ಕನ್ನಡಪ್ರಭ ವಾರ್ತೆ ತುಮಕೂರು
ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ 75ನೇ ವರ್ಷಾಚರಣೆ ಅಂಗವಾಗಿ ಈ ತಿಂಗಳ 27ರಿಂದ ಆರು ದಿನಗಳ ಕಾಲ ನಗರದಲ್ಲಿ ಯೋನೆಕ್ಸ್-ಸನ್‌ರೈಸ್ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಅಂಡರ್-11 ಮತ್ತು ಅಂಡರ್-13 ವಿಭಾಗಗಳ ಪಂದ್ಯಾವಳಿ ಏರ್ಪಡಿಸಲಾಗಿದೆ.ರಾಜ್ಯಾದ್ಯಂತ ಸುಮಾರು 600 ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರೂ ಆದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ಯಾಡ್ಮಿಂಟನ್‌ನಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ರಾಜ್ಯದ ಪ್ರತಿಭಾವಂತ ಬ್ಯಾಡ್ಮಿಂಟನ್ ಆಟಗಾರರು ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಮುಂಬರುವ ಒಲಿಂಪಿಕ್ ಗುರಿ ಇಟ್ಟುಕೊಂಡು ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಆಟಗಾರರನ್ನು ಗುರುತಿಸಲು, ಸಿದ್ಧಪಡಿಸಲು ಈ ಪಂದ್ಯಾವಳಿ ಉತ್ತಮ ವೇದಿಕೆ ಆಗಲಿದೆ. ಆರು ಅಂಕಣಗಳಲ್ಲಿ ಆರು ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ. ಆಗಸ್ಟ್ 1 ರಂದು ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.27ರಂದು ತುಮಕೂರು ಬ್ಯಾಡ್ಮಿಂಟನ್ ಅಕಾಡೆಮಿ ಸ್ಥಳದಲ್ಲಿ ಬೆಳಗ್ಗೆ 10.45 ಕ್ಕೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಗಳ ಸಾನ್ನಿಧ್ಯದ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಯೋನೆಕ್ಸ್-ಸನ್‌ರೈಸ್ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಅಂಡರ್-11 ಮತ್ತು ಅಂಡರ್-13 ಪಂದ್ಯಾವಳಿ ಉದ್ಘಾಟಿಸುವರು. ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ ಅಧ್ಯಕ್ಷತೆ ವಹಿಸಿದರೆ ಕೇಂದ್ರ ಸಚಿವ ವಿ.ಸೋಮಣ್ಣ, ಜಿಲ್ಲೆಯ ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು, ಹೆಸರಾಂತ ಕ್ರೀಡಾಪಟುಗಳು ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 500 ಕ್ಕೂ ಹೆಚ್ಚು ಪ್ರತಿಭಾವಂತ ಕಿರಿಯ ಬ್ಯಾಡ್ಮಿಂಟನ್ ಆಟಗಾರರು ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಇದು ಅಂಡರ್-11 ಹಾಗೂ ಅಂಡರ್-13 ವಿಭಾಗಗಳ ರಾಜ್ಯದ ಪ್ರಮುಖ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲೊಂದಾಗಿದೆ ಎಂದರು.ಕ್ರಿಕೆಟ್ ನಂತರ ಬ್ಯಾಡ್ಮಿಂಟ್ ಹೆಚ್ಚು ಜನಪ್ರಿಯ ಆಟವಾಗಿದೆ. ರಾಜ್ಯದಲ್ಲಿ ಪ್ರತಿನಿತ್ಯ ಸುಮಾರು ನಾಲ್ಕೂವರೆ ಸಾವಿರಜನ ಬ್ಯಾಡ್ಮಿಂಟನ್ ಅಭ್ಯಾಸ ಮಾಡುತ್ತಿದ್ದಾರೆ. ಹೊಸ ಪ್ರತಿಭೆಗಳು ಹೊರ ಹೊಮ್ಮಬೇಕು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು. ಇಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಎಲ್ಲಾ ಜಿಲ್ಲೆಗಳಲ್ಲೂ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲು ಜಮೀನು ನೀಡಬೇಕು ಎಂದು ಸರ್ಕಾರಕ್ಕೆಕೋರಿಕೆ ಸಲ್ಲಿಸಿದ್ದು ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ರಾಜ್ಯಮಟ್ಟದ ಪ್ರತಿಷ್ಠಿತ ಬ್ಯಾಡ್ಮಿಂಟನ್ ಟೂರ್ನಿ ತುಮಕೂರು ನಗರದಲ್ಲಿ ನಡೆಯುತ್ತಿರುವುದು ಅಭಿಮಾನದ ವಿಚಾರ. ನಗರದ ಎಲ್ಲಾ ಕ್ರೀಡಾಪಟುಗಳು ಬೆಂಬಲ ನೀಡಿ ಸಹಕರಿಸಬೇಕು. ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಂದ್ಯಾವಳಿ ವೀಕ್ಷಿಸಿ ಸಂಭ್ರಮಿಸಬೇಕು ಎಂದು ಮನವಿ ಮಾಡಿದರು.
ತುಮಕೂರು ಬ್ಯಾಡ್ಮಿಂಟನ್ ಅಕಾಡೆಮಿ ಅಧ್ಯಕ್ಷ ಪಿ.ಪ್ರವೀಣ್, ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ವಿ.ಮುರಳಿಧರ್, ಸದಸ್ಯರಾದ ಸುಧೀರ್, ಹರೀಶ್‌ಕುಮಾರ್, ಜಿಲ್ಲಾಆರ್ಯಈಡಿಗರ ಸಂಘದಗೌರವಾಧ್ಯಕ್ಷಅಜಯ್‌ಕುಮಾರ್, ಅಧ್ಯಕ್ಷ ಎಂ.ನಾಗರಾಜು, ಜಂಟಿ ಕಾರ್ಯದರ್ಶಿ ಊರುಕೆರೆ ಪುರುಷೋತ್ತಮ್, ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ಎ.ಎನ್. ಪ್ರಭಾಕರ್ ಮೊದಲಾದವರು ಭಾಗವಹಿಸಿದ್ದರು.