ಹಿಂದುಳಿದ ವರ್ಗದ ಹಿತ ಕಾಯದ ರಾಜ್ಯ ಬಜೆಟ್‌: ಅರುಣಕುಮಾರ ಪೂಜಾರ

| Published : Mar 20 2025, 01:16 AM IST

ಹಿಂದುಳಿದ ವರ್ಗದ ಹಿತ ಕಾಯದ ರಾಜ್ಯ ಬಜೆಟ್‌: ಅರುಣಕುಮಾರ ಪೂಜಾರ
Share this Article
  • FB
  • TW
  • Linkdin
  • Email

ಸಾರಾಂಶ

ಯಡಿಯೂರಪ್ಪ ಸಿಎಂ ಆಗಿದ್ದಾಗ ಹಿಂದುಳಿದ ವರ್ಗಗಳ ಜನರಿಗೆ ಸಾಕಷ್ಟು ನೆರವು. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಎಸ್‌ಸಿಪಿ/ಟಿಎಸ್‌ಪಿ ಹಣವನ್ನು ಬೇರೆ ಕಡೆಗೆ ಉಪಯೋಗ ಮಾಡುತ್ತಿದೆ ಎಂದು ಸ್ವತಃ ಸಚಿವ ಎಚ್.ಸಿ. ಮಹದೇವಪ್ಪ ಅವರು ಹೇಳಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ತಿಳಿಸಿದರು.

ರಾಣಿಬೆನ್ನೂರು: ಹಿಂದುಳಿದ ವರ್ಗಗಳ ಮುಖಂಡರಾಗಿರುವ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಹಿಂದುಳಿದ ವರ್ಗದ ಹಿತ ಕಾಯುವಲ್ಲಿ ವಿಫಲರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಆರೋಪಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಜನರು ಕಾಂಗ್ರೆಸ್‌ಗೆ ಆರು ಶಾಸಕರನ್ನು ನೀಡಿದ್ದರೂ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ವಿಶ್ವವಿದ್ಯಾಲಯ ನೀಡಲಾಗಿತ್ತು. ಆದರೆ ಈಗಿನ ಸರ್ಕಾರ ಅದನ್ನು ಮುಚ್ಚಲು ಮುಂದಾಗಿರುವುದು ವಿಷಾದಕರ ಸಂಗತಿ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಹಲವಾರು ನೀರಾವರಿ ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅವುಗಳು ಕುಂಟುತ್ತಾ ಸಾಗಿವೆ. 2023- 24ರಲ್ಲಿ ಬರಗಾಲ ಪರಿಸ್ಥಿತಿ ಉಂಟಾದಾಗ ಹಾಗೂ 2024- 25ರಲ್ಲಿ ಅತಿವೃಷ್ಟಿ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲಾಗಿಲ್ಲ. ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವ ಮೂಲಕ ವೋಟು ಗಿಟ್ಟಿಸಿಕೊಳ್ಳುವ ಕೆಲಸ ಮಾಡುತ್ತಿದೆ.

ನಾನು ಶಾಸಕ ಇದ್ದಾಗಲೇ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್‌ನಲ್ಲಿ ತಾಲೂಕಿನ ತುಮ್ಮಿನಕಟ್ಟಿಯಲ್ಲಿ ಜವಳಿ ಪಾರ್ಕ್ ಘೋಷಣೆ ಆಗಿತ್ತು. ಇದೀಗ ಪುನಃ ಅದನ್ನೇ ಘೋಷಣೆ ಮಾಡಿರುವುದು ಅಚ್ಚರಿಯ ಸಂಗತಿ. ಇದಲ್ಲದೆ ನಾನು ಶಾಸಕನಾಗಿದ್ದ ಅವಧಿಯಲ್ಲಿಯೇ ನಗರೋತ್ಥಾನ ಯೋಜನೆಯಡಿ ತಂದ ₹40 ಕೋಟಿ ಅನುದಾನದಲ್ಲಿ ನಗರದಲ್ಲಿ ಕೆಲಸಗಳಾಗುತ್ತಿವೆ. ತಾಲೂಕಿನಲ್ಲಿರುವ ಪ್ರಮುಖ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಇದನ್ನೊಂದು ಪ್ರವಾಸಿ ತಾಣವಾಗಿ ಮಾಡಬೇಕಾಗಿದೆ. ಆದರೆ ಇದರ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ. ಕನಿಷ್ಠ ಪಕ್ಷ ಮುಂದಿನ ದಿನಗಳಲ್ಲಿಯಾದರೂ ತಾಲೂಕಿನ ಅಭಿವೃದ್ಧಿಗೆ ಸ್ಥಳೀಯ ಶಾಸಕರು ಹಾಗೂ ಮುಖ್ಯಮಂತ್ರಿಗಳು ಒತ್ತು ನೀಡಬೇಕು ಎಂದು ಆಗ್ರಹಿಸಿದರು. ಯಡಿಯೂರಪ್ಪ ಸಿಎಂ ಆಗಿದ್ದಾಗ ಹಿಂದುಳಿದ ವರ್ಗಗಳ ಜನರಿಗೆ ಸಾಕಷ್ಟು ನೆರವು. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಎಸ್‌ಸಿಪಿ/ಟಿಎಸ್‌ಪಿ ಹಣವನ್ನು ಬೇರೆ ಕಡೆಗೆ ಉಪಯೋಗ ಮಾಡುತ್ತಿದೆ ಎಂದು ಸ್ವತಃ ಸಚಿವ ಎಚ್.ಸಿ. ಮಹದೇವಪ್ಪ ಅವರು ಹೇಳಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಎಸ್‌ಸಿಪಿ/ಟಿಎಸ್‌ಪಿ ಹಣವನ್ನು ಬೇರೆಯದಕ್ಕೆ ಬಳಸಬಾರದು. ಅಲ್ಲದೇ ಜಿಲ್ಲೆಯ ಮಾಸೂರಿನ ಯುವತಿ ಸ್ವಾತಿ ಕೊಲೆ ಘಟನೆ ದುರದೃಷ್ಟಕರವಾಗಿದ್ದು, ಸರ್ಕಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಿದ್ಧು ಚಿಕ್ಕಬಿದರಿ, ಬಸವರಾಜ ಚಳಗೇರಿ, ಮಾಳಪ್ಪ ಪೂಜಾರ, ರಾಯಣ್ಣ ಮಾಕನೂರ, ಪ್ರಕಾಶ ಪೂಜಾರ, ಕುಬೇರ ಕೊಂಡಜ್ಜಿ, ನಾಗರಾಜ ಪವಾರ, ನಿಂಗರಾಜ ಕೋಡಿಹಳ್ಳಿ, ಮಲ್ಲಿಕಾರ್ಜುನ ಅಂಗಡಿ, ಅಮೋಘ ಬದಾಮಿ ಸುದ್ದಿಗೋಷ್ಠಿಯಲ್ಲಿದ್ದರು.