ಕುಷ್ಟಗಿ: ಸ್ತನ್ಯಪಾನದ ಕುರಿತು ತಾಯಂದಿರಲ್ಲಿರುವ ತಪ್ಪು ತಿಳಿವಳಿಕೆ ಹಾಗೂ ಅನಗತ್ಯ ಆತಂಕ ದೂರ ಮಾಡಿ ವೈಜ್ಞಾನಿಕ ಅರಿವು ಮೂಡಿಸುವ ಅಗತ್ಯವಿದೆ. ಮಗುವಿನ ಆರೋಗ್ಯಕರ ಬೆಳವಣಿಗೆಗೆ ತಾಯಿ ಹಾಲು ಪ್ರಮುಖವಾಗಿರುವುದರಿಂದ ಪ್ರತಿಯೊಬ್ಬ ತಾಯಿ ಸ್ತನ್ಯಪಾನದ ಮಹತ್ವ ಅರಿತುಕೊಳ್ಳಬೇಕು ಎಂದು ಅಂಗನವಾಡಿ ಇಲಾಖೆಯ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ್ ಹೇಳಿದರು.
ತಾಲೂಕಿನ ಕಂದಕೂರು ಗ್ರಾಮದ 2ನೇ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮಗುವಿನ ಜನನದ ನಂತರ ತಾಯಿ ಹಾಲು ನೀಡುವುದರಿಂದ ಶಿಶುವಿಗೆ ಅಗತ್ಯವಾದ ಪೌಷ್ಟಿಕಾಂಶ ದೊರೆಯುವುದರ ಜತೆಗೆ ಸೋಂಕುಗಳ ವಿರುದ್ಧ ರಕ್ಷಣೆ ಪಡೆಯಲು ಸಹಕಾರಿಯಾಗುತ್ತದೆ. ಶಿಶುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲೂ ತಾಯಿ ಹಾಲು ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಸ್ತನ್ಯಪಾನದ ಕುರಿತು ಕುಟುಂಬದ ಸದಸ್ಯರು ಹಾಗೂ ಸಮಾಜದಲ್ಲಿ ಸರಿಯಾದ ಅರಿವು ಮೂಡಿಸುವುದು ಅಗತ್ಯ ಎಂದರು.
ಸ್ತನ್ಯಪಾನದ ಕುರಿತು ಕೆಲವು ತಾಯಂದಿರಲ್ಲಿ ತಪ್ಪು ಕಲ್ಪನೆ ಹಾಗೂ ಪಾರಂಪರಿಕ ನಂಬಿಕೆಗಳಿಂದ ಗೊಂದಲ ಉಂಟಾಗುತ್ತದೆ. ಮೊದಲ ಹಾಲಿನ ಮಹತ್ವದ ಬಗ್ಗೆ ಅರಿವಿನ ಕೊರತೆ, ತಾಯಿ ಹಾಲು ಮಗುವಿಗೆ ಸಾಕಾಗುವುದಿಲ್ಲ ಎಂಬ ತಪ್ಪು ಕಲ್ಪನೆ ಸೇರಿದಂತೆ ವಿವಿಧ ಕಾರಣಗಳಿಂದ ಸ್ತನ್ಯಪಾನಕ್ಕೆ ಆದ್ಯತೆ ನೀಡದಿರುವ ಸಾಧ್ಯತೆಯಿದೆ. ಇಂತಹ ತಪ್ಪು ತಿಳಿವಳಿಕೆ ವೈಜ್ಞಾನಿಕ ಮಾಹಿತಿಯ ಮೂಲಕ ನಿವಾರಿಸಬೇಕು ಎಂದು ಹೇಳಿದರು.ತಾಯಿ ಹಾಲಿನ ಬಗ್ಗೆ ಯಾವುದೇ ಅನುಮಾನ ಅಥವಾ ಮಗುವಿನ ಆರೋಗ್ಯದ ಕುರಿತು ಸಮಸ್ಯೆ ಕಂಡುಬಂದರೆ ಸ್ವಯಂ ನಿರ್ಧಾರ ಕೈಗೊಳ್ಳದೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯ ಸಲಹೆ ಪಡೆಯಬೇಕು. ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಮನೆಮನೆಗೆ ತಲುಪಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ ಎಂದರು.
ತಾಯಿ-ಮಗುವಿನ ಬಾಂಧವ್ಯಕ್ಕೂ ಸಹಕಾರಿ: ತಾಯಿ ಹಾಲು ಮಗುವಿಗೆ ಪೌಷ್ಟಿಕಾಂಶ ಒದಗಿಸುವುದರ ಜತೆಗೆ ತಾಯಿ-ಮಗುವಿನ ಭಾವನಾತ್ಮಕ ಬಾಂಧವ್ಯ ಗಟ್ಟಿಗೊಳಿಸಲು ಸಹಕಾರಿಯಾಗಿದೆ. ಮಗುವಿನ ಆರೋಗ್ಯಕರ ಬೆಳವಣಿಗೆಗೆ ಅಗತ್ಯ ಆರೈಕೆ, ಪೌಷ್ಟಿಕ ಆಹಾರ ಹಾಗೂ ಸ್ವಚ್ಛತೆಯ ಬಗ್ಗೆ ತಾಯಂದಿರು ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಗರ್ಭಿಣಿಯರು ಹಾಗೂ ಬಾಣಂತಿಯರು ತಮ್ಮ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಪೌಷ್ಟಿಕಾಂಶಯುಕ್ತ ಆಹಾರ ಸೇವನೆ, ಸಾಕಷ್ಟು ವಿಶ್ರಾಂತಿ ಹಾಗೂ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯ. ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ವೈದ್ಯರು ಅಥವಾ ಆರೋಗ್ಯ ಸಿಬ್ಬಂದಿಯ ಸಲಹೆ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ರಾಜಾಬಿ ಮುಲ್ಲಾ, ಅಂಗನವಾಡಿ ಕಾರ್ಯಕರ್ತೆಯರಾದ ಗಂಗಮ್ಮ ಸಂಕಿನ್, ಲಕ್ಷ್ಮಿ ಭಾವಿಕಟ್ಟಿ, ಹುಲಿಗೆಮ್ಮ ವಾಲ್ಮೀಕಿ, ಸುನೀತಾ ಬಸ್ಸಯ್ಯ, ಗದ್ದೆಮ್ಮ ಮಂಜುನಾಥ್, ಶಿಲ್ಪಾ ಮುತ್ತಣ್ಣ, ಮಂಜುಳಾ ಗುರಿಕಾರ, ರೇಷ್ಮಾ ಸದ್ದಾಂ ಹುಸೇನ, ಶಾಹಿನ್ ದಾವಲಸಾಬ್, ಅಶ್ವಿನಿ, ಮಾದೇವಿ ಕುರ್ನಾಳ ಸೇರಿದಂತೆ ಗರ್ಭಿಣಿಯರು, ಬಾಣಂತಿಯರು ಹಾಗೂ ಸಹಾಯಕಿಯರು ಉಪಸ್ಥಿತರಿದ್ದರು.