ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ - ಬಂಧಿತರ ಸಂಖ್ಯೆ 16ಕ್ಕೆ ಏರಿಕೆ

| N/A | Published : Feb 14 2025, 12:31 AM IST / Updated: Feb 14 2025, 01:03 PM IST

ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ - ಬಂಧಿತರ ಸಂಖ್ಯೆ 16ಕ್ಕೆ ಏರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಠಾಣೆ ಎದುರಿನ ರಸ್ತೆಯಲ್ಲಿ ಗುಂಪು ಸೇರಿ ಕಲ್ಲು ತೂರಾಟ ನಡೆಸಿದ್ದ ಸಂಬಂಧ ಸಿಸಿಟಿವಿ, ಮೊಬೈಲ್ ವಿಡಿಯೋ ದೃಶ್ಯಾವಳಿಗಳ ಆಧಾರದ ಮೇಲೆ ಬುಧವಾರ 8 ಮಂದಿಯನ್ನು ಬಂಧಿಸಿದ್ದ ಪೊಲೀಸರು, ಗುರುವಾರ ಮತ್ತೆ 8 ಮಂದಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  ಮೈಸೂರು  : ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಮತ್ತೆ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮೈಸೂರು ನಗರ ಪೊಲೀಸರು, 1 ಸಾವಿರ ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಕಲ್ಲು ತೂರಾಟದಲ್ಲಿ 7 ಮಂದಿ ಪೊಲೀಸರು ಗಾಯಗೊಂಡಿದ್ದು, 10 ಹೆಚ್ಚು ವಾಹನಗಳು ಜಖಂಗೊಂಡಿವೆ.ಠಾಣೆ ಎದುರಿನ ರಸ್ತೆಯಲ್ಲಿ ಗುಂಪು ಸೇರಿ ಕಲ್ಲು ತೂರಾಟ ನಡೆಸಿದ್ದ ಸಂಬಂಧ ಸಿಸಿಟಿವಿ, ಮೊಬೈಲ್ ವಿಡಿಯೋ ದೃಶ್ಯಾವಳಿಗಳ ಆಧಾರದ ಮೇಲೆ ಬುಧವಾರ 8 ಮಂದಿಯನ್ನು ಬಂಧಿಸಿದ್ದ ಪೊಲೀಸರು, ಗುರುವಾರ ಮತ್ತೆ 8 ಮಂದಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.ಅಲ್ಲದೆ, ಗಲಾಟೆಯಲ್ಲಿ ಭಾಗಿಯಾಗಿದ್ದ 100 ಹೆಚ್ಚಿನ ಮಂದಿಯ ಗುರುತು ಪತ್ತೆ ಮಾಡಿರುವ ಪೊಲೀಸರು, ಅವರ ಬಂಧನಕ್ಕೆ ಶೋಧ ಕಾರ್ಯ ಮುಂದುವರೆಸಿದ್ದಾರೆ.ಪೊಲೀಸ್ ಠಾಣೆ ಎದುರು ಸೇರಿದಂತೆ ಮುಖ್ಯ ರಸ್ತೆಯ ಸುತ್ತಲಿನ ಪ್ರದೇಶಗಳ ಸಿಸಿಟಿವಿ ಕ್ಯಾಮರಾಗಳ 10 ಹೆಚ್ಚು ಡಿವಿಆರ್‌ ಗಳನ್ನು ಪರಿಶೀಲಿಸಿ, ಕೃತ್ಯದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚುತ್ತಿದ್ದಾರೆ. ಜೊತೆಗೆ ಸಿಸಿಬಿಯ ತಾಂತ್ರಿಕ ತಂಡ ಘಟನಾ ಸ್ಥಳದಲ್ಲಿ ಇದ್ದ ಮೊಬೈಲ್‌ ಗಳ ಸಂಖ್ಯೆಯನ್ನು ಟವರ್ ಮೂಲಕ ಪತ್ತೆ ಹಚ್ಚಿ, ಯಾರ್ಯಾರು ಘಟನಾ ಸ್ಥಳದಲ್ಲಿದ್ದರು ಎಂಬುದರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜೊತೆಗೆ ಪೊಲೀಸರ ಬಾಡಿ ವೋರ್ನ್ ಕ್ಯಾಮರಾದಲ್ಲಿ ಸೆರೆ ಸಿಕ್ಕಿರುವ ದೃಶ್ಯಗಳ ಆಧಾರದ ಮೇಲೆ ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಆರೋಪಿ ಜಾಮೀನಿಗೆ ಅರ್ಜಿಸಾಮಾಜಿಕ ಜಾಲ ತಾಣದಲ್ಲಿ ಮುಸ್ಲಿಂರ ವಿರುದ್ದ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ ಆರೋಪದ ಮೇರೆಗೆ ಬಂಧಿತನಾಗಿರುವ ಸತೀಶ್ ಅ. ಪಾಂಡುರಂಗ ಪರ ಜಾಮೀನು ಕೋರಿ ಮೈಸೂರಿನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.ಸತೀಶ್ ಜಾಮೀನು ಕೋರಿ ಅವರ ಪರ ವಕೀಲರು, ಮೈಸೂರಿನ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ವೇಳೆ ಸರ್ಕಾರಿ ವಕೀಲರು, ಜಾಮೀನು ನೀಡಲು ಆಕ್ಷೇಪ ವ್ಯಕ್ತಪಡಿಸಿ ಮತ್ತೆ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ನೀಡುವಂತೆ ಮನವಿ ಮಾಡಿದರು. ವಾದ- ವಿವಾದ ಆಲಿಸಿದ ನ್ಯಾಯಾಧೀಶರು, ಆರೋಪಿ ಸತೀಶ್ ನನ್ನು ಶುಕ್ರವಾರ ಕೋರ್ಟ್ ಗೆ ಹಾಜರುಪಡಿಸುವಂತೆ ಆದೇಶಿಸಿ ವಿಚಾರಣೆ ಮುಂದೂಡಿದರು.