಅಧ್ಯಕ್ಷ ಪ್ರೊ. ವಿ. ಕೃಷ್ಣಪ್ಪ, ಗೌರವಾಧ್ಯಕ್ಷ ಎಂ.ಬಿ. ರಂಗಶೆಟ್ಟಿ, ಜಿಲ್ಲಾ ಪ್ರಜಾಪತಿ ಸಮಾಜದ ಅಧ್ಯಕ್ಷ ರಘುರಾಮ್ ಪ್ರಜಾಪತಿ, ತಾಲೂಕು ಕುಂಬಾರ ಸಂಘದ ಅಧ್ಯಕ್ಷ ಎಚ್. ಆರ್‌. ನಟರಾಜ್, ಹಾಸನ್ ಶಂಕರ್, ಪ್ರಕಾಶ್ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ತ್ರಿಪದಿಗಳನ್ನು ಪಠಿಸುವ ಮೂಲಕ ಗೌರವ ಅರ್ಪಿಸಲಾಯಿತು.