ಕನ್ನಡಪ್ರಭ ವಾರ್ತೆ ಮುಂಡಗೋಡ

ಸೇವೆಗಾಗಿಯೇ ಗುರುತಿಸಿಕೊಂಡ ಭಾರತ ಸೇವಾದಳ ಶಾಲಾ ಹಂತದಲ್ಲಿಯೇ ಮಗುವಿಗೆ ಅಗತ್ಯವಿರುವ ಶಿಸ್ತು ಮತ್ತು ಸಂಸ್ಕಾರ ನೀಡುತ್ತದೆಯಲ್ಲದೇ ವ್ಯಕ್ತಿತ್ವ ಸುಧಾರಣೆ ಮತ್ತು ಜಾತ್ಯತೀತತೆ ಮತ್ತು ರಾಷ್ಟ್ರ ಪ್ರೇಮ ಹೆಚ್ಚಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ ಹೇಳಿದರು.

ಮಂಗಳವಾರ ಇಲ್ಲಿಯ ಪಪಂ ಸಭಾ ಭವನದಲ್ಲಿ ಜಿಪಂ, ಉತ್ತರಕನ್ನಡ, ತಾಪಂ ಮುಂಡಗೋಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಭಾರತ ಸೇವಾ ದಳ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಭಾರತ ಸೇವಾ ದಳ ಶಿಕ್ಷಕ-ಶಿಕ್ಷಕಿಯರ ಪುನಃಶ್ಚೇತನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನೆಪ ಮಾತ್ರಕ್ಕೆ ಸೇವಾ ದಳ ಚಟುವಟಿಕೆ ನಡೆಸಿದರೆ ಸಲ್ಲದು. ಮಕ್ಕಳಲ್ಲಿ ಸೇವಾ ದಳದ ಮಹತ್ವದ ಅರಿವು ಮೂಡಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರವಹಿಸಬೇಕು. ದೇಶ ಸದೃಢವಾಗಬೇಕಾದರೆ ಸೇವಾದಳದ ಆದರ್ಶಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಂಡು ಮಕ್ಕಳಿಗೆ ದಾರೆ ಎರೆಯಬೇಕು ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.

ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ಸ್ವಾತಂತ್ರ‍್ಯಕ್ಕಾಗಿ ಸಾಕಷ್ಟು ಶಿಸ್ತು ಬದ್ದ ಹೋರಾಟ ನಡೆಸಿದ ಸಂಸ್ಥೆಯಲ್ಲಿ ಸೇವಾ ಒಂದಾಗಿದೆ. ರಾಷ್ಟ್ರಪ್ರೇಮದ ಬಗ್ಗೆ ಮಕ್ಕಳಲ್ಲಿ ಬಿತ್ತಬೇಕಿದೆ ಎಂದರು.


ಜಿಲ್ಲಾ ಸೇವಾ ದಳದ ಸಿ.ಕೆ. ಅಶೋಕ ಮಾತನಾಡಿ, ಹಿಂದೆ ಗುರು ಹಿರಿಯರನ್ನು ಗೌರವಿಸುವ ಮನೋಭಾವವಿತ್ತು. ಇಂದಿನ ಪೀಳಿಗೆಯಲ್ಲಿ ಅದು ಕ್ಷೀಣಿಸಿದೆ. ಸಂಸ್ಕಾರದ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಪ್ರತಿಯೊಬ್ಬರು ನೈತಿಕ ಹೊಣೆ ಹತ್ತು ಮಕ್ಕಳಲ್ಲಿ ಸಂಸ್ಕಾರ ತುಂಬುವ ಕೆಲಸ ಮಾಡಬೇಕಿದೆ ಎಂದರು.

ಭಾರತ ಸೇವಾ ದಳ ಅಧ್ಯಕ್ಷ ರಾಮಕೃಷ್ಣ ಮೂಲಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎಂ. ನಾಯ್ಕ, ಮಂಜುನಾಥ ಕಲಾಲ, ಜ್ಞಾನದೇವ ಗುಡಿಯಾಳ, ರಾಮಚಂದ್ರ ಹೆಗಡೆ, ಎಸ್.ಡಿ ಮುಡೆಣ್ಣವರ, ರಮೇಶ ಅಂಬಿಗೇರ, ವಾಸುದೇವ ನಾಯ್ಕ, ಕೆ.ಕೆ. ಕರುವಿನಕೊಪ್ಪ, ಎಸ್.ಸಿ. ಬಸನಗೌಡರ, ಹನುಮಂತ ತಳವಾರ ಮುಂತಾದವರಿದ್ದರು. ಮಂಜುನಾಥ ಕಲಾಲ ಸ್ವಾಗತಿಸಿದರು. ಸುರೇಶ ಪೂಜಾರ ನಿರೂಪಿಸಿದರು.