1121 ಜನರ ಜೀವ ಉಳಿಸಿದ ಸ್ಟೆಮಿ ವ್ಯವಸ್ಥೆ !

| Published : Jul 01 2025, 12:47 AM IST

ಸಾರಾಂಶ

2023ರ ಏಪ್ರಿಲ್ ನಿಂದ 2024ರ ಮಾರ್ಚ್ 31ರವರೆಗೆ 8429 ಮಂದಿ ಹೃದಯ ನೋವಿನ ಕಾರಣ ಇಸಿಜಿ ಮಾಡಿಸಿದ್ದು, ಇದರಲ್ಲಿ 152 ಜನರ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ಜಯದೇವ ಹೃದ್ರೋಗ ಆಸ್ಪತ್ರೆಗೆ ರವಾನಿಸಲಾಗಿತ್ತು. ಇನ್ನು 2024ರ ಏಪ್ರಿಲ್ ನಿಂದ 2025ರ ಮಾರ್ಚ್ 31ರವರೆಗೆ 18,312 ಮಂದಿ ಹೃದಯ ನೋವಿನ ಕಾರಣ ಇಸಿಜಿ ಮಾಡಿಸಿದ್ದು, ಇದರಲ್ಲಿ 969 ಜನರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಯಿತು.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಯುವ ಜನರಲ್ಲಿ ಹೃದಯಾಘಾತ ಪ್ರಮಾಣ ಹೆಚ್ಚುತ್ತಿರುವ ಈ ಸಮಯದಲ್ಲಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಜಾರಿಯಲ್ಲಿರುವ ಸ್ಟೆಮಿ (ಹೃದಯ ಸ್ನಾಯುವಿನ ಸೋಂಕು ನಿವಾರಣೆ) ಯೋಜನೆ ಹೃದಯ ರೋಗಿಗಳಿಗೆ ವರದಾನವಾಗಿದೆ.

ಹೃದಯಾಘಾತಕ್ಕೊಳಗಾದವರಿಗೆ ಜಯದೇವ ಹೃದ್ರೋಗ ಸಂಸ್ಥೆಯ ತಜ್ಞ ವೈದ್ಯರ ಸಲಹೆಯೊಂದಿಗೆ ತಾಲೂಕು ಮಟ್ಟದಲ್ಲೇ ಪ್ರಾಥಮಿಕ ತುರ್ತು ಚಿಕಿತ್ಸೆ ನೀಡುವ ಸ್ಟೆಮಿ ವ್ಯವಸ್ಥೆಯಿಂದ ಕಳೆದ 2 ವರ್ಷಗಳಿಂದ ಜಿಲ್ಲೆಯಲ್ಲಿ ಹೃದಯಾಘಾತಕ್ಕೊಳಗಾದ 1121 ಜೀವಗಳು ಉಳಿದಿವೆ.

ಇತ್ತೀಚೆಗೆ ಹಠಾತ್ ಹೃದಯಾಘಾತದಿಂದ ನಿಧನರಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆರೋಗ್ಯವಂತ ವ್ಯಕ್ತಿಗಳು ಸಹ 30-40 ವರ್ಷಗಳ ಆಸುಪಾಸಿನಲ್ಲಿಯೇ ಸಾವಿಗೀಡಾಗುವ ಪ್ರಕರಣಗಳು ವರದಿ ಆಗುತ್ತಿವೆ.

ಹೃದಯಾಘಾತ ಸಂಭವಿಸಿದ ಒಂದು ಗಂಟೆಯೊಳಗೆ (ಗೋಲ್ಡನ್‌ ಅವರ್‌) ತುರ್ತು ಚಿಕಿತ್ಸೆ ಲಭಿಸಿದರೆ ಬದುಕುಳಿಯುತ್ತಾರೆ. ಅಂತಹ ತುರ್ತು ಚಿಕಿತ್ಸೆಯನ್ನು ನೀಡುವ ಸ್ಟೆಮಿ ವ್ಯವಸ್ಥೆ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ ಹಾಗೂ ಎರಡು ತಾಲೂಕುಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಇದೆ. ಈ ಆಸ್ಪತ್ರೆಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ 1,121 ಹೃದ್ರೋಗಿಗಳಿಗೆ ಚಿಕಿತ್ಸೆ ಲಭಿಸಿದೆ.

ಸ್ಟೆಮಿ ವ್ಯವಸ್ಥೆ ಎಂದರೇನು? :

ಹೃದಯಾಘಾತಕ್ಕೊಳಗಾದವರನ್ನು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತಂದಾಗ ಇಸಿಜಿ ಮಾಡುವಾಗಲೇ ಬೆಂಗಳೂರು ಜಯದೇವ ಹೃದ್ರೋಗ ಸಂಸ್ಥೆಗೆ ಸಂದೇಶ ರವಾನೆ ಆಗುತ್ತದೆ. ಜಯದೇವ ಸಂಸ್ಥೆಯ ತಜ್ಞ ವೈದ್ಯರು ತಾಲೂಕು ಆಸ್ಪತ್ರೆಯ ವೈದ್ಯರಿಗೆ ಹೃದ್ರೋಗಿಗೆ ಯಾವ್ಯಾವ ತುರ್ತು ಚಿಕಿತ್ಸೆ ನೀಡಬೇಕು ಎಂದು ಮಾಹಿತಿ ನೀಡುತ್ತಾರೆ. ಅದರಂತೆ ತಾಲೂಕು ಆಸ್ಪತ್ರೆಗಳ ವೈದ್ಯರು ಹೃದಯಾಘಾತಕ್ಕೆ ಒಳಗಾದ ವರಿಗೆ ತುರ್ತು ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಡುವರು. ಇದೇ ಸ್ಟೆಮಿ ವ್ಯವಸ್ಥೆ.26,741 ಮಂದಿ ಇಸಿಜಿ ! :

2023ರ ಏಪ್ರಿಲ್ ನಿಂದ 2024ರ ಮಾರ್ಚ್ 31ರವರೆಗೆ 8429 ಮಂದಿ ಹೃದಯ ನೋವಿನ ಕಾರಣ ಇಸಿಜಿ ಮಾಡಿಸಿದ್ದು, ಇದರಲ್ಲಿ 152 ಜನರ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ಜಯದೇವ ಹೃದ್ರೋಗ ಆಸ್ಪತ್ರೆಗೆ ರವಾನಿಸಲಾಗಿತ್ತು. ಇನ್ನು 2024ರ ಏಪ್ರಿಲ್ ನಿಂದ 2025ರ ಮಾರ್ಚ್ 31ರವರೆಗೆ 18,312 ಮಂದಿ ಹೃದಯ ನೋವಿನ ಕಾರಣ ಇಸಿಜಿ ಮಾಡಿಸಿದ್ದು, ಇದರಲ್ಲಿ 969 ಜನರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಯಿತು. ಜಿಲ್ಲೆಯ ಯಾವ್ಯಾವ ಆಸ್ಪತ್ರೆಯಲ್ಲಿದೆ ವ್ಯವಸ್ಥೆ : ಜಿಲ್ಲೆಯ ಮೂರು ಆಸ್ಪತ್ರೆಗಳಲ್ಲಿ ಸ್ಟೆಮಿ ವ್ಯವಸ್ಥೆ ಇದೆ. ರಾಮನಗರ ಜಿಲ್ಲಾಸ್ಪತ್ರೆ, ಕನಕಪುರ ತಾಲೂಕು ಆಸ್ಪತ್ರೆ ಹಾಗೂ ಮಾಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಟೆಮಿ ವ್ಯವಸ್ಥೆ ಇದೆ. ಕಳೆದ ಎರಡು ವರ್ಷಗಳಿಂದ ಮಾಗಡಿ ತಾಲೂಕು ಆಸ್ಪತ್ರೆಯಲ್ಲಿ 368, ಕನಕಪುರ ತಾಲೂಕು ಆಸ್ಪತ್ರೆಯಲ್ಲಿ 342 ಮಂದಿ ಹಾಗೂ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ 411 ಮಂದಿ ಸೇರಿದಂತೆ ಒಟ್ಟು 1121 ಜನರಿಗೆ ಸ್ಟೆಮಿ ವ್ಯವಸ್ಥೆಯಡಿ ಚಿಕಿತ್ಸೆ ಲಭ್ಯವಾಗಿದೆ. ಇದರಲ್ಲಿ ಅಧಿಕ ಜನರು ಹೃದಯಾಘಾತದ ಸಾವಿನಿಂದ ಬಚಾವಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಿರಂಜನ್ ಮಾಹಿತಿ ನೀಡಿದ್ದಾರೆ.

ಇನ್ನೂ 2 ಆಸ್ಪತ್ರೆಗಳಿಗೆ ಪ್ರಸ್ತಾವನೆ :

ರಾಜ್ಯಸರ್ಕಾರವು ಜಾರಿಗೆ ತಂದ ಸ್ಟೆಮಿ ವ್ಯವಸ್ಥೆ ಮೊದಲ ಹಂತದಲ್ಲಿ ರಾಮನಗರ ಜಿಲ್ಲಾಸ್ಪತ್ರೆ, ಕನಕಪುರ ಹಾಗೂ ಮಾಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಿಗೆ ಮಂಜೂರಾಗಿತ್ತು. ಉಳಿದ ಚನ್ನಪಟ್ಟಣ ಹಾಗೂ ಹಾರೋಹಳ್ಳಿ ತಾಲೂಕು ಆಸ್ಪತ್ರೆಗಳಿಗೂ ಸ್ಟೆಮಿ ವ್ಯವಸ್ಥೆ ಮಂಜೂರು ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

- ಡಾ.ಕಿರಣ್ ಶಂಕರ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು, ಬೆಂಗಳೂರು ದಕ್ಷಿಣ