ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ದಾಖಲೆಯ ಬಜೆಟ್ ಅಭಿವೃದ್ಧಿಯ ಗಂಧ ಗಾಳಿಯಿಲ್ಲದ ಬೊಗಳೆ ಬಜೆಟ್, ಕರಾವಳಿಯ ಅಭಿವೃದ್ಧಿಗೆ ಚೊಂಬು ನೀಡಿದ ಬಜೆಟ್ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಲೇವಡಿ ಮಾಡಿದ್ದಾರೆ.

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ದಾಖಲೆಯ ಬಜೆಟ್ ಅಭಿವೃದ್ಧಿಯ ಗಂಧ ಗಾಳಿಯಿಲ್ಲದ ಬೊಗಳೆ ಬಜೆಟ್, ಕರಾವಳಿಯ ಅಭಿವೃದ್ಧಿಗೆ ಚೊಂಬು ನೀಡಿದ ಬಜೆಟ್ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಲೇವಡಿ ಮಾಡಿದ್ದಾರೆ.

ಅವರು ರಾಜ್ಯ ಬಜೆಟ್ ನಲ್ಲಿ ಉಡುಪಿ ಜಿಲ್ಲೆಗೆ ಯಾವುದೇ ಯೋಜನೆ ಅಥವಾ ಅನುದಾನ ನೀಡದಿರುವ ಬಗ್ಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.ಉಡುಪಿ ಜಿಲ್ಲೆಯ ಐದು ಮಂದಿ ಶಾಸಕರು ಬಾರಿಬಾರಿ ಬೇಡಿಕೆ ಮನವಿ ಸಲ್ಲಿಸುತ್ತಿದ್ದರೂ ಕೂಡ ಅನುದಾನ ನೀಡುತ್ತಿಲ್ಲ. ಉಡುಪಿ ಪರ್ಯಾಯೋತ್ಸವಕ್ಕೆ ಕಾಂಗ್ರೆಸ್ ಸರ್ಕಾರ ಒಂದು ನಯಾಪೈಸೆ ನೀಡಿಲ್ಲ. ಬಿಜೆಪಿ ಸರ್ಕಾರದಲ್ಲಿ 10,000 ರು. ಗಳಿಗೆ ಸಿಗುತ್ತಿದ್ದ ಮರಳಿನ ದರ ಇಂದು ದುಪ್ಪಟ್ಟು ಆಗಿದೆ. 25 ರು. ಇದ್ದ ಕೆಂಪುಕಲ್ಲು 50 ರು. ಆಗಿದೆ. ನಾವು ಪ್ರತಿ ಗ್ರಾಪಂಗೆ 50 ಮನೆ ಬಡವರಿಗೆ ನೀಡಿದ್ದೆವು, ಈಗ ಒಂದೂ ಮನೆ ನೀಡಿಲ್ಲ, 9-11 ಸಮಸ್ಯೆ, ಪ್ರಾಧಿಕಾರದ ಸಮಸ್ಯೆ, ಕನ್ವರ್ಷನ್ ಸಮಸ್ಯೆಗೆ ಪರಿಹಾರವೇ ಇಲ್ಲ. ಈ ಬಗ್ಗೆ ಯೋಚಿಸುವ ಕನಿಷ್ಠ ಜವಾಬ್ದಾರಿ ಸರಕಾರಕ್ಕೆ ಇಲ್ಲ ಎಂದವರು ವಿಷಾದಿಸಿದರು.

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ ಸಿದ್ದರಾಮಯ್ಯ ಕರಾವಳಿಗೆ ದ್ವೇಷ ರಾಜಕೀಯವನ್ನು ಮಾಡುತ್ತಿದ್ದಾರೆ. ನಿವೃತ್ತಿಯ ಅಂಚಿನಲ್ಲಿ ಕುರ್ಚಿ ಉಳಿಸುವಲ್ಲಿ ವ್ಯಸ್ತರಾಗಿದ್ದಾರೆ. ಬಿಜೆಪಿ ಸರ್ಕಾರ ಕರಾವಳಿಗೆಂದೇ ಪ್ರತ್ಯೇಕ ಅನುದಾನ ಮೀಸಲಿಡುತಿತ್ತು, ಆದರೆ ಗ್ಯಾರಂಟಿಗಳಿಗೆ ಸಾಲ ಮಾಡಿದ ಸರ್ಕಾರದಲ್ಲಿ, ಕರಾವಳಿಯ ಅಭಿವೃದ್ಧಿಗೆ ಅನುದಾನ ನೀಡುವುದಕ್ಕೂ ಹಣ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುದ್ದದಿಂದಾಗಿ ಗ್ಯಾಸ್ ಬೆಲೆ ಏರಿಕೆಯಾಗಿದ್ದಕ್ಕೆ ಉಡುಪಿ ಕಾಂಗ್ರೆಸ್ ಪ್ರತಿಭಟನೆ ಮಾಡಿದೆ. ಬಜೆಟ್ಚಿನಲ್ಲಿ ಅನದಾನ ಇಲ್ಲದ್ದಕ್ಕೆ ಪ್ರತಿಭಟನೆ ಮಾಡಬೇಕಾಗಿತ್ತು. ಈ ಕಾಂಗ್ರೆಸಿಗರಿಗೆ ಯಾವ ವಿಚಾರಕ್ಕೆ ಪ್ರತಿಭಟನೆ ನಡೆಸಬೇಕು ಎಂಬ ಕನಿಷ್ಠ ಜ್ಞಾನ ಕೂಡ ಇಲ್ಲದಿರುವುದು ನಾಚಿಕೆಗೇಡು ಎಂದರು.ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಪ್ರ.ಕಾರ್ಯದರ್ಶಿಗಳಾದ ಶ್ರೀಕಾಂತ ನಾಯಕ್ ಮತ್ತು ರೇಷ್ಮಾ ಉದಯ ಶೆಟ್ಟಿ, ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ, ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್, ಮುಖಂಡರಾದ ಉದಯ್ ಕುಮಾರ್ ಶೆಟ್ಟಿ, ಪ್ರಭಾಕರ ಪೂಜಾರಿ, ಮಟ್ಟಾರು ರತ್ನಾಕರ ಹೆಗ್ಡೆ, ಕಿರಣ್ ಕುಮಾರ್, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ದಿನಕರ ಬಾಬು, ವಿಜಯ ಕೊಡವೂರು, ಸುಮಿತ್ರಾ ನಾಯಕ್, ಶಿವಕುಮಾರ್ ಅಂಬಲಪಾಡಿ ಮತ್ತಿತರರಿದ್ದರು.