ಕನಕಗಿರಿ: ನವ ಶಿಲಾಯುಗಕ್ಕೆ ಸಂಬಂಧಿಸಿದ ಬೂದಿದಿಬ್ಬಗಳಿರುವ ತಾಲೂಕಿನ ರಾಮದುರ್ಗಾದ ಹೊಸೂರು ಹಾಗೂ ಗಂಗಾವತಿ ತಾಲೂಕಿನ ಆಗೋಲಿ ಅರಣ್ಯ ಪ್ರದೇಶಕ್ಕೆ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯ ಉಪ ನಿರ್ದೇಶಕ ಶೇಜೇಶ್ವರ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು.
ನವ ಶಿಲಾಯುಗ ಕಾಲದ ಬೂದಿದಿಬ್ಬಗಳನ್ನು ಸಂರಕ್ಷಣೆ ಮಾಡುವ ಕುರಿತಂತೆ ಜು. ೧೦ರಂದು ವಿಠಲಾಪೂರ, ರಾಮದುರ್ಗಾ ಬೂದಿದಿಬ್ಬಕ್ಕಿಲ್ಲ ರಕ್ಷಣೆ ಶಿರ್ಷಿಕೆಯಡಿ ಕನ್ನಡಪ್ರಭದಲ್ಲಿ ವರದಿ ಪ್ರಕಟವಾದ ಹಿನ್ನೆಲೆ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ಬೂದಿದಿಬ್ಬಗಳಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮೊದಲು ಆಗೋಲಿ ಅರಣ್ಯ ಭೂಮಿ ವ್ಯಾಪ್ತಿಯಲ್ಲಿರುವ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಆವರಿಸಿಕೊಂಡಿರುವ ಬೂದಿದಿಬ್ಬ ವೀಕ್ಷಿಸಿದರು. ದಿಬ್ಬದುದ್ದಕ್ಕೂ ಇರುವ ಸಗಣಿ ಕಿಟ್ಟಗಳಿರುವುದನ್ನು ಗಮನಿಸಿದರು. ಇದೇ ಸ್ಥಳದ ಪೂರ್ವ ದಿಕ್ಕಿನಲ್ಲಿ ಜನ ಕೇಂದ್ರವಾಗಿತ್ತು ಎನ್ನುವುದಕ್ಕೆ ಮಣ್ಣಿನ ಮಡಿಕೆ ಚೂರು, ಆದಿಮಾನವನ ಸಮಾಧಿ ಮಾಡಿರುವ ಮೂಳೆ, ಮಡಿಕೆಯಲ್ಲಿ ಅಸ್ತಿ ಮುಚ್ಚಿಟ್ಟಿರುವ ಬಗ್ಗೆ ಕರುಹುಗಳಿರುವುದನ್ನು ಕಂಡರು. ಈ ಸ್ಥಳದೆಲ್ಲೆಡೆ ತಲೆ ಬುರುಡೆ, ಕೈ, ಕಾಲು, ಆದಿ ಮಾನವನ ಶರೀರಕ್ಕೆ ಸಂಬಂಧಿಸಿದ ಮೂಳೆ ನೋಡಿದ ಅಧಿಕಾರಿಗಳು ಅಚ್ಚರಿಪಟ್ಟರು.
ಬೂದಿ ದಿಬ್ಬ, ಮಣ್ಣಿನ ಮಡಿಕೆಯಲ್ಲಿಟ್ಟಿರುವ ಮನುಷ್ಯನ ಮೂಳೆಗಳು ಆದಿ ಮಾನವನ ಕಾಲಕ್ಕೆ ಸೇರಿದ್ದಾಗಿವೆ. ಇತ್ತೀಚೆಗೆ ಪತ್ತೆಯಾದ ತಲೆ ಬುರುಡೆಯನ್ನು ಕುರಿಗಾಯಿಗಳು ಹಾಳು ಮಾಡಿದ್ದರಿಂದ ಪರೀಕ್ಷೆಗೆ ಒಳಪಡಿಸಲು ಬರುವುದಿಲ್ಲ. ಪ್ರಾಚ್ಯವಸ್ತು ಇಲಾಖೆಯ ಸೂಕ್ಷ್ಮ ನಿಯಮ ಅನುಸರಿಸಿ ಪರೀಕ್ಷೆಗೊಳಪಡಿಸಿದಾಗ ಮಾತ್ರ ಬುರುಡೆ, ಮೂಳೆ ಯಾವ ಕಾಲದ್ದು ಎನ್ನುವುದು ದೃಢವಾಗಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯಪಟ್ಟರು.ಇನ್ನೂ ಕನಕಗಿರಿ ತಾಲೂಕಿನ ರಾಮದುರ್ಗಾದ ಹೊಸೂರಿನ ಹಿಂಭಾಗದ ಬೂದಿದಿಬ್ಬಕ್ಕೂ ಭೇಟಿ ನೀಡಿದ ಅಧಿಕಾರಿಗಳು ನವ ಶಿಲಾಯುಗದ ಸಗಣೆ ಕಿಟ್ಟಗಳನ್ನು ವೀಕ್ಷಿಸಿದರು. ಈ ದಿಬ್ಬವು ಸುಮಾರು ಅರ್ಧ ಎಕರೆಯಷ್ಟು ಇದ್ದು, ದಿಬ್ಬದ ಮೇಲ್ಭಾಗದಲ್ಲಿ ಪ್ರಾಣ ದೇವರು ಇರುವುದನ್ನು ಗಮನಿಸಿ ಈ ದಿಬ್ಬದ ಕುರಿತು ಜನರಿಂದ ಮಾಹಿತಿ ಪಡೆದರು.
ಈ ವೇಳೆ ಪುರಾತತ್ವ ಸಹಾಯಕ ಮಂಜಾ ನಾಯ್ಕ್, ಪುರಾತತ್ವ ಸಂರಕ್ಷಣಾ ಇಂಜಿನಿಯರ್ ಸತೀಶ ಇದ್ದರು.
ಆಗೋಲಿ, ರಾಮದುರ್ಗಾ ಪ್ರದೇಶಗಳಲ್ಲಿನ ಬೂದಿದಿಬ್ಬಗಳು ನವ ಶಿಲಾಯುಗಕ್ಕೆ ಸಂಬಂಧಿಸಿದ್ದಾಗಿವೆ. ಇವುಗಳ ಸಂರಕ್ಷಣೆ ನಮ್ಮ ಧ್ಯೇಯವಾಗಿದೆ. ನಾಮಫಲಕ ಹಾಗೂ ಮುಳ್ಳುತಂತಿ ಅಳವಡಿಸಿ ಸಂರಕ್ಷಣೆ ಮಾಡುತ್ತೇವೆ. ಇಲ್ಲಿನ ಇತಿಹಾಸ ಪರಿಚಯಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕಮಲಾಪುರ ಪ್ರಾಚ್ಯವಸ್ತು ಇಲಾಖೆ ಉಪನಿರ್ದೇಶಕ ಶೇಜೇಶ್ವರ ತಿಳಿಸಿದ್ದಾರೆ.