ಸಾರಾಂಶ
ಹಾವೇರಿ: ಇತ್ತೀಚೆಗೆ ಹತ್ಯೆಗೀಡಾದ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಬ್ಯಾಡಗಿ ಕುಟುಂಬಕ್ಕೆ ಸರ್ಕಾರದಿಂದ ₹5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.ಬುಧವಾರ ಬೆಂಗಳೂರಿನಲ್ಲಿ ಕ್ಷೇತ್ರದ ಶಾಸಕ ಯು.ಬಿ. ಬಣಕಾರ್ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸ್ವಾತಿ ಹತ್ಯೆ ಪ್ರಕರಣ ವಿವರಿಸಿ ಪರಿಹಾರ ಬಿಡುಗಡೆ ಮಾಡಲು ಮನವಿ ಮಾಡಲಾಯಿತು. ನಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ₹5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸ್ವಾತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದು, ಯಾವುದೇ ಕಾರಣಕ್ಕೂ ಅಪರಾಧಿಗಳು ಶಿಕ್ಷೆಯಿಂದ ಪಾರಾಗುವ ಅವಕಾಶ ನೀಡುವುದಿಲ್ಲ. ಹತ್ಯೆಗೀಡಾದ ಸ್ವಾತಿ ಅವರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧವಾಗಿದ್ದು, ಹತ್ಯೆ ಮಾಡಿದವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು. ಪ್ರಕರಣವನ್ನು ದುರ್ಬಲಗೊಳಿಸದಂತೆ ಎಚ್ಚರಿಕೆ ವಹಿಸಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದಿದ್ದಾರೆ.ರಾಣಿಬೆನ್ನೂರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸ್ವಾತಿ ಬ್ಯಾಡಗಿ ಅವರು ಮಾ. 2ರಂದು ಕೆಲಸಕ್ಕೆ ಹೋದವರು ಮರಳಿ ಮನೆಗೆ ಬಂದಿರಲಿಲ್ಲ. ಹೀಗಾಗಿ ಕುಟುಂಬದವರು ನಾಪತ್ತೆ ದೂರು ದಾಖಲು ಮಾಡಿದ್ದರು. ಮಾ. 6ರಂದು ರಾಣಿಬೆನ್ನೂರು ತಾಲೂಕಿನ ಪತ್ಯಾಪುರ ಬಳಿ ತುಂಗಭದ್ರಾ ನದಿ ದಡದಲ್ಲಿ ಶವ ಪತ್ತೆಯಾಗಿತ್ತು. ಪೊಲೀಸರು ತನಿಖೆ ಕೈಗೊಂಡಾಗ ಈ ಶವ ಸ್ವಾತಿ ಅವರದ್ದು. ಅವರನ್ನು ಹತ್ಯೆ ಮಾಡಿ ನದಿಗೆ ಎಸೆಯಲಾಗಿದೆ ಎನ್ನುವುದು ದೃಢಪಟ್ಟ ಹಿನ್ನೆಲೆ ದೂರು ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ವಾತಿ ಮನೆಗೆ ಜೆಡಿಎಸ್ ಜಿಲ್ಲಾಧ್ಯಕ್ಷರ ಭೇಟಿ
ಹಾವೇರಿ: ಇತ್ತೀಚೆಗೆ ಬರ್ಬರವಾಗಿ ಹತ್ಯೆಗೀಡಾದ ರಟ್ಟಿಹಳ್ಳಿ ತಾಲೂಕಿನ ಮಾಸೂರಿನ ನರ್ಸ್ ಸ್ವಾತಿ ರಮೇಶ ಬ್ಯಾಡಗಿ ಅವರ ಮನೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಭೇಟಿ ನೀಡಿ, ಸ್ವಾತಿ ತಾಯಿ ಅವರಿಗೆ ಸಾಂತ್ವನ ಹೇಳಿದರು.ಸ್ವಾತಿಗೆ ಆದ ಅನ್ಯಾಯ ಇನ್ಯಾರಿಗೂ ಆಗಬಾರದು. ಅದಕ್ಕಾಗಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಜೆಡಿಎಸ್ ಆಗ್ರಹಿಸಿದರು. ಇದೇ ವೇಳೆ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸ್ವಾತಿ ಕುಟುಂಬಕ್ಕೆ ನ್ಯಾಯ ಒದಗಿಸಲು ಜೆಡಿಎಸ್‌ದಿಂದ ಎಲ್ಲ ರೀತಿಯ ಕಾನೂನು ನೆರವು ನೀಡಲಾಗುವುದು. ಪಕ್ಷ ನಿಮ್ಮೊಂದಿಗೆ ಇದೆ ಎಂದು ವಿಶ್ವಾಸ ತುಂಬಿದರು.ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ರಮೇಶ ಮಾಕನೂರ, ಹಿರೇಕೆರೂರು ತಾಲೂಕಿನ ಜೆಡಿಎಸ್ ಮುಖಂಡರಾದ ಪರಮೇಶಪ್ಪ ಮಾಳಗಿ, ಮಂಜಣ್ಣ ಬಣಕಾರ, ಯುವರಾಜ ಪಾಟೀಲ್, ಕೆಂಚನಗೌಡ, ಚೇತನ್ ಕದರಮಂಡಲಗಿ, ಸಿದ್ದು ಪಟ್ಟಣಶೆಟ್ಟಿ ಇತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))