ಹುಬ್ಬಳ್ಳಿ:
ಮಹದಾಯಿ, ಕಳಸಾ-ಬಂಡೂರಿ ಕಾಮಗಾರಿ ಆರಂಭ, ಬೆಳೆ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರತ್ನ ಭಾರತ ರೈತ ಸಮಾಜದಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸೇರಿದ ನೂರಾರು ರೈತರು ಅಲ್ಲಿಂದ ಮಿನಿ ವಿಧಾನಸೌಧದ ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಕಳೆದ ಐದಾರು ವರ್ಷಗಳಿಂದ ಪ್ರಕೃತಿಯ ವಿಕೋಪದಿಂದಾಗಿ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಭೀಕರ ಬರಗಾಲಕ್ಕೆ ತುತ್ತಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದಿಘ್ನ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ಬೆನ್ನಿಗೆ ನಿಂತು ಅವರ ಬೆಳೆಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಕಳಸಾ-ಬಂಡೂರಿ, ಮಹದಾಯಿ ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಭಿಸಬೇಕು. ಬೆಣ್ಣಿಹಳ್ಳ ಕಾಮಗಾರಿಯನ್ನು ₹ 200 ಕೋಟಿ ವೆಚ್ಚದಲ್ಲಿ ಆರಂಭಿಸಿದ್ದು ಈ ಕಳಪೆ ಗುಣಮಟ್ಟದಿಂದ ನಡೆಯುತ್ತಿದೆ. ಇದರಿಂದಾಗಿ ರೈತರ ಹೊಲದಲ್ಲಿ ನೀರು ನಿಂತು ಹಾನಿಯಾಗುತ್ತಿದ್ದು, ಗುಣಮಟ್ಟದ ಹಾಗೂ ವೈಜ್ಞಾನಿಕವಾಗಿ ಕಾಮಗಾರಿ ಮಾಡುವಂತೆ ಒತ್ತಾಯಿಸಿದ ಪ್ರತಿಭಟನಾಕಾರರು, ಕೂಡಲೇ ಜಮೀನಿನಲ್ಲಿ ನಿಂತ ನೀರು ಹಳ್ಳಕ್ಕೆ ಹರಿದು ಹೋಗಲು ಪೈಪ್ ಅಳವಡಿಸಬೇಕೆಂದು ಒತ್ತಾಯಿಸಿದರು.ಉತ್ತರ ಕರ್ನಾಟಕವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಸೂಕ್ತ ಪರಿಹಾರ ನೀಡಬೇಕು. ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡಬೇಕು.
ಕುಸುಗಲ್ಲ ಗುಡಿದಾರಿಯಲ್ಲಿರುವ ಹಳ್ಳಕ್ಕೆ ತುರ್ತಾಗಿ ಸೇತುವೆ ನಿರ್ಮಾಣ, ಎಪಿಎಂಸಿ ರಸ್ತೆಯಿಂದ ಸುಳ್ಳ ಗ್ರಾಮಕ್ಕೆ ಹೋಗುವ ರೈತರ ಜಮೀನುಗಳಿಗೆ ರಸ್ತೆ ನಿರ್ಮಿಸುವುದು, ಧಾರವಾಡ ಜಿಲ್ಲೆಯ ಪಶು ಆಸ್ಪತ್ರೆಗೆ ವೈದ್ಯರ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಜುಲೈ 30ರೊಳಗೆ ಈಡೇರಿಸದಿದ್ದರೆ 30ರಂದು ವಿಧಾನಸೌಧಕ್ಕೆ ಚಲೋ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಹೇಮನಗೌಡ ಬಸನಗೌಡ್ರ, ಪ್ರಕಾಶ ಸವದತ್ತಿ, ಕಲ್ಲಪ್ಪ ಡೈಲಾತರ, ಮೌನೇಶ, ಹನುಮಂತಪ್ಪ ಕರಲಿಂಗಣ್ಣವರ, ಲಿಂಗಯ್ಯ ಹಿರೇಮಠ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.