ಭಾರತೀಯ ಕಾರ್ಮಿಕ ಸಂಘಗಳ ಒಕ್ಕೂಟದ (ಐಎಫ್‌ಟಿಯು) ಪ್ರಥಮ ರಾಜ್ಯ ಸಮ್ಮೇಳನ, ಬಹಿರಂಗ ಸಭೆಯನ್ನು ಜ.4 ಮತ್ತು 5ರಂದು ಹಾವೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಐಎಫ್‌ಟಿಯು ರಾಜ್ಯ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಬಾಲನ್ ಹೇಳಿದರು.
ಹಾವೇರಿ: ಭಾರತೀಯ ಕಾರ್ಮಿಕ ಸಂಘಗಳ ಒಕ್ಕೂಟದ (ಐಎಫ್‌ಟಿಯು) ಪ್ರಥಮ ರಾಜ್ಯ ಸಮ್ಮೇಳನ, ಬಹಿರಂಗ ಸಭೆಯನ್ನು ಜ.4 ಮತ್ತು 5ರಂದು ಹಾವೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಐಎಫ್‌ಟಿಯು ರಾಜ್ಯ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಬಾಲನ್ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಐಎಫ್‌ಟಿಯು ಅಂತಾರರಾಷ್ಟ್ರೀಯ ಮತ್ತು ದೇಶದ ಭವ್ಯ ಇತಿಹಾಸ ಹೊಂದಿದೆ. ಹೋರಾಟದ ಮೂಲಕ ಕಾರ್ಮಿಕ ವರ್ಗಕ್ಕೆ ನ್ಯಾಯ ಕೊಡಿಸಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕಾರ್ಮಿಕ ವರ್ಗವನ್ನು ದೇಶದ ವಿಮೋಚನಾ ಚಳವಳಿಯಲ್ಲಿ ತೊಡಗಿಸಿದೆ. ಸ್ವಾತಂತ್ರ ಪೂರ್ವದಲ್ಲಿ ಹಾಗೂ ಸ್ವಾತಂತ್ರದ ನಂತರ ಕಾರ್ಮಿಕ ವರ್ಗದ ಶೋಷಣೆಯ ವಿರುದ್ಧ ಐಎಫ್‌ಟಿಯು ನಡೆಸಿದ ನಿರಂತರ ಹೋರಾಟಗಳಿಂದ ಕಾರ್ಮಿಕ ವರ್ಗದ ರಕ್ಷಣೆಗಾಗಿ ಹಲವಾರು ಕಾನೂನುಗಳು ಜಾರಿಯಾಗಿವೆ. ಸಂಘಟಿತ ವಲಯದಲ್ಲಿ ವೇತನ ಮತ್ತು ಸೇವಾ ಪರಿಸ್ಥಿತಿ ಸುಧಾರಿಸಿದೆ, ಅಸಂಘಟಿತ ವಲಯದಲ್ಲಿ ಕಾರ್ಮಿಕರ ಬಗ್ಗೆಯು ಹಲವಾರು ಕಾನೂನುಗಳು ಬಂದಿವೆ. ಕಾರ್ಮಿಕರಿಗೆ ಸಂಬಂಧಿಸಿದ ಎಲ್ಲ ಕಾನೂನುಗಳನ್ನು ಹಾಗೂ 4 ಸಂಹಿತೆಗಳಲ್ಲಿ ಜಾರಿಗೆ ತಂದು ಹಿಂದೆ ಹೋರಾಟದ ಮೂಲಕ ಗಳಿಸಿದ ಹಕ್ಕುಗಳನ್ನು ದಮನ ಮಾಡಿ ಕಾರ್ಮಿಕ ವರ್ಗವನ್ನು ಕಾರ್ಪೋರೇಟ್ ಕಂಪನಿಗಳಿಗೆ ಶೋಷಣೆ ಮಾಡಲು ಕೇಂದ್ರ ಸರ್ಕಾರ ತಳ್ಳುತ್ತಿದೆ. ಈ ಕಾನೂನುಗಳನ್ನು ಕೇಂದ್ರ ಸರ್ಕಾರದ ಹಿಂಪಡೆಯಬೇಕೆಂದು ಸಮ್ಮೇಳನದಲ್ಲಿ ಒತ್ತಾಯಿಸಲಾಗುವುದು ಎಂದರು.ಇದರ ಜೊತೆಗೆ ಅಂಗನವಾಡಿ ನೌಕರರಿಗೆ ಮತ್ತು ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ, ಡಿಎ, ಮಾಸಿಕ ಪೆನ್ಷನ್ ಕೊಡಬೇಕು, ಉತ್ಪಾದನೆ ಮತ್ತು ಸೇವಾವಲಯದಲ್ಲಿ ಒಳಗುತ್ತಿಗೆ, ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಕಟ್ಟಡ ನಿರ್ಮಾಣ ಮತ್ತು ಕಲ್ಲು ಗಣಿ ಕಾರ್ಮಿಕರಿಗೆ ಮಂಡಳಿಯಿಂದ ಸುಗುವ ಎಲ್ಲ ಸೌಲಭ್ಯಗಳನ್ನು ವಿಳಂಬ ಮಾಡದೆ ಕೊಡಬೇಕು, ಎಲ್ಲ ಕಾರ್ಮಿಕರಿಗೆ ಕನಿಷ್ಠ ವೇತನ, ಸಾಮಾಜಿಕ ಭದ್ರತೆಯನ್ನು ಒದಗಿಸಬೇಕೆಂದು ಪ್ರಥಮ ಸಮ್ಮೇಳನದಲ್ಲಿ ಹಕ್ಕೋತ್ತಾಯ ಮಾಡಲಾಗುವುದು. ಈ ಕುರಿತು ಸಮ್ಮೇಳನದಲ್ಲಿ ಹಕ್ಕೋತ್ತಾಯ ಮಾಡಲಾಗುವುದು ಎಂದರು. ಈ ವೇಳೆ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಮರೆಮ್ಮನವರ, ಚನ್ನಗಿರಿ ರಫೀಕ್, ಎ.ಎಸ್. ಧಾರವಾಡ, ಬತುಲ್ ಕಿಲ್ಲೇದಾರ, ಸುನಿತಾ ನರಗುಂದ, ಎಂ.ಬಿ.ಶಾರದಮ್ಮ, ಎ.ಬಿ. ಉಮಾದೇವಿ, ಪರಮೇಶ ಹೊಸಕೊಪ್ಪ, ರಾಜೇಶ್ವರಿ ಪಾಟೀಲ, ಶೈಲಾ ಹರನಗೆರಿ, ಪಾರ್ವತಿ ಪಾಟೀಲ, ನಾಗರತ್ನಮ್ಮ ರೇಡ್ಡೇರ್, ವಿಶಾಲಾಕ್ಷಿ ಹೀರೆಮಠ, ಯಲ್ಲಮ್ಮ ಮರಡೂರ ಇತರರು ಇದ್ದರು.