ಕಳೆದ ಎರಡೂವರೆ ವರ್ಷದಲ್ಲಿ ಐದು ಗ್ಯಾರಂಟಿ ಯೋಜನೆಗಳಿಂದ ನಾಡಿನ ಎಲ್ಲ ವರ್ಗಗಳ ಜನರಿಗೆ 1 ಲಕ್ಷದ 25 ಸಾವಿರ ಕೋಟಿ ಹಣ ತಲುಪಿಸಲಾಗಿದೆ. 5 ವರ್ಷದಲ್ಲಿ ಸುಮಾರು 3 ಲಕ್ಷ ಕೋಟಿ ಹಣ ಗ್ಯಾರಂಟಿ ಯೋಜನೆಯಿಂದ ಫಲಾನುಭವಿಗಳಿಗೆ ತಲುಪುತ್ತದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಕೇಂದ್ರದಿಂದ ಅನುದಾನ ಸಿಗದಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡ ಆರ್ಥಿಕ ಪರಿಸ್ಥಿತಿಯನ್ನು ಮೀರಿ ಜನರ ಪರ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ಪಟ್ಟಣದ ಟಿ.ಬಿ.ಬಡಾವಣೆಯ ಬಡಗೂಡಮ್ಮ ದೇವಸ್ಥಾನದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆ ನೋಡಿ ಇತರೆ ರಾಜ್ಯಗಳಲ್ಲಿಯೂ ಕೂಡ ಬಿಜೆಪಿಯವರು ಗ್ಯಾರಂಟಿ ಯೋಜನೆ ಪ್ರಾರಂಭಿಸಿದರು. ಆದರೆ, ನಮ್ಮ ಸರ್ಕಾರದಂತೆ ಯಶಸ್ವಿಯಾಗಲಿಲ್ಲ ಎಂದರು.
ಕಳೆದ ಎರಡೂವರೆ ವರ್ಷದಲ್ಲಿ ಐದು ಗ್ಯಾರಂಟಿ ಯೋಜನೆಗಳಿಂದ ನಾಡಿನ ಎಲ್ಲ ವರ್ಗಗಳ ಜನರಿಗೆ 1 ಲಕ್ಷದ 25 ಸಾವಿರ ಕೋಟಿ ಹಣ ತಲುಪಿಸಲಾಗಿದೆ. 5 ವರ್ಷದಲ್ಲಿ ಸುಮಾರು 3 ಲಕ್ಷ ಕೋಟಿ ಹಣ ಗ್ಯಾರಂಟಿ ಯೋಜನೆಯಿಂದ ಫಲಾನುಭವಿಗಳಿಗೆ ತಲುಪುತ್ತದೆ. ಕರ್ನಾಟಕ ಹೊರತು ಪಡಿಸಿ ದೇಶದ ಯಾವುದೇ ರಾಜ್ಯದ ಸರ್ಕಾರಗಳು ಇಷ್ಟು ದೊಡ್ಡ ಪ್ರಮಾಣದ ಸಹಕಾರವನ್ನು ಜನರಿಗೆ ಕೊಟ್ಟಿಲ್ಲ ಎಂದರು.ಸಾರ್ವಜನಿಕರ ಸಮಸ್ಯೆ ಪರಿಹರಿಸುವುದು ಜನಸ್ಪಂದನ ಕಾರ್ಯಕ್ರಮದ ಪ್ರಮುಖ ಉದ್ದೇಶ. ಈ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ವರ್ಷದದಿಂದ ಸಾರ್ವಜನಿಕರ ಅನೇಕ ಅಹವಾಲು, ಅರ್ಜಿ ಸ್ವೀಕರಿಸಿ ಪರಿಶೀಲಿಸಿ ಬಗೆಹರಿಸುವುದು ಹಾಗೂ ಜನರ ಸಮಸ್ಯೆಗೆ ಸ್ಪಂದಿಸಿವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ತಾಲೂಕು ಆಡಳಿತಕ್ಕಿಂತ ಜಿಲ್ಲಾಡಳಿತ ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಕೆಲಸ ನಿರ್ವಹಣೆ ಜೊತೆಗೆ ಸಾರ್ವಜನಿಕರ ಕೆಲಸ ಮಾಡಿಕೊಟ್ಟರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದಾಗ ಸಾರ್ವಜನಿಕರು ಕೂಡ ಸಹಕರಿಸಬೇಕು ಎಂದರು.ಸರ್ಕಾರದಿಂದ ಸಾಧ್ಯವಾದಷ್ಟು ಸಮಸ್ಯೆ ಬಗೆಹರಿಸುವ ಕೆಲಸವಾಗುತ್ತಿದೆ. ತಾಲೂಕಿನ ಹಲವೆಡೆ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುತ್ತಿದೆ. ಇತ್ತೀಚೆಗೆ ಕೊಪ್ಪ ಹೋಬಳಿಯಲ್ಲಿ ನಡೆಸಿದ ಜನಸ್ಪಂದನ ದಲ್ಲಿ ಸ್ಥಳದಲ್ಲೇ ಹಲವು ಸಮಸ್ಯೆ ಪರಿಹರಿಸಿದ್ದೇವೆ ಎಂದರು.
ಜಿಲ್ಲೆಯಲ್ಲಿ ಕಳೆದೊಂದು ವರ್ಷದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ 8600ಕ್ಕೂ ಹೆಚ್ಚು ಪಹಣಿ ತಿದ್ದುಪಡಿ ಮಾಡಲಾಗಿದೆ. ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿದ್ದ 1600ಕ್ಕೂ ಹೆಚ್ಚು ಪ್ರಕರಣ ಇತ್ಯರ್ಥಪಡಿಸಲಾಗಿದೆ. ತಾಲೂಕಿನಲ್ಲಿ ಸುಮಾರು 20 ಸಾವಿರ ಪೌತಿ ಖಾತೆ ಬದಲಾವಣೆ ಮಾಡಲಾಗಿದೆ. 2.60 ಲಕ್ಷ ಆಧಾರ್ ಸೀಡಿಂಗ್ ಮಾಡಲಾಗಿದೆ ಎಂದರು.ತಾಲೂಕಿನಲ್ಲಿ ಇನ್ನೂ 80 ಸಾವಿರ ಖಾತೆ ಬಾಕಿಯಿದ್ದು, ಮುಂದಿನ 6 ತಿಂಗಳಲ್ಲಿ ಹಂತ ಹಂತವಾಗಿ ಗ್ರಾಮ ಮಟ್ಟದಲ್ಲಿ ಆಂದೋಲನ ನಡೆಸಿ ಖಾತೆ ಮಾಡಿಸಲಾಗುವುದು. ದುರಸ್ತಿಯಾಗಿ 200 ಪಹಣಿ ವಿತರಿಸಲಾಗಿದೆ. ಮುಜರಾಯಿ ದೇವಸ್ಥಾನಗಳ ಅರ್ಚಕರಿಗೆ ಪ್ರತಿ ತಿಂಗಳಿಗೆ 6 ಸಾವಿರ ರು.ಗಳಂತೆ ತಾಲೂಕಿನ ಒಟ್ಟು 506 ದೇವಸ್ಥಾನಗಳ ಅರ್ಚಕರಿಗೆ 30 ಲಕ್ಷಕ್ಕೂ ಹೆಚ್ಚು ಹಣ ನೀಡಲಾಗಿದೆ. ಎನ್‌ಆರ್‌ಎಲ್‌ಎಂ ವತಿಯಿಂದ ಮಹಿಳೆಯರಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಜಿಪಂ ನಡೆಸಿಕೊಂಡು ಬರುತ್ತಿದೆ ಎಂದರು.
18 ಲಕ್ಷ ಪಹಣಿಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ. ಒಟ್ಟು1.7 ಲಕ್ಷ ಸ.ನಂ.ಪೌತಿಖಾತೆ, 2 ಸಾವಿರಕ್ಕೂ ಹೆಚ್ಚು ದರಖಾಸ್ತು ಪೋಡಿ. ಡೀಸಿ, ಎಸಿ ಮತ್ತು ತಹಸೀಲ್ದಾರ್ ನ್ಯಾಯಾಲಯದಲ್ಲಿದ್ದ 20ಸಾವಿರ ಪ್ರಕರಣ ಇತ್ಯರ್ಥಪಡಿಸಲಾಗಿದೆ. 962 ಕೆರೆಗಳ ಅಳತೆ ಕಾರ್ಯ ಪೂರ್ಣಗೊಂಡಿದೆ. ರೆಕಾರ್ಡ್ ರೂಂ ನಲ್ಲಿ ಭೂ ಸುರಕ್ಷಾ ಯೋಜನೆಯಡಿ 1 ಕೋಟಿ 60 ಲಕ್ಷ ಪುಟಗಳ ಸ್ಕ್ಯಾನಿಂಗ್ ಮಾಡಲಾಗಿದೆ. 154 ಹೊಸ ಕಂದಾಯ ಗ್ರಾಮಗಳನ್ನು ರಚಿಸಲು ಕ್ರಮವಹಿಸಲಾಗಿದೆ. 59 ಸಾವಿರ ಸರ್ಕಾರಿ ಜಮೀನುಗಳ ಲ್ಯಾಂಡ್ ಬೀಟ್ ಮಾಡಲಾಗಿದೆ ಎಂದು ವಿವರಿಸಿದರು.ಹಾಲಿನ ಪ್ರೋತ್ಸಹ ಧನ, ಬಡ್ಡಿ ರಹಿತ ಸಾಲ, ಕೃಷಿ ಇಲಾಖೆ ಸೌಲಭ್ಯ, ವಿದ್ಯಾರ್ಥಿಗಳ ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆ ಸೌಲಭ್ಯ. ಸಾರ್ವಜನಿಕರಿಗೆ ಸಬ್ಸಿಡಿ ಸೇರಿದಂತೆ ಬರ ಮತ್ತು ನೆರೆ ಹಾನಿ ಪರಿಹಾರಕ್ಕೆ ಕೇಂದ್ರ ಸರ್ಕಾರದ ಅನುದಾನ ಲೆಕ್ಕಿಸದೆ ರಾಜ್ಯದ ಖಜಾನೆಯಿಂದಲೇ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದರು.
ಕೃಷಿ ಇಲಾಖೆಯಿಂದ ಸೂಕ್ಷ್ಮ ನೀರಾವರಿ ಯೋಜನೆ, ಕೃಷಿ ಯಾಂತ್ರೀಕರಣ, ಮಳೆಯಾಶ್ರಿತ ಪ್ರದೇಶ ಅಭಿವೃದ್ಧಿ ಯೋಜನೆ, ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ, ಕೃಷಿ ಭಾಗ್ಯ ಯೋಜನೆ, ರೈತರ ಆತ್ಮಹತ್ಯೆ ಹಾಗೂ ಆಕಸ್ಮಿಕ ಮರಣಕ್ಕಾಗಿ ಒಟ್ಟು 1.22 ಕೋಟಿ ರು. ಸಹಾಯಧನ ನೀಡಲಾಗಿದೆ ಎಂದರು.ತಾಲೂಕು ಮತ್ತು ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ನೂರಾರು ಜನರು ಸಮಸ್ಯೆಗೆ ಪರಿಹಾರ ಕೋರಿ ಲಿಖಿತ ಅರ್ಜಿ ಸಲ್ಲಿಸಿದರು. ಕೆಲ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದ ಸಚಿವರು ಇನ್ನುಳಿದ ಅರ್ಜಿಗಳನ್ನು ಆಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿ ಕಾಲಮಿತಿಯೊಳಗೆ ಕಾನೂನಾತ್ಮಕವಾಗಿ ಬಗೆಹರಿಸುವಂತೆ ಸೂಚಿಸಿದರು.
ನಂತರ 20 ಮಂದಿ ವಿಶೇಷ ಚೇತನ ಅರ್ಹ ಫಲಾನುಭವಿಗಳಿಗೆ ತ್ರಿಚಕ್ರ ಸ್ಕೂಟರ್, ನೂರಾರು ಮಂದಿ ರೈತ ಫಲಾನುಭವಿಗಳಿಗೆ ಕೃಷಿ ಪರಿಕರ ಸೇರಿದಂತೆ ಅರ್ಹ ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ಸವಲತ್ತು ಮತ್ತು ಮಂಜೂರಾತಿ ಪತ್ರಗಳನ್ನು ಸಚಿವರು ವಿತರಿಸಿದರು.ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ಗಂಗಾಧರಸ್ವಾಮಿ, ಎಸಿ ಶ್ರೀನಿವಾಸ್, ಜಂಟಿ ಕೃಷಿ ನಿರ್ದೇಶ ಅಶೋಕ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ರೂಪಶ್ರೀ, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಮಂಜುಳಾ, ನಗರಾಭಿವೃದ್ಧಿ ಕೋಶ ಜಂಟಿ ನಿರ್ದೇಶಕ ನರಸಿಂಹಮೂರ್ತಿ, ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಡಿವೈಎಸ್‌ಪಿ ಬಿ.ಚಲುವರಾಜು, ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ, ರಾಜ್ಯ ರೈತ ಉತ್ಪನ್ನ ಸಂಸ್ಥೆ ನಿರ್ದೇಶಕ ಎನ್.ಜೆ.ರಾಜೇಶ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಇದ್ದರು.